SSLC ಪರೀಕ್ಷೆ ರದ್ದು ಮಾಡಿ : ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಬೇಡಿ : ಸರಕಾರ,‌ ಸಚಿವರನ್ನು ತರಾಟೆಗೆ ತೆಗೆದುಕೊಂಡ ಕುಮಾರ‌ ಸ್ವಾಮಿ

ಬೆಂಗಳೂರು : ಕೊರೊನಾ‌‌ ವೈರಸ್ ಸೋಂಕಿನ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ‌, ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ‌ನಡೆಸಲು ಮುಂದಾಗಿರುವ ಶಿಕ್ಷಣ‌‌‌ ಸಚಿವ ಸುರೇಶ್ ಕುಮಾರ್ ಅವರ‌ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ‌ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋವಿಡ್ ಹಿನ್ನೆಲೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಮುಂದಾಗಿರುವುದು ರಾಜ್ಯ ಸರ್ಕಾರದ ಬುದ್ಧಿಭ್ರಮಣೆಯ ನಿರ್ಧಾರ. ಮತಿಗೆಟ್ಟಂತೆ ವರ್ತಿಸುತ್ತಿ ರುವ ಶಿಕ್ಷಣ ಸಚಿವರ ಐಲು-ಪೈಲು ನಿರ್ಧಾರ ಕಂಡು ರಾಜ್ಯದ ಜನತೆ ಹಾದಿ ಬೀದಿಯಲ್ಲಿ ನಗಾಡುವಂತಾಗಿದೆ.  ಸರ್ಕಾರ ತಕ್ಷಣ ಇಂತಹ ಮತಿ ಹೀನ ನಿರ್ಧಾರದಿಂದ ಹಿಂದೆ ಸರಿಯಬೇಕು. ಪಿಯುಸಿ ಮಕ್ಕಳಿಗೆ ಪರೀಕ್ಷೆ ಇಲ್ಲ. ಎಸ್ ಎಸ್ ಎಲ್ ಸಿ ಮಕ್ಕಳಿಗೆ ಸೀಮಿತ ವಿಷಯಗಳ ಪರೀಕ್ಷೆ ಎಂಬ ಮೊಂಡುತನವನ್ನು ಸರ್ಕಾರ ಕೈಬಿಡಬೇಕು. ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡುವುದನ್ನು ಬಿಟ್ಟು, ಶಿಕ್ಷಣ ಸಚಿವರು ಎಡಬಿಡಂಗಿ ನಿರ್ಧಾರ ತೆಗೆದು ಕೊಂಡಿದ್ದಕ್ಕೆ  ಮುಖ್ಯಮಂತ್ರಿಗಳು ಕಡಿವಾಣ ಹಾಕಬೇಕು ಎಂದು ಟ್ವೀಟ್ ಮೂಲಕ‌ ತಿಳಿಸಿದ್ದಾರೆ.

ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡಿ ಅವರಿಗಿಂತ ಚಿಕ್ಕವರಾದ ಎಸ್ಎಸ್ಎಲ್ ಸಿ ವಿದ್ಯಾರ್ಥಿ ಗಳಿಗೆ ಪರೀಕ್ಷೆ ನಡೆಸುವುದು ಸರಿಯಲ್ಲ. ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಬೇಡಿ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಮಕ್ಕಳಿಗೆ ಏಕರೂಪ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಬೇಕು. ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿದ್ದಕ್ಕೆ ಪ್ರಧಾನಮಂತ್ರಿಯ ‘ಗುಮ್ಮ’ ಕಾರಣ. ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವ ಬೃಹಸ್ಪತಿ ಶಿಕ್ಷಣ ಸಚಿವರೋ? ಪೋಷಕರು, ವಿದ್ಯಾರ್ಥಿಗಳ ತಾಳ್ಮೆ ಕೆಣಕುವ ಪರೀಕ್ಷಾ ಮಂತ್ರಿಯೋ ಎಂದು ತರಾಟೆಗೆ ತೆಗೆದಕೊಂಡಿದ್ದಾರೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ವಿಷಯದಲ್ಲಿ ಮೌನಿ ಆಗಿರುವ ಶಿಕ್ಷಣ ಸಚಿವರು ಬಿಸಿ ಊಟ ಸಿಗದೆ ಕಂಗಾಲಾಗಿರುವ ಬಡ ವಿದ್ಯಾರ್ಥಿಗಳ ಬಗ್ಗೆ ಮಾತನಾಡುವುದಿಲ್ಲ. ಪರೀಕ್ಷೆಯಲ್ಲಿ ಪಾಸಾಗುವ ಏಳೆಂಟು ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನಾಯಸ ವಾಗಿ ಸೀಟು ದಕ್ಕಿಸಿಕೊಳ್ಳಲು ವ್ಯವಸ್ಥೆ ಮಾಡುವ ಕಡೆ ಚಿತ್ತ ಹರಿಸಲಿ ಎಂದು ಕುಮಾರಸ್ಚಾಮಿ ಕಿವಿಮಾತು ಹೇಳಿದ್ದಾರೆ.

Comments are closed.