ಕರ್ನಾಟಕದಲ್ಲಿ ಜುಲೈ 1 ಶೈಕ್ಷಣಿಕ ಚಟುವಟಿಕೆ ಆರಂಭ : ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ

ಬೆಂಗಳೂರು : ರಾಜ್ಯದಲ್ಲಿ ಜುಲೈ 1 ರಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಯನ್ನು ಆರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಜೂನ್ 15 ರಿಂದ ಶೈಕ್ಷಣಿಕ ಚಟುವಟಿಕೆ ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಇದೀಗ ಜೂನ್ 14 ರ ವರೆಗೆ ಲಾಕ್ ಡೌನ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಶಾಲಾರಂಭವನ್ನು 15 ದಿನ ಮುಂದೂಡಿಕೆ ಮಾಡಿದೆ.

ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಅನುವಾಗುವಂತೆ, ಶೈಕ್ಷಣಿಕ ಅವಧಿಗಳು, ರಜಾ ದಿನಗಳು ಮತ್ತು ವಾರ್ಷಿಕ ಕಾರ್ಯಸೂಚಿಯ ಕುರಿತು ಆದೇಶದಲ್ಲಿ ತಿಳಿಸಲಾಗಿದೆ.

ಮೊದಲ ಅವಧಿ ಜುಲೈ 1 ರಿಂದ ಅಕ್ಟೋಬರ್ 9 ರ‌ವರೆಗೆ ಹಾಗೂ ಎರಡನೇ ಅವಧಿ  ಅಕ್ಟೊಬರ್ 21 ರಿಂದ ದಿನಾಂಕ ಎಪ್ರಿಲ್ 30ವರಗೆ ನಡೆಯಲಿದೆ. ಅಕ್ಟೋಬರ್ 10 ರಿಂದ 20ರ‌ ವರೆಗೆ ದಸರಾ‌ ರಜೆ‌ ಹಾಗೂ ಮೇ‌ 1 ರಿಂದ ಮೇ 28 ರ‌ ವರೆಗೆ ಬೇಸಿಗೆ ರಜೆಯನ್ನು ನಿಗದಿಪಡಿಸಲಾಗಿದೆ.

ಜೂನ್ 15 ರಿಂದ ದಾಖಲಾತಿ‌ ಆರಂಭಿಸಿ, ಅಗಸ್ಟ್ 31ರ ಒಳಗೆ ಮುಕ್ತಾಯಗೊಳಿಸುವಂತೆ ಸೂಚಿಸಿದೆ. ಅಲ್ಲದೇ ಶೈಕ್ಷಣಿಕ ಚಟುವಟಿಕೆಯನ್ನು ಪರ್ಯಾಯ ಮಾಧ್ಯಮ ಗಳಾದ ಸಂವೇದ, ಬಾನುಲಿ, ಆನ್ ಲೈನ್ ಮತ್ತು ಇತರ ಆಫ್ ಲೈನ್ ಮಾರ್ಗಗಳ ಕಲಿಕೆ ಮಾಡುವಂತೆ ಸೂಚನೆ ನೀಡಲಾಗಿದೆ.

Comments are closed.