Zika Virus : 15 ಕ್ಕೂ ಅಧಿಕ ಮಂದಿಯಲ್ಲಿ ಜಿಕಾ ವೈರಸ್‌ ಪತ್ತೆ : ಕೇರಳಕ್ಕೆ ಕೇಂದ್ರ ತಂಡ ಭೇಟಿ

ತಿರುವನಂತಪುರಂ : ಕೊರೊನಾ ವೈರಸ್‌ ಸೋಂಕಿನ ಬೆನ್ನಲ್ಲೇ ಕೇರಳದಲ್ಲಿ ಜಿಕಾ ವೈರಸ್‌ ಸೋಂಕಿನ ಪ್ರಕರಣ ಹೆಚ್ಚುತ್ತಿದೆ. ಇದೀಗ 15 ಮಂದಿಗೆ ಜಿಕಾ ವೈರಸ್‌ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಿದ್ದು, ಕೇಂದ್ರದ ತಜ್ಞರ ತಂಡ ಕೇರಳಕ್ಕೆ ಭೇಟಿ ನೀಡಿದೆ.

ಅನಾರೋಗ್ಯಕ್ಕೆ ತುತ್ತಾಗಿದ್ದ 24 ವರ್ಷದ ಗರ್ಭಿಣಿ ಮಹಿಳೆ ಜಿಕಾ ವೈರಸ್‌ ಗೆ ತುತ್ತಾಗಿರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ರೋಗ ಲಕ್ಷಣ ಹೊಂದಿರುವವರನ್ನುತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೇರಳದಲ್ಲಿ ಈವರೆಗೆ 15 ಜನರಿಗೆ ಜಿಕಾ ವೈರಸ್ ಇರುವುದು ಪತ್ತೆಯಾಗಿದೆ. ರೋಗ ಪತ್ತೆಯಾದ 15 ಜನರಲ್ಲಿ 14 ಮಂದಿ ಖಾಸಗಿ ಆಸ್ಪತ್ರೆಯ ನೌಕರರು ಎಂದು ತಿಳಿದುಬಂದಿದೆ.

ಮಹಿಳೆಯಿಂದಲೇ ಈ ವೈರಸ್‌ ಹರಡಿರುವ ಸಾಧ್ಯತೆಯೂ ಇದೆ. ಅಲ್ಲದೇ ವೈರಸ್‌ ಗೆ ತುತ್ತಾಗಿರುವವರೆಲ್ಲಾ ತಿರುವನಂತಪುರಂ ಮಹಾನಗರ ಪಾಲಿಕೆಯ ವ್ಯಾಪ್ತಿಯವರೇ ಆಗಿದ್ದಾರೆ. ಇನ್ನು ಸೊಳ್ಳೆಗಳ ಮೂಲಕ ಹೆಚ್ಚಿನ ಜನರು ವೈರಸ್ ಸೋಂಕಿಗೆ ಒಳಗಾಗಬಹುದು ಎಂದು ಆರೋಗ್ಯ ಸಚಿವಾಲಯ ತೀರ್ಮಾನಿಸಿದೆ.

ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ರೋಗವನ್ನು ತಡೆಗಟ್ಟಲು ಸಹಾಯ ಮಾಡಲು ಕೇಂದ್ರವು ಆರಂಭಿಕ ತಂಡವನ್ನು ಕಳುಹಿಸಿದೆ. ಅಲ್ಲದೇ ಕೇಂದ್ರ ಸರಕಾರ ಕೇರಳಕ್ಕೆ ಬೇಕಾದ ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿದೆ. ಕೇಂದ್ರದ ತಂಡ ಸಾಂಕ್ರಾಮಿಕ ರೋಗದ ಕುರಿತು ಅಧ್ಯಯನ ನಡೆಸಿ ಕೇಂದ್ರ ಸರಕಾರಕ್ಕೆ ವರದಿಯನ್ನು ನೀಡಲಿದೆ. ಅಲ್ಲದೇ ರಾಜ್ಯ ಸರಕಾರಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚನೆಯನ್ನು ನೀಡಲಿದೆ.

ಕೇರಳದಲ್ಲಿ ದಿನ ಕಳೆದಂತೆ ಜಿಕಾ ವೈರಸ್‌ ವ್ಯಾಪಕವಾಗಿ ಹರಡುತ್ತಿರೋದು ಆತಂಕವನ್ನು ಮೂಡಿಸಿದೆ. ಒಂದೆಡೆ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನೊಂದೆಡೆ ಜಿಕಾ ವೈರಸ್‌ ಆತಂಕವನ್ನು ಮೂಡಿಸಿದೆ.

Comments are closed.