ಲಾಕ್ ಡೌನ್ ಹಿನ್ನೆಲೆ 1,610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ : ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು, ಹೂವು ಬೆಳೆಗಾರರಿಗೆ ಬಂಪರ್

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೇರಿದ್ದ ಲಾಕ್ ಡೌನ್ ನಿಂದಾಗಿ ಜನರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಹೂವು ಬೆಳೆಗಾರರು, ರಿಕ್ಷಾ , ಟ್ಯಾಕ್ಸಿ ಚಾಲಕರು, ಕ್ಷೌರಿಕರು, ಅಗಸರು, ನೇಕಾರರು, ಕಟ್ಟಡ ಕಾರ್ಮಿಕರಿಗೆ ಬಂಪರ್ ಗಿಫ್ಟ್ ನೀಡಲಾಗಿದೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದಾಗಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ 11,687 ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆದಿದ್ದ ಬೆಳೆ ನಾಶವಾಗಿದ್ದು, ಬೆಳೆಗಾರರು ಸಂಕಷ್ಟದಲ್ಲಿದ್ದು, ಪ್ರತೀ ಹೆಕ್ಟೇರ್ ಗೆ 25,000 ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೇ ಹಣ್ಣು ಬೆಳೆಗಾರರು ಸಂಕಷ್ಟದಲ್ಲಿದ್ದು, ವಿಶೇಷ ಪ್ಯಾಕೇಜ್ ಘೋಷಣೆಯ ಕುರಿತು ಚಿಂತನೆ ನಡೆಯುತ್ತಿದೆ.

ರಾಜ್ಯದಲ್ಲಿರುವ 7.50 ಲಕ್ಷ ಆಟೋ, ಟ್ಯಾಕ್ಸಿ, ಚಾಲಕರಿಗೆ, 60,000 ಅಗಸರಿಗೆ ಹಾಗೂ 2.30 ಲಕ್ಷ ಕ್ಷೌರಿಕರಿಗೂ ತಲಾ 5,000 ರೂಪಾಯಿ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ 15.8 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು ಈ ಪೈಕಿ 11.8 ಲಕ್ಷ ಕಾರ್ಮಿಕರಿಗೆ ಈಗಾಗಲೇ 2,000 ರೂಪಾಯಿ ಪಾವತಿ ಮಾಡಲಾಗಿದ್ದು, ಇನ್ನೂ 4 ಲಕ್ಷ ಕಟ್ಟಡ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯಲಿದೆ. ಅಲ್ಲದೇ ಕಟ್ಟಡ ಕಾಮಗಾರಿಗಳಿಗೆ ಅನುಕೂಲವಾಗುವಂತೆ ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಇನ್ನೂ 3,000 ರೂಪಾಯಿ ಘೋಷಣೆ ಮಾಡಲಾಗಿದ್ದು, ಕಟ್ಟಡ ಕಾರ್ಮಿಕರಿಗೆ ತಲಾ 5,000 ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.

ಕೊರೊನಾ ಸೋಂಕಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಭರ್ಜರಿ ಗಿಫ್ಟ್ ನೀಡಿದೆ. ಈಗಾಗಲೇ 109 ಕೋಟಿ ವೆಚ್ಚದಲ್ಲಿ ಸಾಲಮನ್ನಾ ಘೋಷಣೆ ಮಾಡಲಾಗಿದ್ದು, ಬಾಕಿ ಉಳಿದ ಹಣವನ್ನು ಶೀಘ್ರದಲ್ಲಿಯೇ ಪಾವತಿ ಮಾಡಲಾಗುತ್ತಿದೆ. ನೇಕಾರರ ಅನುಕೂಲಕ್ಕೆ ಹೊಸ ಸಾಲ ನೀಡಲು ಚಿಂತನೆ ನಡೆಸಲಾಗಿದ್ದು, ಜನವರು 2019ರಿಂದ ಮಾರ್ಚ್ 2019ರ ಅವಧಿಯಲ್ಲಿ ನೇಕಾರರು ಪಡೆದಿರುವ 1 ಲಕ್ಷ ರೂಪಾಯಿವರೆಗಿನ ಸಾಲವನ್ನು ಸರಕಾರ ಮನ್ನಾ ಮಾಡಿದೆ.

ಈಗಾಗಲೇ ಸಾಲ ಮರುಪಾವತಿ ಮಾಡಿರುವವರ ಹಣವನ್ನು ಅವರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ರೈತರಿಗೆ ಅನುಕೂಲ ಕಲ್ಪಿಸಿದಂತೆ ನೇಕಾರ ಸಮ್ಮಾನ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯ ಮೂಲಕ ನೇಕಾರರ ಖಾತೆಗಳಿಗೂ 2,000 ರೂಪಾಯಿ ವರ್ಗಾವಣೆ ಮಾಡುವುದಾಗಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಕಾರ್ಖಾನೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅತೀ ಸಣ್ಣ, ಸಣ್ಣ ಹಾಗೂ ಮದ್ಯಮ ಕೈಗಾರಿಕೆಗಳ ವಿದ್ಯುತ್ ಶುಲ್ಕಗಳ ಮೇಲೆ ವಿಧಿಸಲಾಗುತ್ತಿದ್ದ ಫಿಕ್ಸ್ ಚಾರ್ಜ್ ನ್ನು ಮನ್ನಾ ಮಾಡಲಾಗಿದೆ. ಅಲ್ಲದೇ ಜನಸಾಮಾನ್ಯರಿಗೆ ವಿದ್ಯುತ್ ಶುಲ್ಕ ಪಾವತಿಯನ್ನು ಜೂನ್ ತಿಂಗಳವರೆಗೂ ವಿನಾಯಿತಿಯನ್ನು ನೀಡಲಾಗಿದೆ. ನಿಗದಿತ ಅವಧಿಯಲ್ಲಿ ವಿದ್ಯುತ್ ಶುಲ್ಕ ಪಾವತಿ ಮಾಡುವವರಿಗೆ ಶೇ.1ರ ರಿಯಾಯಿತಿಯನ್ನು ಘೋಷಿಸಲಾಗಿದೆ.

ಅಲ್ಲದೇ ತಡವಾಗಿ ಪಾವತಿ ಮಾಡುವವರಿಗೆ ವಿಧಿಸಲಾಗುತ್ತಿದ್ದ ಬಡ್ಡಿದರದಲ್ಲಿಯೂ ಶೇ.50 ರಿಂದ ಶೇ.80ರಷ್ಟು ವಿನಾಯಿತಿ ನೀಡಲು ಮುಂದಾಗಿದೆ. ಇನ್ನು ಮುಂಗಡವಾಗಿ ವಿದ್ಯುತ್ ಬಿಲ್ ಪಾವತಿ ಮಾಡುವವರಿಗೆ ಶೇ.6 ರಷ್ಟು ವಿನಾಯಿತಿಯನ್ನು ನೀಡುವುದಾಗಿ ಸರಕಾರ ಘೋಷಿಸಿದ್ದು, ಕಂದಾಯ ಬಾಕಿಯನ್ನು ಪಾವತಿ ಮಾಡಲು ಸರಕಾರ ವಿನಾಯಿತಿಯನ್ನು ನೀಡಿದ್ದು, ಮೂರು ಕಂತುಗಳಲ್ಲಿ ಕಂದಾಯ ಬಾಕಿ ಹಣವನ್ನು ಪಾವತಿ ಮಾಡಲು ಅವಕಾಶ ಕಲ್ಪಿಸಿದೆ.

Leave A Reply

Your email address will not be published.