ಗಡಿಯಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ನೆರವಾದ ಜಿಲ್ಲಾಡಳಿತ : ಎಲ್ಲಾ ಪ್ರಯಾಣಿಕರಿಗೂ ಹೋಮ್ ಕ್ವಾರಂಟೈನ್

0

ಕುಂದಾಪುರ : ಲಾಕ್ ಡೌನ್ ನಲ್ಲಿ ಸಿಲುಕಿ ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದವರು ಗಡಿಭಾಗದಲ್ಲಿ ಬಂಧಿಯಾಗಿದ್ದರು. ಸುಮಾರು 8 ಗಂಟೆಗಳ ತರುವಾಯ ಉಡುಪಿ ಜಿಲ್ಲಾಡಳಿತ ಎಲ್ಲಾ 66 ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸಿ ಮನೆಗೆ ಕಳುಹಿಸಿಕೊಟ್ಟಿದೆ. ಆದರೆ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಪಾಲಿಸುವಂತೆ ಖಡಕ್ ಆದೇಶ ನೀಡಿದೆ.

ಕೊರೊನಾ ಲಾಕ್ ಡೌನ್ ನಲ್ಲಿ ಬಂಧಿಯಾಗಿದ್ದ ಕಾರ್ಮಿಕರು ಹಾಗೂ ನಿವಾಸಿಗಳನ್ನು ತಮ್ಮ ಊರುಗಳಿಗೆ ತಲುಪಿಸಲು ಕೇಂದ್ರ ಸರಕಾರ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಉಡುಪಿ ಜಿಲ್ಲೆಯ ಪ್ರಯಾಣಿಕರು ತಮ್ಮೂರಿನತ್ತ ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ನಿನ್ನೆ ರಾತ್ರಿ ಹೊರಟಿದ್ದರು.

ಬೆಳಗಿನ ಜಾವ 3.30ರ ಸುಮಾರಿಗೆ ಉಡುಪಿ ಜಿಲ್ಲೆಯ ಗಡಿಭಾಗವಾಗಿರುವ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರು 2 ಬಸ್ಸುಗಳನ್ನು ತಡೆದು ನಿಲ್ಲಿಸಿದ್ದಾರೆ. ಈ ಕುರಿತು ನ್ಯೂಸ್ ನೆಕ್ಸ್ಟ್ ವರದಿ ಪ್ರಕಟಿಸಿತ್ತು. ಉಡುಪಿ ಜಿಲ್ಲಾಡಳಿತ ಬೆಂಗಳೂರಿನಿಂದ ಬಂದಿದ್ದ ಪ್ರಯಾಣಿಕರಿಗೆ ಕೊನೆಗೂ ತಮ್ಮೂರಿಗೆ ತೆರಳಲು ಅವಕಾಶ ಕಲ್ಪಿಸಿದೆ.

ಹೊಸಂಗಡಿಗೆ ಆಗಮಿಸಿದ್ದ ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಬಸ್ಸಿನಲ್ಲಿದ್ದ ಎಲ್ಲಾ 66 ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸಿದ್ದಾರೆ. ಎಲ್ಲರ ಕೈಗೂ ಹೋಮ್ ಕ್ವಾರಂಟೈನ್ ಸೀಲ್ ಒತ್ತಿದ್ದಾರೆ. ಯಾವುದೇ ಕಾರಣಕ್ಕೂ 14 ದಿನಗಳ ಕಾಲ ಮನೆಯಿಂದ ಹೊರಗೆ ಬಾರದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಅಲ್ಲದೇ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ. ಒಟ್ಟಿನಲ್ಲಿ ಬೆಂಗಳೂರಿನಿಂದ ಉಡುಪಿಗೆ ಬಂದಿದ್ದ ಪ್ರಯಾಣಿಕರು ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Leave A Reply

Your email address will not be published.