ಶಿಷ್ಯನನ್ನೇ ಸಿಎಂ ಮಾಡಿ….ಡಿಕೆಶಿಯನ್ನು ಕೆಪಿಸಿಸಿಯಲ್ಲೇ ಬಿಡಿ: ಹೈಕಮಾಂಡ್ ಮುಂದೇ ಸಿದ್ಧು ಬೇಡಿಕೆ!!

CM Seat: ರಾಜ್ಯದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ನಲ್ಲೂ ಗದ್ದುಗೆ ಗುದ್ದಾಟ ಜೋರಾಗಿದೆ. ಸಿಎಂ ಸ್ಥಾನದಲ್ಲಿರೋ ಸಿದ್ಧರಾಮಯ್ಯರನ್ನು (Siddaramaiah)ಕೆಳಕ್ಕಿಳಿಸಿ ತಾವೊಮ್ಮೆ ಸಿಎಂ ಪಟ್ಟಕ್ಕೆ ಏರಬೇಕೆಂಬ ಲೆಕ್ಕಾಚಾರದಲ್ಲಿದ್ದಾರೆ ಕಾಂಗ್ರೆಸ್ ನ ಪ್ರಭಾವಿ ನಾಯಕ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar).

ಹಾಗಿದ್ದರೇ ಸಿದ್ದು ಬಳಿಕ ಸಿಎಂ ಡಿಕೆಶಿನಾ? ಅನ್ನೋ ಚರ್ಚೆಗೆ ಇಲ್ಲೊಂದು ಟ್ವಿಸ್ಟ್ ಇದೆ. ಸಿಎಂ ಯಾರಾದ್ರೂ ಸರಿ ಆದರೆ ಡಿಕೆ ಮಾತ್ರ ಪಟ್ಟಕ್ಕೆ ಬರಬಾರದು ಅನ್ನೋದು ಕಾಂಗ್ರೆಸ್ ನಾಯಕರ ನಿಲುವು ಎನ್ನಲಾಗ್ತಿದ್ದು, ಇದಕ್ಕೆ ಖುದ್ದು ಸಿಎಂ ಸಿದ್ಧು ಕೂಡ ಬೆಂಬಲ‌ನೀಡಿದ್ದಾರಂತೆ ಮಾತ್ರವಲ್ಲ ತಮ್ಮ ಶಿಷ್ಯರಲ್ಲೇ ಯಾರಾದ್ರೂ ಸಿಎಂ ಆಗಬೇಕು ಅನ್ನೋ ಪಟ್ಟು ಹಿಡಿದಿದ್ದಾರಂತೆ.

ಬಿಜೆಪಿ ಯಲ್ಲಿ ಐದು ವರ್ಷದ ಸರ್ಕಾರಕ್ಕೆ ಇಬ್ಬರು,ಮೂರು ಸಿಎಂ ಅನ್ನೋದು ಕಾಮನ್ ಅನ್ನೋ ಸ್ಥಿತಿ ಇತ್ತು. ಆದರೀಗ ಈ ಚಾಳಿ ಕಾಂಗ್ರೆಸ್ ಗೂ ಅಂಟಿದಂತಿದೆ. ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ಜೋರಾಗಿದೆ. ಆಂತರಿಕ ಒಪ್ಪಂದದಂತೆ ಸಿಎಂ ಬದಲಾವಣೆ ಆಗುತ್ತೆ ಅನ್ನೋ ಚರ್ಚೆಗೆ ನಾಯಕರ ದೆಹಲಿ ದೌಡು ಸಾಕ್ಷಿ ಒದಗಿಸುತ್ತಿದೆ.

ಚುನಾವಣೆಯಲ್ಲಿ ಹಣ ಖರ್ಚು ಮಾಡಿ, ಪಕ್ಷಕ್ಕೆ ಅಧಿಕಾರ ಕೊಡಿಸೋದ್ರಲ್ಲಿ ಡಿಕೆಶಿಯವರ ದೊಡ್ಡ ಕೈವಾಡವಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ದಾನಕ್ಕೆ ಪ್ರತಿಫಲಾಪೇಕ್ಷೆ ಇರಬಾರದಂತೆ. ಆದರೆ ಇಲ್ಲಿ ಡಿಕೆಶಿ ಮಾತ್ರ ಪಕ್ಷ ಅಧಿಕಾರಕ್ಕೆ ತಂದಿದ್ದೆ ನಾನು ಸಿಎಂ ಆಗೋಕೆ ಅನ್ನೋ ತರ ವರ್ತಿಸುತ್ತಿರೋದಂತು ಸುಳ್ಳಲ್ಲ. ಹೀಗಾಗಿ ಕಾಂಗ್ರೆಸ್ ನ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನ್ನೋದು ಅಘೋಷಿತ ನಿರ್ಣಯದಂತೆ ಆದರಿಸಲ್ಪಡುತ್ತಿದೆ.

ಪ್ರಭಾವಿ ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದು, ಬೆಂಗಳೂರಿನಲ್ಲಿ ನಡಿಗೆ ಸೇರಿದಂತೆ ಮುಖ್ಯಮಂತ್ರಿಗಳಂತೆ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಡಿಕೆಶಿ ಸಿಎಂಗೆ ಸ್ಪರ್ಧೆ ಒಡ್ಡುವಂತೆ ಕೆಲಸ ಮಾಡ್ತಿರೋದು ಇಲ್ಲೊಂದು ರೇಸ್ ನಡೀತಿದೆ ಅನ್ನೋದಕ್ಕೆ ಸಾಕ್ಷಿ ನೀಡ್ತಿದೆ.

Also Read: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ? ವರುಣಾ ಕ್ಷೇತ್ರದಲ್ಲಿ ಮತ್ತೆ ಕಣಕ್ಕೆ

ಆದರೆ ಸಿಎಂ ಸಿದ್ಧರಾಮಯ್ಯನವರ ತಲೆಯಲ್ಲಿ ಬೇರೆಯದೇ ಲೆಕ್ಕಾಚಾರಗಳು ಓಡ್ತಿದೆ ಅನ್ನೋದು ಅವರ ಆಪ್ತರ ಲೆಕ್ಕಾಚಾರ. ಬಿಜೆಪಿ ನೂರು ಟೀಕೆಗಳಾಚೆಗೂ ಸಿಎಂ ಸಿದ್ಧರಾಮಯ್ಯನವರು ಕ್ಲೀನ್ ಇಮೇಜ್ ಉಳಿಸಿಕೊಂಡು ಬಂದಿದ್ದಾರೆ. ಸಿಎಂ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಜನಪರವಾದ ಯೋಜನೆಗಳನ್ನು ನೀಡಿದ್ದಾರೆ. ಈಗ ತಾವು ಸಿಎಂ ಸ್ಥಾನದಿಂದ ಇಳಿಯಲೇ ಬೇಕಾದಂತ ಸ್ಥಿತಿ ಬಂದರೇ ಡಿಕೆಶಿ ಸಹಜವಾಗಿ ಸಿಎಂ ಸ್ಥಾನಕ್ಕೆ ಬರುತ್ತಾರೆ. ಇದರಿಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಿಎಂಗಿದ್ದ ಕ್ಲೀನ್ ಇಮೇಜ್ ಗೆ ಡ್ಯಾಮೇಜಾಗುತ್ತದೆ.

ಅಕ್ರಮ ಆಸ್ತಿ ಗಳಿಕೆ, ತೆರಿಗೆ ವಂಚನೆ ಸೇರಿದಂತೆ ಹಲವು ಪ್ರಕರಣ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನಕ್ಕೇರಿದರೇ ಜೈಲಿಗೆ ಹೋಗಿಬಂದವರು ಸಿಎಂ ಎಂದು ಬಿಜೆಪಿಗೆ ಟೀಕಿಸುತ್ತಿದ್ದ ಸಂಗತಿ ತಮಗೆ ತಿರುಗುಬಾಣವಾಗುತ್ತದೆ. ತಮ್ಮ ಜನಪರ ಯೋಜನೆಗಳು ನಿಲ್ಲುತ್ತವೆ.

ಎಲ್ಲದಕ್ಕಿಂತ ಮುಖ್ಯವಾಗಿ ತಮ್ಮ ಪುತ್ರ ಯತೀಂದ್ರ ಸಿದ್ಧರಾಮಯ್ಯ ಸೇರಿದಂತೆ ಆಪ್ತರ ಸ್ಥಾನಮಾನಗಳಿಗೂ ಕುತ್ತು ಬರುತ್ತದೆ. ಹೀಗಾಗಿ ಯಾರಾದ್ರೂ ಸಿಎಂ ಆಗಲಿ ಡಿಕೆ ಬೇಡ ಎಂಬ ತೀರ್ಮಾನ ಸಿದ್ಧು ಬಣ್ಣದ್ದು ಎನ್ನಲಾಗ್ತಿದೆ.

ಒಂದೊಮ್ಮೆ ಸಿಎಂ ಸ್ಥಾನವನ್ನು ತೊರೆಯಲೇ ಬೇಕಾದ ಸ್ಥಿತಿ ಬಂದರೇ ಅಹಿಂದ ಮತ್ತು ದಲಿತ ಸಿಎಂ ಚರ್ಚೆ ಮುನ್ನಲೆಗೆ ತರಲು ಸಿದ್ಧು ರಣತಂತ್ರ ರೂಪಿಸಿದ್ದಾರೆ. ಮಾತ್ರವಲ್ಲ ತಮ್ಮ ಪರಮಾಪ್ತ ಹಾಗೂ ಅಹಿಂದ ನಾಯಕ ಸತೀಶ್ ಜಾರಕಿಹೊಳಿ ಯವರನ್ನು ಸಿಎಂ ಸ್ಥಾನಕ್ಕೆ ಏರಿಸಲು ಸರ್ಕಸ್ ಆರಂಭಿಸಿದ್ದಾರೆ..

Also Read: ಹೊಸಕೋಟೆಯಲ್ಲಿ ಭ್ರೂಣ ಹತ್ಯೆ : ಫಾಕ್ಸ್‌ಕಾನ್‌ ಕಂಪೆನಿಗೆ ಸಂಕಷ್ಟ

ಸತೀಶ್ ಜಾರಕಿಹೊಳಿ ಪ್ರಗತಿಪರ ಹಾಗೂ ಅಹಿಂದ ನಾಯಕರು. ರಾಜ್ಯ ರಾಜಕಾರಣದಲ್ಲಿ ಕ್ಲೀನ್ ಇಮೇಜ್ ಉಳಿಸಿಕೊಂಡಿದ್ದಾರೆ. ಅಲ್ಲದೇ ಅವರಿಗೆ ಉತ್ತರ ಕರ್ನಾಟಕ ಭಾಗದ ಶಾಸಕರುಗಳ ಬೆಂಬಲವಿದೆ. ಅಲ್ಲದೇ ಹಿಂದುಳಿದ ವರ್ಗಗಳನ್ನು ಕಡೆಗಣಿಸುತ್ತಿದೆ ಎಂಬ ಶಾಸಕರ ಅಸಮಧಾನಕ್ಕೂ ಬೆಲೆ ಬರಲಿದೆ ಎಂಬ ಕಾರಣ ಮುಂದಿಟ್ಟು ಸತೀಶ್ ಗೆ ಪಟ್ಟ ಕಟ್ಟಲು ಸಿಎಂ ಲೆಕ್ಕಾಚಾರ ಹಾಕಿದಂತಿದೆ.

ಇದರ ಫಲವಾಗಿಯೇ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದು, ಹೈಕಮಾಂಡ್ ಭೇಟಿ ಮಾಡಲಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲೂ ಕುರ್ಚಿ ಕದನ ಜೋರಾಗಿದ್ದು, ಮ್ಯೂಸಿಕ್ ಚೇರ್ ನಂತೆ ನಡಿತೀರೋ ಈ ಗುದ್ದಾಟದಲ್ಲಿ ಯಾರು ಗೆದ್ದು ಬೀಗ್ತಾರೆ ಕಾದು ನೋಡಬೇಕಿದೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories