BSY : ಸಿಎಂ ಯಡಿಯೂರಪ್ಪಗೆ ಹೈಕಮಾಂಡ್‌ ಬುಲಾವ್‌..!!

ಬೆಂಗಳೂರು : ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್‌ ಬುಲಾವ್‌ ನೀಡಿದೆ. ಹೀಗಾಗಿ ಜುಲೈ 16ರಂದು ಯಡಿಯೂರಪ್ಪ ದೆಹಲಿಗೆ ತೆರಳುವುದು ಬಹುತೇಕ ಫಿಕ್ಸ್‌ ಆಗಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿಬರುತ್ತಲೇ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕೂಡ ಅವಧಿ ಮುಗಿಯುವವರೆಗೂ ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಅನ್ನೋ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆಯಲ್ಲಿ ಸಿಎಂ ಬದಲಾವಣೆಗೆ ಕಸರತ್ತು ನಡೆಯುತ್ತಲೇ ಇದೆ. ಈ ನಡುವಲ್ಲೇ ಬಿಜೆಪಿ ವರಿಷ್ಠರು ಸಿಎಂ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಯಿಸಿಕೊಳ್ಳುತ್ತಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.

ಸಿಎಂ ಯಡಿಯೂರಪ್ಪ ಅವರು ಜುಲೈ 16 ರಂದು ದೆಹಲಿಗೆ ಭೇಟಿ ನೀಡಲಿದ್ದು ಒಂದು ದಿನ ಅಲ್ಲಿಯೇ ವಾಸ್ತವ್ಯ ಹೂಡಿ. ಜುಲೈ 17ರಂದು ರಾಜ್ಯಕ್ಕೆ ವಾಪಾಸಾಗುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಆದೇಶ ಇನ್ನೂ ಹೊರಬಿದ್ದಿಲ್ಲ. ಮುಂದಿನ ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡೇ ಕೇಂದ್ರದ ಹಲವು ಸಚಿವರಿಗೆ ಕೋಕ್‌ ನೀಡಿ, ಹೊಸ ಮುಖಗಳಿಗೆ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ಕರ್ನಾಟಕ ಕ್ಕೂ ಹೆಚ್ಚಿನ ಪ್ರಾಶಸ್ರ್ತ್ಯವನ್ನು ನೀಡಲಾಗಿದೆ.

ಸಿಎಂ ಯಡಿಯೂರಪ್ಪ ಅವರನ್ನು ಬದಲಾಯಿಸಿ, ಬದಲಿ ನಾಯಕರನ್ನು ನೇಮಕ ಮಾಡುವ ಕುರಿತು ಬಿಜೆಪಿ ಅಂಗಳದಲ್ಲಿ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿದೆ. ಅಲ್ಲದೇ ಬಹುತೇಕ ಬಿಜೆಪಿ ಶಾಸಕರು ಸಿಎಂ ಯಡಿಯೂರಪ್ಪ ಅವರ ಬದಲಾವಣೆ ಮಾಡುವಂತೆಯೂ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಒಂದೆಡೆ ವಯಸ್ಸಿನ ಸಮಸ್ಯೆ ಯಡಿಯೂರಪ್ಪ ಅವರನ್ನೂ ಕಾಡುತ್ತಿದೆ. ಹೀಗಾಗಿ ಯಡಿಯೂರಪ್ಪ ಅವರು ಕೂಡ ಗೌರವ ಯುತವಾಗಿಯೇ ಅಧಿಕಾರ ದಿಂದ ಇಳಿಯಲು ಸಮ್ಮತಿ ಸೂಚಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಒಂದೊಮ್ಮೆ ನಾಯಕತ್ವ ಬದಲಾವಣೆಯ ನಿಟ್ಟಿನಲ್ಲಿಯೇ ಯಡಿಯೂರಪ್ಪ ಅವರನ್ನು ದೆಹಲಿಗೆ ಹೈಕಮಾಂಡ್‌ ನಾಯಕರು ಕರೆಯಿಸಿಕೊಳ್ಳುವುದೇ ಆಗಿದ್ದಲ್ಲಿ. ಶೀಘ್ರದಲ್ಲಿಯೇ ನಾಯಕತ್ವ ಬದಲಾವಣೆಯ ಗೊಂದಲಗಳಿಗೆ ತೆರೆ ಬೀಳುವುದು ಬಹುತೇಕ ಖಚಿತ. ಇನ್ನೊಂದೆಡೆ ಕೇಂದ್ರ ಸಚಿವರಾಗಿದ್ದ ಡಿ.ವಿ. ಸದಾನಂದ ಗೌಡರ ರಾಜೀನಾಮೆಗೂ ರಾಜ್ಯದ ಮುಖ್ಯಮಂತ್ರಿ ಬದಲಾವಣೆಗೂ ಸಂಬಂಧವಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಡಿವಿಎಸ್‌ ಅವರಿಗೆ ಪಟ್ಟಕಟ್ಟುವ ಸಲುವಾಗಿಯೇ ಅವರನ್ನು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಿಸಲಾಗಿದೆ ಅನ್ನುವ ಮಾತು ಕೇಳಿಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆಗೂ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡಿರುವ ಡಿ.ವಿ.ಸದಾನಂದ ಗೌಡ ಅವರಿಗೆ ರಾಜ್ಯದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ತಟಸ್ಥರಾಗಿರುವ ನಾಯಕರ ಹುಡುಕಾಟದಲ್ಲಿರುವ ಬಿಜೆಪಿ ಸದ್ಯಕ್ಕೆ ಹೊಸಬರಿಗೆ ಮಣೆ ಹಾಕುವ ಬದಲು ಡಿ.ವಿ.ಎಸ್.‌ ಅವರಿಗೆ ಪಟ್ಟ ಕಟ್ಟಲು ತಯಾರಿ ನಡೆಸಿದೆ ಎನ್ನಲಾಗುತ್ತಿದೆ.

ಈಗಾಗಲೇ ಮುರುಗೇಶ್‌ ನಿರಾಣಿ ಅವರು ಈ ಹಿಂದೆ ನೀಡಿದ್ದ ಹೇಳಿಕೆ ಗಮನಿಸಿದ್ರೆ ಯಡಿಯೂರಪ್ಪ ನಾಯಕತ್ವದ ಬದಲಾವಣೆಗೆ ಸಮ್ಮತಿಸಿದ್ದಾರೆನ್ನಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಬಿಎಸ್‌ವೈ ವಿರೋಧಿ ಪಾಳಯ ಕೂಡ ಶೀಘ್ರದಲ್ಲಿಯೇ ನಾಯಕತ್ವ ಬದಲಾವಣೆಯಾಗುತ್ತೆ ಅನ್ನೋ ಖುಷಿಯಲ್ಲಿ ಇದ್ದಂತೆ ಕಾಣಿಸುತ್ತಿದೆ. ಒಟ್ಟಿನಲ್ಲಿ ಎಲ್ಲಾ ಗೊಂದಲಗಳಿಗೂ ಯಡಿಯೂರಪ್ಪ ದೆಹಲಿ ಪ್ರವಾಸ ಅಂತ್ಯ ಹಾಡುವುದು ಖಚಿತ.

Comments are closed.