ಸಾಧನಾ ಸಮಾವೇಶದಲ್ಲಿ ಕಣ್ಣೀರಿಟ್ಟ ಯಡಿಯೂರಪ್ಪ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೆ ಎರಡು ವರ್ಷ ಕಳೆದಿದಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಕಣ್ಣೀರಿಟ್ಟಿದ್ದಾರೆ.

ಸಾಧನಾ ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಯಾರೂ ಇಲ್ಲದ ಸಂದರ್ಭದಲ್ಲಿ ಪಕ್ಷವನ್ನು ಕಟ್ಟುವ ಕಾರ್ಯವನ್ನು ಮಾಡಿದ್ದೇನೆ. ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕೇಂದ್ರ ಮಂತ್ರಿಯಾಗಲು ಹೇಳಿದಾಗಲೂ ನಾನು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿ ಅಂದು ಹುದ್ದೆಯನ್ನು ನಿರಾಕರಿಸಿದ್ದೇನೆ. ಅಂದಿನಿಂದಲೂ ಇಂದಿನ ವರೆಗೂ ರಾಜ್ಯದಲ್ಲಿ ಪಕ್ಷವನ್ನು ಕಟ್ಟುವ ಕಾರ್ಯವನ್ನು ಮಾಡಿದ್ದೇನೆ ಎಂದರು.

ಜನಸಂಘದ ಮೂಲಕ ರೈತರ ಪರ, ದಲಿತರ ಪರ ಹೋರಾಟವನ್ನು ಮಾಡುತ್ತಲೇ ಬಂದಿದ್ದೇನೆ. ಇಂದಿಗೂ ಜನಪರ ಕಾರ್ಯದಲ್ಲಿಯೇ ನಾನು ತೊಡಗಿಸಿಕೊಂಡಿದ್ದೇನೆ. ಬೂಕನಕೆರೆಯಿಂದ ಶಿಕಾರಿಪುರಕ್ಕೆ ಸಾಗಿದ ಹಳೆಯ ನೆನಪುಗಳನ್ನು ಬಿ.ಎಸ್.ಯಡಿಯೂರಪ್ಪ ಅವರು ಮಲುಕು ಹಾಕಿದ್ದಾರೆ. ಆರ್ ಎಸ್‌ಎಸ್‌ ಪ್ರಚಾರಕನಾಗಿ ಕೆಲಸ ಆರಂಭಿಸಿ ಇಂದು ಮುಖ್ಯಮಂತ್ರಿಯ ಸ್ಥಾನವನ್ನು ಅಲಂಕರಿಸಿದ್ದೇನೆ ಎಂದರು.

ವಿಧಾನಸಭೆಯಲ್ಲಿ ಕೇವಲ ಇಬ್ಬರು ಶಾಸಕರಿದ್ದ ಸಂದರ್ಭದಲ್ಲಿ ವಸಂತ ಬಂಗೇರ ಅವರು ಪಕ್ಷವನ್ನು ತೊರೆದಾಗ ನಾನು ಒಬ್ಬಂಟಿಯಾಗಿ ಹೋರಾಟ ನಡೆಸಿದ್ದೇನೆ. ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದಾಗ ನನ್ನ ಪ್ರಾಣವನ್ನು ರಾಜ್ಯದ ಜನತೆಯ ಸೇವೆಗೆ ಮೀಸಲಿಡುವುದಾಗಿ ಹೇಳಿದ್ದಾನೆ. ಅಂತೆಯೇ ಇಂದಿಗೂ ಕೂಡ ನಡೆದುಕೊಂಡಿದ್ದೇನೆ ಎಂದಿದ್ದಾರೆ.

Comments are closed.