ಕರಾವಳಿ, ಹಳೆ ಮೈಸೂರು, ಮಂಡ್ಯ ಭಾಗದಲ್ಲಿ ಪಕ್ಷ ಸಂಘಟನೆಯ ಡಿಕೆಶಿ ಹಾದಿ ಸುಗಮವಾಗಿದೆಯೇ?

0

ಬೆಂಗಳೂರು: ಡಿಕೆಶಿ ಪ್ರತಿಜ್ಞಾ ಕಾರ್ಯಕ್ರಮ ಆಯೋಜಿಸುವ ಮೂಲಕ ಭರ್ಜರಿ ಪದಗ್ರಹಣ ಸಮಾರಂಭ ನಡೆಸಿದ್ದಾರೆ. ಆ ಮೂಲಕ ಅಧಿಕೃತವಾಗಿ ಪಕ್ಷದ ಹುದ್ದೆಗೆ ಭರ್ಜರಿಯಾಗಿ ಎಂಟ್ರಿ ನೀಡಿದ್ದಾರೆ. ಆದರೆ ಕರಾವಳಿ, ಹಳೆಮೈಸೂರು, ಮಂಡ್ಯ ಭಾಗದಲ್ಲಿ ಡಿಕೆಶಿಗೆ ಪಕ್ಷ ಸಂಘಟನೆ ಅಷ್ಟು ಸುಲಭದ ತುತ್ತಲ್ಲ ಎನ್ನುತ್ತದೆ ವರದಿಗಳು.

ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗಿದೆ. ಪ್ರತಿಜ್ಞಾ ಕಾರ್ಯಕ್ರಮವನ್ನು ಸಂಪೂರ್ಣ ಯಶಸ್ಸು ಮಾಡುವಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ನಾಯಕರು ಎಡವಿದ್ದಾರೆನ್ನುತ್ತಿದೆ ಆಂತರಿಕ ಮೂಲಗಳು. ಕೆಪಿಸಿಸಿಯನ್ನು ಮೆಚ್ಚಿಸುವ ಸಲುವಾಗಿಯೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಯೇ ಹೊರತು ಪಕ್ಷ ಸಂಘಟನೆ ಶೂನ್ಯವೆನ್ನುತ್ತಿದ್ದಾರೆ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನನುಭವಿ ಯುವ ನಾಯಕರ ಆರ್ಭಟ ಜೋರಾಗಿದೆ. ಯುವ ನಾಯಕರ ಆರ್ಭಟಕ್ಕೆ ಹಿರಿಯ ನಾಯಕರೇ ಬದಿಗೆ ಸರಿದಿದ್ದಾರೆ, ಎಐಸಿಸಿ ಕೆಪಿಸಿಪಿ ಸಂಪರ್ಕ ಹೊಂದಿ ತಳಮಟ್ಟದಲ್ಲಿ ಯಾವುದೇ ಸಂಘಟನಾತ್ಮಕ ಅನುಭವ ಹೊಂದಿರದ ಕರಾವಳಿಯ ಹಿರಿಯ ಹಾಗೂ ಪ್ರಚಾರಪ್ರಿಯ ಯುವ ನಾಯಕರೇ ಡಿಕೆಶಿ ಪಕ್ಷ ಸಂಘಟನೆಗೆ ಬಹುದೊಡ್ಡ ಸವಾಲಾಗಿದ್ದಾರೆ. ಈ ಭಾಗದ ಪ್ರಬಲ ಹಿಂದುಳಿದ ಜಾತಿಗಳಾದ ಬಿಲ್ಲವ, ಮೊಗವೀರ ಜಾತಿಗಳ ಅರ್ಹ ಯುವ ಬೌದ್ಧಿಕ ನಾಯಕರ ಕೊರತೆ ಇನ್ನೊಂದು ಸವಾಲು.

ಇನ್ನು ಹಳೆ ಮೈಸೂರು ಭಾಗದ ಕೊಡಗಿನಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್ ಅಧ್ಯಕ್ಷರು ವಿರುದ್ಧ ಪಕ್ಷದ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆನ್ನುವ ಮಾತು ಕೇಳಿಬರುತ್ತಿದೆ. ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಹಿಡಿತ ಕಳೆದುಕೊಂಡ ನಂತರ ಪಕ್ಷ ಸೊರಗಿದೆ. ಬಿಜೆಪಿ ದಿನೇ ದಿನೇ ಆ ಭಾಗದಲ್ಲಿ ಹಿಡಿತ ಸಾಧಿಸುತ್ತಿರುವುದು ಡಿಕೆಶಿಗೆ ಬಹುದೊಡ್ಡ ಸವಾಲು. ಕುರುಬ ಜಾತಿ ಸಮೀಕರಣ ಒಂದು ಕಾಲದಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಗೆ ವರವಾಗಿತ್ತು. ಆದರೆ ಸಿದ್ದರಾಮಯ್ಯ, ವಿಶ್ವನಾಥ್ ಪ್ರಭಾವ ಕಡಿಮೆಯಾಗಿರುವುದು , ಈ ಜಾತಿಗಳ ಮೇಲೆ ಬಿಜೆಪಿ ಪ್ರಭಾವ ಹೆಚ್ಚಾಗುತ್ತಿರುವುದು ಡಿಕೆಶಿ ಗೆ ಇದು ಬಹುದೊಡ್ಡ ತೊಡಕನ್ನು ನೀಡಬಹುದು.

ಮಂಡ್ಯ, ರಾಮನಗರದಲ್ಲಿ ದೇವೇಗೌಡರ ನೇತೃತ್ವದ ಜೆಡಿಎಸ್ ಅಷ್ಟು ಸುಲಭದಲ್ಲಿ ಡಿಕೆಶಿಗೆ ಮಣಿಯಲಾರದು. ಈಗಲೇ ಕುಮಾರಸ್ವಾಮಿ ಇದರ ಬಗ್ಗೆ ಸುಳಿವನ್ನು ನೀಡಿದ್ದಾರೆ. ಈ ಜಿಲ್ಲೆಗಳಲ್ಲಿ ಜೆಡಿಎಸ್ ಕಾಂಗ್ರೆಸ್ಸಿಗೆ ನೇರ ಎದುರಾಳಿ. ಇಲ್ಲಿ ಜೆಡಿಎಸ್ ದುರ್ಬಲವಾದರೆ ರಾಜ್ಯದಲ್ಲಿ ದುರ್ಬಲ ಆದಂತೆ. ಈ ಕಾರಣದಿಂದ ಶತಾಯಗತಾಯ ಜೆಡಿಎಸ್ ಸೆಣಸಾಟ ನಡೆಸುತ್ತದೆ. ಬಹುತೇಕ ಒಕ್ಕಲಿಗ ಮತದಾರರು ಪ್ರಬಲವಾಗಿರುವ ಈ ಕ್ಷೇತ್ರಗಳಲ್ಲಿ ಒಕ್ಕಲಿಗರು ದೇವೇಗೌಡರ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಒಲವನ್ನು ಡಿಕೆಶಿ ಪಡೆದುಕೊಂಡರೆ ಅವರ ಪಕ್ಷ ಸಂಘಟನೆ ಯಶಸ್ವಿಯಾಗಬಹುದು.

ಒಟ್ಟಿನಲ್ಲಿ ಕರಾವಳಿ, ಹಳೆ ಮೈಸೂರು, ಮಂಡ್ಯ ಭಾಗದಲ್ಲಿ ಡಿಕೆಶಿಗೆ ಪಕ್ಷ ಸಂಘಟನೆಯ ಬಹು ದೊಡ್ಡ ಸವಾಲಿದೆ. ಲಾಬಿ ನಡೆಸುವ ನಾಯಕರು, ಬಿಳಿಯಂಗಿ ಹಾಕಿ ತಿರುಗಾಡುವ ನಾಯಕರು, ವೋಟು ತೆಗೆಯಲು ಶಕ್ತರಲ್ಲದ ನಾಯಕರು, ಬೆಂಗಳೂರಿನಿಂದ ನೇರವಾಗಿ ಹುದ್ದೆ ಪಡೆದು ಬರುವ ನಾಯಕರನ್ನು ಮೀರಿ ಡಿಕೆಶಿ ಪಕ್ಷವನ್ನು ಸಂಘಟಿಸಿದರೆ ಡಿಕೆಶಿ ಯಶಸ್ವಿಯಾಗಬಹುದು. ಆ ಸವಾಲನ್ನು ಡಿಕೆಶಿ ಮೆಟ್ಟಿನಿಲ್ಲುವರೇ? ಕಾಲವೇ ಉತ್ತರಿಸಬೇಕು.

Leave A Reply

Your email address will not be published.