GT Deve Gowda and HD Kumaraswamy : ಜಿಟಿಡಿ – ಹೆಚ್​ಡಿಕೆ ನಡುವಿನ ಮುನಿಸು ಮಾಯ :ಒಂದೇ ವೇದಿಕೆಯಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದ ತೆನೆ ನಾಯಕರು

ಮೈಸೂರು : GT Deve Gowda and HD Kumaraswamy : ಜೆಡಿಎಸ್​ ಪಕ್ಷಕ್ಕೆ ಸೇರಿದ್ದರೂ ಸಹ ಶಾಸಕ ಜಿ.ಟಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ಇದ್ದಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಅನೇಕ ಸಂದರ್ಭಗಳಲ್ಲಿ ಇವರಿಬ್ಬರ ನಡುವಿನ ಮನಸ್ತಾಪಗಳು ಬಹಿರಂಗವಾಗಿ ಕಾಣಿಸಿಕೊಂಡಿದ್ದೂ ಇದೆ. ಆದರೆ ಮೈಸೂರಿನ ಹುಣಸೂರಿನಲ್ಲಿ ಇಂದು ನಡೆದ ಕೆಂಪೆಗೌಡ ಜಯಂತಿ ಕಾರ್ಯಕ್ರಮದಲ್ಲಿ ಜಿ.ಟಿದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ತಮ್ಮ ನಡುವಿನ ಎಲ್ಲಾ ಮುನಿಸನ್ನು ಮರೆತು ಒಟ್ಟಾಗಿ ಹೆಜ್ಜೆ ಹಾಕಿದ್ದಾರೆ.


ಹುಣಸೂರು ಬಸ್​ ನಿಲ್ದಾಣದಿಂದ ವೇದಿಕೆಯತ್ತ ತೆರಳುತ್ತಿದ್ದ ಮೆರವಣಿಗೆಯಲ್ಲಿ ಕಾರಿನಿಂದ ಇಳಿದು ಭಾಗಿಯಾದ ಹೆಚ್​.ಡಿ ಕುಮಾರಸ್ವಾಮಿ ನಿರ್ಮಲಾನಂದ ಸ್ವಾಮೀಜಿ, ಜಿ.ಟಿ ದೇವೇಗೌಡ ಹಾಗೂ ಸಾ.ರಾ ಮಹೇಶ್​ ಜೊತೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಮಾತ್ರವಲ್ಲದೇ ವೇದಿಕೆಯಲ್ಲಿ ಒಬ್ಬರನ್ನೊಬ್ಬರು ಹಾಡಿ ಹೊಗಳುವ ಮೂಲಕ ತಮ್ಮ ನಡುವಿನ ಎಲ್ಲಾ ಮನಸ್ತಾಪಗಳು ಬಗೆಹರಿದಿವೆ ಎಂಬ ಸೂಚನೆಯನ್ನು ಹರಿ ಬಿಟ್ಟಿದ್ದಾರೆ.


ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಹೆಚ್​.ಡಿ ಕುಮಾರಸ್ವಾಮಿ ಜಿ.ಟಿ ದೇವೇಗೌಡ ಹಾಗೂ ಅವರ ಪುತ್ರ ಜಿ.ಡಿ ಹರೀಶ್​ ಗೌಡರನ್ನ ಹಾಡಿ ಹೊಗಳಿದ್ದಾರೆ. ಮೈತ್ರಿ ಸರ್ಕಾರದ ಬಳಿಕ ನಾನು ಹಾಗೂ ಜಿ,ಟಿ ದೇವೇಗೌಡ ಮೂರು ವರ್ಷಗಳಿಂದ ಮಾತನಾಡಿರಲಿಲ್ಲ. ಅಲ್ಲದೇ ಒಂದೇ ವೇದಿಕೆಯಲ್ಲಿ ನಾವು ಕಾಣಿಸಿಕೊಂಡೂ ಇರಲಿಲ್ಲ. ಹೀಗಾಗಿ ನಮ್ಮ ನಡುವೆ ಮನಸ್ತಾಪವಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಲೇ ಇತ್ತು.


ಹುಣಸೂರು ಜಿ.ಟಿ ದೇವೇಗೌಡ ಕರ್ಮಭೂಮಿ. ಹೀಗಾಗಿ ಅವರು ಈ ಬಾರಿ ಕೆಂಪೇಗೌಡ ಜಯಂತಿಯನ್ನು ಇಲ್ಲಿ ಆಚರಿಸೋಣ ಎಂದು ನನಗೆ ಸಲಹೆ ನೀಡಿದ್ದರು. ನಾನು ಅವರ ಸಲಹೆಯನ್ನು ಒಪ್ಪಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ನಮ್ಮ ಸಂಬಂಧದಲ್ಲಿ ಯಾವುದೇ ರೀತಿಯ ಬಿರುಕಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಜಿಟಿಡಿ ಪುತ್ರ ಜಿ.ಡಿ ಹರೀಶ್​ ಗೌಡ ಕ್ರಿಯಾಶೀಲ ಯುವನಾಯಕ ಎಂದು ಬಣ್ಣಿಸಿದ್ದಾರೆ.


ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್​ ಸದಸ್ಯ ಹೆಚ್​.ವಿಶ್ವನಾಥ್​ರನ್ನೂ ಹೊಗಳಿದ ಕುಮಾರಸ್ವಾಮಿ, ನನ್ನ ಹಾಗೂ ವಿಶ್ವನಾಥ್​ ನಡುವೆ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ ಎಂದು ಹೇಳಿದರು.

ಇತ್ತ ಶಾಸಕ ಜಿ.ಟಿ ದೇವೇಗೌಡ ಕೂಡ ಕುಮಾರಸ್ವಾಮಿಯನ್ನು ಹಾಡಿ ಹೊಗಳಿದ್ದು, ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ರಾಜ್ಯವನ್ನು ಉತ್ತಮವಾಗಿ ಅಭಿವೃದ್ಧಿ ಮಾಡಿದ್ದಾರೆ. 25 ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ನಾನು ಇವತ್ತಿನವರೆಗೂ ಕುಮಾರಸ್ವಾಮಿ ಜೊತೆ ಮಾತನಾಡಿರಲಿಲ್ಲ. ಆದರೆ ನಿರ್ಮಲಾನಾಂದ ಸ್ವಾಮೀಜಿಗಳು ನಮಗೆ ಒಟ್ಟಾಗಿ ಇರಬೇಕು ಎಂದಿದ್ದಾರೆ. ಹುಣಸೂರಿನ ಜನತೆ ನಮ್ಮನ್ನು ಒಂದು ಮಾಡಿದ್ದಾರೆ ಎಂದು ಹೇಳಿದರು.


ಸ್ವಪಕ್ಷದ ಮೇಲೆ ಅಸಮಾಧಾನ ಹೊಂದಿರುವ ಜಿ.ಟಿ ದೇವೇಗೌಡ ಕಾಂಗ್ರೆಸ್​ ಇಲ್ಲವೇ ಬಿಜೆಪಿ ಸೇರುತ್ತಾರೆ ಅಂತೆಲ್ಲ ರಾಜಕೀಯ ವಲಯದಲ್ಲಿ ಚರ್ಚೆ ಮಾಡಲಾಗ್ತಿತ್ತು. ಆದರೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಜಿಟಿಡಿ ಹಾಗೂ ಹೆಚ್​ಡಿಕೆ ಮತ್ತೆ ಒಂದಾಗುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇದನ್ನು ಓದಿ : Siddaramaiah is angry against the BJP : ಬೊಮ್ಮಾಯಿ ಆರ್​ಎಸ್​ಎಸ್​ ಕೈಗೊಂಬೆ, ಅಸಮರ್ಥ ಸಿಎಂ : ಸಿದ್ದರಾಮಯ್ಯ ಕಿಡಿ

ಇದನ್ನೂ ಓದಿ : Siddaramaiah is angry against the BJP : ಬೊಮ್ಮಾಯಿ ಆರ್​ಎಸ್​ಎಸ್​ ಕೈಗೊಂಬೆ, ಅಸಮರ್ಥ ಸಿಎಂ : ಸಿದ್ದರಾಮಯ್ಯ ಕಿಡಿ

GT Deve Gowda and HD Kumaraswamy reunited

Comments are closed.