ಸಚಿವೆಗೆ ಝೀರೋ ಟ್ರಾಫಿಕ್ ಪ್ರಕರಣ: ಸರ್ಕಾರ ಮತ್ತು ಶಶಿಕಲಾ ಜೊಲ್ಲೆಗೆ ಹೈಕೋರ್ಟ್ ನೊಟೀಸ್!

ಪ್ರಮಾಣವ ವಚನಕ್ಕೆ ವಿಳಂಬವಾಗಬಾರದೆಂಬ ಕಾರಣಕ್ಕೆ  ಬೆಂಗಳೂರು ಏರ್ ಪೋರ್ಟ್ ನಿಂದ ರಾಜಭವನದವರೆಗೆ ಶಾಸಕಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆಗೆ ಝೀರೋ ಟ್ರಾಫಿಕ್  ಕಲ್ಪಿಸಿದ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ನಿರ್ಣಯ ತೆಗೆದುಕೊಂಡಿದ್ದು ಯಾರು? ಈ ರೀತಿ ಅನುಮತಿ ಕೊಟ್ಟರೇ ನಾಳೆ ಎಲ್ಲ ಶಾಸಕರು ಇದನ್ನೇ ಬಯಸಬಹುದು. ಜೀವಂತ ಹೃದಯ ರವಾನೆ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಈ ವ್ಯವಸ್ಥೆ ಬಳಸುವ ಅಗತ್ಯವೇನಿದೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸರ್ಕಾರಕ್ಕೆ ಉತ್ತರಿಸುವಂತೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ. ನ್ಯಾಯವಾದಿ ಜಿ.ಬಾಲಾಜಿ ನಾಯ್ಡು ಎಂಬುವವರು ಸರ್ಕಾರದ ಈ ಝೀರೋ ಟ್ರಾಫಿಕ್ ದುರ್ಬಳಕೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮುಖ್ಯನ್ಯಾಯಮೂರ್ತಿ ಎ.ಎಸ್.ಓಕ್ ಅವರ ನ್ಯಾಯಪೀಠದಲ್ಲಿ ಪ್ರಕರಣ ವಿಚಾರಣೆಗೆ ಬಂದಿದ್ದು, ಸರ್ಕಾರ ಮತ್ತು ಸಚಿವರ ಜೊತೆಗೆ ನಗರ ಪೊಲೀಸ್ ಆಯುಕ್ತರು ಹಾಗೂ ಸಂಚಾರ ಪೊಲೀಸ್ ಆಯುಕ್ತರಿಗೂ  ನೊಟೀಸ್ ಜಾರಿಯಾಗಿದೆ.

ಅಗಸ್ಟ್ 4 ರಂದು ಮಧ್ಯಾಹ್ನ 2.14 ರಿಂದ 2.40 ರವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ 34 ಕಿಲೋಮೀಟರ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಜನಸಾಮಾನ್ಯರಿಗೆ ಉಂಟಾದ ತೊಂದರೆಗೆ ಪರಿಹಾರವೇನು ಎಂದು ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.  

Comments are closed.