ಗಡಿ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ಕೊಟ್ಟ ಸಿಎಂ ಬೊಮ್ಮಾಯಿ

ಬೆಂಗಳೂರು : ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್ ರಾಜ್ಯದಲ್ಲಿ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಿಎಂ ಗೃಹ‌ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಈಗಾಗಲೇ ನಿಫಾ ವೈರಸ್ ಕೇರಳದಲ್ಲಿ ಕಾಣಿಸಿಕೊಂಡು ಒಂದು ಮಗು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಗಡಿ ಜಿಲ್ಲೆಗಳಲ್ಲಿ ಈ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ದೆಹಲಿಗೆ ಹೊರಡಲು ಸಜ್ಜಾದ ಸಿಎಂ ಬೊಮ್ಮಾಯಿ : ಶಾಸಕರಿಗೆ ಶುರುವಾಗಿದ್ಯಾಕೆ ತಳಮಳ

ನಿಫಾ ವೈರಸ್ ರಾಜ್ಯದಲ್ಲಿ ಹರಡದಂತೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತಾಗಿ ತಜ್ಞರ ಜತೆ ಚರ್ಚೆ ನಡೆಸಲಾಗಿದೆ. ತಜ್ಞರು ನೀಡುವ ಶಿಫಾರಸುಗಳನ್ನು ಪಾಲನೆ ಮಾಡಲಾಗುವುದು. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಗಡಿ ಭಾಗಗಳಲ್ಲಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೆವೋ ಈಗಲೂ ಕೂಡ ಅದೇ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.

ಇಂದು ನವದೆಹಲಿಗೆ ತೆರಳುತ್ತಿದ್ದು, ಕೇಂದ್ರದ ಹಲವಾರು ಸಚಿವರನ್ನು ಭೇಟಿಯಾಗಲಿದ್ದೇನೆ. ಪ್ರಮುಖ ವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲಾಗುವುದು. ರಾಜ್ಯಕ್ಕೆ ಬಾಕಿ ಇರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಲಿದ್ದೇವೆ ಎಂದು ಹೇಳಿದರು.

ಇದೇ ರೀತಿ ಕೇಂದ್ರ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್‍ಗಡ್ಕರಿ ಅವರನ್ನು ಸಹ ಭೇಟಿ ಮಾಡಲಾಗುವುದು. ರಾಜ್ಯದ ಯೋಜನೆಗಳಿಗೆ ಅನುಮತಿ ನೀಡಲು ಕೋರಲಿದ್ದೇನೆ. ನಗರಾಭಿವೃದ್ಧಿ ಮತ್ತು ವಸತಿ ಸಚಿವರನ್ನು ಭೇಟಿಯಾಗಲಿದ್ದೇನೆ. ಬೆಂಗಳೂರು ಮೆಟ್ರೋ ರೈಲು ವಿಸ್ತರಣೆ, ವಸತಿ ಯೋಜನೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ಇದನ್ನೂ ಓದಿ: ಮೈಸೂರು ಪೇಟ, ಬೃಹತ್‌ ಹಾರ, ಮೈ ಮೇಲೆ ಶಾಲು : ತಮ್ಮ ಆದೇಶವನ್ನೇ ಉಲ್ಲಂಘಿಸಿದ ಸಿಎಂ ಬಸವರಾಜ್‌ ಬೊಮ್ಮಾಯಿ

ಈ ಬಾರಿಯ ಭೇಟಿ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುವುದಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು. ಬೆಂಗಳೂರು ನಗರ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ತತ್‍ಕ್ಷಣವೇ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಒಂದೆರಡು ದಿನಗಳ ನಂತರ ಇದು ಕಾರ್ಯಾರಂಭಕ್ಕೆ ಬರಲಿದೆ ಎಂಬ ಮಾಹಿತಿ ನೀಡಿದರು.

(CM Bommai notifies district administration of border districts)

Comments are closed.