ಒಕ್ಕಲಿಗ ಕೋಟೆಗೆ ಲಗ್ಗೆ ಇಡ್ತಾರಾ ಡಿಕೆಶಿ? ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್-ಬಿಜೆಪಿಗೆ ನಡುಕ!
ಆದರೆ, ಪ್ರಸ್ತುತ ಬದಲಾಗಿರುವ ರಾಜಕೀಯ ವಿದ್ಯಮಾನಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಮುದಾಯದ ಮೇಲೆ ಹೊಸ ಪ್ರಭಾವ ಬೀರಲು ಸಜ್ಜಾಗಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸದಾ ಹೈವೋಲ್ಟೇಜ್ ಕಣವಾಗಿರುವ ಹಳೆ ಮೈಸೂರು, ಮಂಡ್ಯ, ಬೆಂಗಳೂರು, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ, ದಕ್ಷಿಣ ಕನ್ನಡ ಭಾಗಗಳಲ್ಲಿ ಒಕ್ಕಲಿಗ ಸಮುದಾಯದ ಮತಗಳು ಅತ್ಯಂತ ನಿರ್ಣಾಯಕ.
ಸಾಂಪ್ರದಾಯಿಕವಾಗಿ ಈ ಭಾಗದ ಒಕ್ಕಲಿಗ ಮತಬ್ಯಾಂಕ್ ಅನ್ನು ಬಿಜೆಪಿ ಮತ್ತು ಜೆಡಿಎಸ್ ತನ್ನತ್ತ ಸೆಳೆದುಕೊಂಡಿದ್ದವು. ಆದರೆ, ಪ್ರಸ್ತುತ ಬದಲಾಗಿರುವ ರಾಜಕೀಯ ವಿದ್ಯಮಾನಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಮುದಾಯದ ಮೇಲೆ ಹೊಸ ಪ್ರಭಾವ ಬೀರಲು ಸಜ್ಜಾಗಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
‘ಡಿಕೆಶಿ ಸಿಎಂ’ ಸಂಚಲನ ಮತ್ತು ಬದಲಾದ ವೋಟ್ ಬ್ಯಾಂಕ್:
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಆಶಯದೊಂದಿಗೆ ಈ ಭಾಗದ ಒಕ್ಕಲಿಗ ಸಮುದಾಯದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಯಾಗಿತ್ತು. ಇದರ ಪರಿಣಾಮವಾಗಿ, ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಒಕ್ಕಲಿಗ ಮತಗಳು ಕಾಂಗ್ರೆಸ್ ಪಾಲಾಗಿದ್ದವು. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪ್ರಭಾವ ಈ ಭಾಗದ ಒಕ್ಕಲಿಗ ಮತಗಳ ಮೇಲೆ ಮತ್ತಷ್ಟು ಗಟ್ಟಿಯಾಗಲಿದ್ದು, ಅವರು ಪೂರ್ಣ ಪಾರುಪತ್ಯ ಸಾಧಿಸಲಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಇನ್ನೊಂದೆಡೆ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಮೂಲಕ ಒಕ್ಕಲಿಗ ಮತಗಳನ್ನು ಸಂಪೂರ್ಣವಾಗಿ ತಮ್ಮತ್ತಲೇ ಉಳಿಸಿಕೊಳ್ಳಲು ಬಿಜೆಪಿ ಭರ್ಜರಿ ತಂತ್ರಗಾರಿಕೆ ನಡೆಸಿತ್ತು. ಆದರೆ, ಈಗ ಬದಲಾಗಿರುವ ರಾಜಕೀಯ ಚಿತ್ರಣ ಮತ್ತು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಮೈಲೇಜ್ ಕಾರಣದಿಂದಾಗಿ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಗೆ ಕಳೆದ ಬಾರಿಗಿಂತಲೂ ಹೆಚ್ಚಿನ ಒಕ್ಕಲಿಗ ಮತಗಳು ಹರಿದುಬರುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಕುಮಾರಸ್ವಾಮಿಗೆ ಎದುರಾಗುತ್ತಾ ಬಹುದೊಡ್ಡ ಹಿನ್ನೆಡೆ?
ಒಂದು ವೇಳೆ ಡಿ.ಕೆ. ಶಿವಕುಮಾರ್ ಅವರು ಮೈಸೂರು, ಮಂಡ್ಯ, ಕೊಡಗು ಮತ್ತು ಚಿಕ್ಕಮಗಳೂರು ಭಾಗದ ಒಕ್ಕಲಿಗರ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಯಶಸ್ವಿಯಾದರೆ, ಅದು ಖಂಡಿತವಾಗಿಯೂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಹಾಗೂ ಬಿಜೆಪಿಗೆ ಪ್ರಾದೇಶಿಕವಾಗಿ ಬಹುದೊಡ್ಡ ಹಿನ್ನೆಡೆ ತರಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.



