Amruteshwari Temple : ಹಲವು ಮಕ್ಕಳ ತಾಯಿಯ ಮಹಿಮೆ ಅಪಾರ : ಬೇಡಿ ಬಂದವರಿಗೆ ನೀಡುತ್ತಾಳೆ ಸಂತಾನ ಭಾಗ್ಯ

Amruteshwari Temple : ತಾಯಿತನ.. ಇದು ಪ್ರತಿ ಹೆಣ್ಣು ಕಾಣುವ ಕನಸು. ಮದುವೆಯಾದ ಪ್ರತಿ ದಂಪತಿ ತಮ್ಮ ಹೆಸರು ಬೆಳೆಸೋಕೆ ಒಂದಾದ್ರೂ ಮಗು ಬೇಕು ಅಂತ ಅಂದುಕೊಳ್ಳುತ್ತಾರೆ. ಇನ್ನು ಕೆಲವರಿಗಂತು ಆ ಯೋಗವೇ ಇರಲ್ಲ. ಮಗು ಬೇಕು ಅಂತ ಆಸ್ಪತ್ರೆಗಳನ್ನು ಸುತ್ತೋ ಹಲವಾರು ಮಂದಿ ಇದ್ದಾರೆ. ಅಷ್ಟಾದ್ರೂ ಮಕ್ಕಳ ಭಾಗ್ಯವಂತು ಅವರಿಗೆ ಸಿಕ್ಕಿರಲ್ಲ.

ಅಂಥವರ ಪಾಲಿಗೆ ಸಂಜೀವಿನಿ ಆಗಿದ್ದಾಳೆ ಈ ತಾಯಿ. ಈ ತಾಯಿಯ ಸೇವೆಯಿಂದ ಬರಿದಾದ ಮಡಿಲು ತುಂಬುತ್ತೆ. ಹೌದು ಈ ತಾಯಿ ನಿಜಕ್ಕೂ ಬೇಡಿದ ವರವನ್ನು ಕರುಣಿಸುವಾಕೆ. ಅದರಲ್ಲೂ ಮಕ್ಕಳ ಭಾಗ್ಯ ಬೇಡಿ ಬಂದ ಭಕ್ತರಿಗೆ ನಿರಾಸೆ ಮಾಡೋದೆ ಇಲ್ಲ. ಆಕೆ ಸನ್ನಿಧಾನದಲ್ಲಿ ಕೈ ಮುಗಿದು ನಿಂತ್ರೆ ಈಡೇರದ ಹರಕೆಗಳೇ ಇಲ್ಲ. ಹೀಗಾಗಿ ಭಕ್ತರ ಪಾಲಿಗೆ ಈಕೆ ಹಲವು ಮಕ್ಕಳ ತಾಯಿ. ಈ ದೇವಾಲಯ ಹಲವು ವಿಶೇಷಗಳ ಆಗರ ಇಲ್ಲಿ ಜಗನ್ಮಾತೆ ಯುಗ ಯುಗದಿಂದ ನೆಲೆ ನಿಂತಿದ್ದಾಳೆ. ಇಲ್ಲಿನ ಮತ್ತೊಂದು ವಿಶೇಷವೇ ತಾಯಿ ತನ್ನ ಮಕ್ಕಳ ಜೊತೆ ನೆಲೆ ನಿಂತಿರೋದು. ಇಲ್ಲಿ ಆಕೆಯ ಮಕ್ಕಳಿಗೆ ಎಣ್ಣೆ ಹಚ್ಚಿ ಪೂಜೆ ಸಲ್ಲಿಸಿದ್ರೆ, ಮಕ್ಕಳಾಗದ ದಂಪತಿಗೆ ಮಕ್ಕಳಾಗುತ್ತೆ ಅನ್ನೋದು. ಹೀಗಾಗಿ ಭಕ್ತರು ಆಕೆಯ ಮಕ್ಕಳಿಗೆ ಎಣ್ಣೆ ಹಚ್ಚಿ ಪೂಜೆ ಸಲ್ಲಿಸುತ್ತಾರೆ.

ನೀವು ಅಂದುಕೊಂಡಿರಬಹುದು ಜಗನ್ಮಾತೆಯ ಮಕ್ಕಳು ಅಂದ್ರೆ ಗಣೇಶ ಮತ್ತು ಸುಬ್ರಹ್ಮಣ್ಯ ಇರಬಹುದು ಅಂತ. ಹಾಗೆ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಯಾಕಂದ್ರೆ ಇಲ್ಲಿ ಈ ತಾಯಿಯ ಮಕ್ಕಳಂದ್ರೆನೇ ಶಿವಲಿಂಗಗಳು. ಅದೂನೂ ಒಂದೆರಡಲ್ಲ ಹಲವಾರು .ಹೌದು ಇಲ್ಲಿ ಈ ತಾಯಿ ಲಿಂಗರೂಪಿ ಮಕ್ಕಳಿಗೆ ತಾಯಿಯಾಗಿದ್ದಾಳೆ. ಅದರಲ್ಲೂ ಒಂದು ವಿಶೇಷವಿದೆ ಅದು ಏನು ಗೊತ್ತಾ? ಮೂರು ವರ್ಷಗಳಿಗೊಮ್ಮೆ ಈ ಶಿವಲಿಂಗ ಸಂಖ್ಯೆಯಲ್ಲಿ ಏರಿಕೆ ಯಾಗುತ್ತೆ. ಇಷ್ಟೇ ಅಲ್ಲ. ಈ ಶಿವಲಿಂಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗುತ್ತೆ ಅನ್ನೋದು. ಈ ಲಿಂಗಗಳನ್ನು ಈ ಜಗನ್ಮಾತೆಯ ಮಕ್ಕಳು ಅಂತ ಅಂದುಕೊಳ್ಳಲಾಗಿದೆ ಹೀಗಾಗಿ ಈ ಲಿಂಗಗಳ ಸೇವೆ ಮಾಡಿದ್ರೆ ತಾಯಿ ಪ್ರಸನ್ನಗೊಂಡು ಸಂತಾನ ಕರುಣಿಸುತ್ತಾಳೆ ಅನ್ನೋದು ಭಕ್ತರ ನಂಬಿಕೆ.

ಈ ವಿಸ್ಮಯದ ಆಳ ಹುಡುಕುತ್ತಾ ಹೋದ್ರೆ ಇದು ರಾಮಾಯಣದ ಕಾಲಕ್ಕೆ ಸೇರಿಕೊಳ್ಳುತ್ತೆ. ಹೌದು ಇಲ್ಲಿನ ಸ್ಥಳ ಪುರಾಣದ ಪ್ರಕಾರ ತ್ರೇತಾಯುಗದಲ್ಲಿ ಖರಾಸುರ ಅನ್ನೋ ರಾಕ್ಷಸನಿದ್ದ. ಆತನ ಪತ್ನಿಯ ಹೆಸರು ಖುಂಬಮುಖಿ. ಇವರು ರಾವಣನ ಆಪ್ತರಾಗಿದ್ರು. ರಾಕ್ಷಸರಾಗಿದ್ರೂ ಖರ ಮತ್ತು ಆತನ ಪತ್ನಿ ಶಿವ ಹಾಗೂ ಜಗದಂಬೆಯ ಭಕ್ತರಾಗಿದ್ರು.

ಒಂದು ದಿನ ಖುಂಬಮುಖಿ ಹಾಗೂ ಶೂರ್ಪನಖಿ ಹೂವು ಜೇನನ್ನು ಹುಡುಕುತ್ತಾ ದಂಡಕಾರಣ್ಯದಲ್ಲಿ ಓಡಾಡುತ್ತಿದ್ರು. ಆಗ ಅಲ್ಲಿ ಒಬ್ಬ ವಿಧವೆ ಋಷಿ ಪತ್ನಿ ಅತಿಪ್ರಭ ಹಾಗೂ ಆಕೆಯ ಪುತ್ರ ಬಹುಶ್ರುತ ಕಾಡಿನ ಮೂಲಕ ಕಾಶಿಗೆ ಹೋಗುತ್ತಿದ್ರು. ಇದನ್ನು ಕಂಡ ಶೂರ್ಪನಖಿ ಗೆ ಋಷಿ ಪುತ್ರನ ಮೇಲೆ ಮನಸ್ಸಾಯಿತು . ಆಕೆ ಆತನಲ್ಲಿ ಮದುವೆಯಾಗೋಕೆ ಕೇಳಿದ್ಲು. ಆದ್ರೆ ಆತ ಶೂರ್ಪನಖಿಯನು ನಿರಾಕರಿಸಿದ. ಇದರಿಂದ ಕೋಪಗೊಂಡ ಶೂರ್ಪನಖಿ ಆತನನ್ನು ಕೊಂದು ಹಾಕಿದ್ಲು. ಇಲ್ಲಿಗೆ ಬಂದ ಆತನ ತಾಯಿ ಅತಿಪ್ರಭ ತನ್ನ ಮಗನನ್ನು ಖುಂಬಮುಖಿ ಕೊಂದಳು ಎಂದು ಅಂದುಕೊಂಡು, ಆಕೆಗೆ ಮಕ್ಕಳಾಗದಂತೆ ಶಾಪ ನೀಡಿದ್ಲು. ನಂತರ ನಿಜ ತಿಳಿದ ಅತಿಪ್ರಭ, ಖುಂಬಮುಖಿಯಲ್ಲಿ ಕ್ಷಮೆಯಾಚಿಸಿ ಶೂರ್ಪನಖಿ ಗೆ ಮುಂದೆ ಹೀಗೆ ಪುರುಷನ್ನು ಮೋಹಿಸಿ, ಕುಲ ನಾಶಕ್ಕೆ ಕಾರಣಳಾಗು ಎಂದು ಶಾಪ ನೀಡಿ, ಅಲ್ಲೇ ಇದ್ದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ಲು. ಇದಾದ ನಂತರ ಖುಂಬಮುಖಿ ನಡೆದ ವಿಚಾರವನ್ನು ಪತಿ ಖರನಿಗೆ ತಿಳಿಸಿದ್ಲು. ಆಗ ಶುಕ್ರಾಚಾರ್ಯರ ಸಲಹೆ ಕೇಳಿದ ಖರ, ಅವರು ಹೇಳಿದಂತೆ ಮಯಾಸುರನಿಂದ ತಯಾರಿಸಿ ಲಿಂಗವನ್ನು ಗಲಿಯಾರು ಎಂಬಲ್ಲಿಗೆ ತಂದು ಒಂದು ವರ್ಷ ಪೂಜೆ ಸಲ್ಲಿಸಿದ. ಆತನ ಭಕ್ತಿಗೆ ಮೆಚ್ಚಿದ ಶಿವ, ನಾರಾಯಣನ ಅವತಾರದಿಂದ ನಿನಗೆ ಮೋಕ್ಷ ಸಿಗಲಿ ಅಂತ ಆಶೀರ್ವದಿಸುತ್ತಾನೆ.

ಮತ್ತೊಂದೆಡೆ ಖುಂಬಮುಖಿ ತಾಯಿ ಅಮೃತೇಶ್ವರಿಯ ಕುರಿತ ತಪಸ್ಸು ಮಾಡುತ್ತಾಳೆ. ಆದರೆ ತಾಯಿ ಪ್ರತ್ಯಕ್ಷವಾದಾಗ ಮೈಮರೆತು ತನಗೆ ಮಕ್ಕಳನ್ನು ಬೇಡುವ ಬದಲು ತಾಯಿ “ನಿತ್ಯ ಯೌವ್ವನೆಯಾಗಿ ಶಿವರೂಪಿ ಹಲವು ಮಕ್ಕಳಿಗೆ ತಾಯಿಯಾಗುವಂತೆ” ಬೇಡುತ್ತಾಳೆ . ನಂತರ ತನ್ನ ತಪ್ಪಿನ ಅರಿವಾದಾಗ ಖುಂಬಮುಖಿ ರೋಧಿಸುತ್ತಾಳೆ. ಆಗ ಸಂತೈಸುವ ಜಗನ್ಮಾತೆ ಈ ಲಿಂಗಗಳೇ ನಿನ್ನ ಮಕ್ಕಳೆಂದು ತಿಳಿ ಎಂದು ಹೇಳುತ್ತಾಳೆ. ಅಂದಿನಿಂದ ಇಲ್ಲಿ ಶಿವಲಿಂಗಗಳು ಉದ್ಬವಾಗುತ್ತೆ ಅನ್ನೋದು ನಂಬಿಕೆ.

ಈ ಲಿಂಗಗಳಿಗೆ ಮಕ್ಕಳಾಗದ ದಂಪತಿ ಬಂದು ಎಣ್ಣೆ ಹಚ್ಚಿ ಅಡಿಕೆ ಮರದ ಹೂವನ್ನು ಸಲ್ಲಿಸಿ ಸಂಕಲ್ಪ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳಾಗುತ್ತೆ ಅನ್ನೋ ನಂಬಿಕೆ ಇಲ್ಲಿನವರದು. ಈ ತಾಯಿಯು ಸುತ್ತಲ 14 ಗ್ರಾಮಗಳಿಗೆ ಗ್ರಾಮದೇವತೆಯಾಗಿದ್ದು, ಇಲ್ಲಿನ ಯಾವುದೇ ಮನೆಯಲ್ಲಿ ಮಕ್ಕಳಾದ್ರೂ ಮೊದಲು ಮಗುವನ್ನು ಈ ದೇವಾಲಯಕ್ಕೆ ಕರೆದುಕೊಂಡು ಬರುತ್ತಾರೆ. ಇಷ್ಟು ಮಾತ್ರವಲ್ಲ ಮದುವೆ ಸೇರಿದಂತೆ ಹಲವು ಹರಕೆಗಳನ್ನು ಭಕ್ತರು ದೇವರಲ್ಲಿ ನಿವೇದಿಸಿಕೊಳ್ಳುವುದು ವಿಶೇಷ. ಈ ದೇವಾಲಯದಲ್ಲಿ ಕಾಳಿ ರೂಪಿಯಾಗಿಯೂ ತಾಯಿ ನೆಲೆಸಿದ್ದಾಳೆ .ಇದರ ಜೊತೆಯಲ್ಲೇ ಇಲ್ಲಿ ತುಳುನಾಡಿನ ದೈವಗಳ ಗುಡಿಗಳನ್ನು ನಾವು ಕಾಣಬಹುದು. ಅಂದ ಹಾಗೆ ಈ ವಿಸ್ಮಯವಾದ ದೇವಾಲಯ ವಿರೋದು ಉಡುಪಿ ಜಿಲ್ಲೆಯ ಕೋಟಾದಲ್ಲಿ. ಇಲ್ಲಿಯ ಶಿವಲಿಂಗಗಳಿಂದಾಗಿ ಹಲವು ಮಕ್ಕಳ ತಾಯಿ ಅಂತಾನೆ ಕರೆಸಿಕೊಳ್ಳುತ್ತಾಳೆ ಅಮೃತೇಶ್ವರಿ . ಕಡಲ ತೀರದಲ್ಲಿರೋ ಈ ತಾಯಿಯ ಮಹಿಮೆಯನ್ನು ನೋಡೋಕೆ ಕೇರಳ ಸೇರಿದಂತೆ ವಿವಿದೆಡೆಯಿಂದ ಭಕ್ತರು ಬರುತ್ತಾರೆ.

ಇಲ್ಲಿಗೆ ಹೋಗೋಕೆ ಉಡುಪಿ ಹಾಗೂ ಕುಂದಾಪುರದಿಂದ ಬಸ್ ಸೌಕರ್ಯವಿದೆ. ಉಡುಪಿ- ಕುಂದಾಪುರದ ಮೂಲಕ ಕೋಟಕ್ಕೆ ಬಂದರೆ ಈ ದೇವಿಯ ಸನ್ನಿಧಿ ಪಶ್ಚಿಮಕ್ಕೆ ಕಾಣುತ್ತದೆ. ಕೋಟ ಬಸ್ಸು ನಿಲ್ದಾಣದಲ್ಲಿ ಇಳಿದು ಅಮೃತೇಶ್ವರಿಯ ಸನ್ನಿಧಾನಕ್ಕೆ ಹೋಗಬಹುದು. ನೀವು ಎಂದಾದರೂ ಒಮ್ಮೆ ಇಲ್ಲಿಗೆ ಬೇಟಿ ಕೊಡಿ.

ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

ಇದನ್ನೂ ಓದಿ : ನಂದಿ (ಬಸವಣ್ಣ)ಗೂ ಮಾಸ್ಕ್‌ : ಕೊರೊನಾ ಭಯವಲ್ಲ, ಇದು ಪ್ರದೋಷ ಪೂಜೆಯ ಸಂಪ್ರದಾಯ

( Amruteshwari Temple in Kota gives birth to baby, temple in Kota Near Udupi )

Comments are closed.