Life is ‘More’ Beautiful: ರವಿವಾರದ ವಿಶೇಷ: ಲೈಫ್ ಈಸ್ ‘ಮೋರ್’ ಬ್ಯುಟಿಫುಲ್ ಆಗುವುದು ಯಾವಾಗ…?

ನಮ್ಮ ಬದುಕನ್ನು ನಾವೇ ಬದುಕಬೇಕಲ್ವಾ? ಬೇರೆಯವರು ಈ ಕೆಲಸ ಮಾಡುವುದಕ್ಕೆ ಆಗುತ್ತಾ? ಹಾಗಾಗಿ, ಅದರಲ್ಲಿ ಎದುರಾಗುವ ಕಷ್ಟ, ಸುಖವನ್ನು ನಾವೇ ಅನುಭವಿಸಬೇಕು. ನಾವು ಕಷ್ಟದಲ್ಲಿ ಇದ್ದಾಗ ಬೇರೆಯವರು ನೆರವಾಗಬಹುದು. ಆದರೆ, ಕಷ್ಟವನ್ನೇ ಅವರು ಟ್ರಾನ್ಸಫರ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಬದುಕು ಬ್ಯುಟಿಫುಲ್ ಅನಿಸೋದು (Life is ‘More’ Beautiful) ಯಾವಾಗ ಅಂದರೆ, ಕಷ್ಟಸುಖಗಳ ಹಾವು ಏಣಿ ಆಟದಲ್ಲಿ ನಾವು ಆಟಗಾರರಾದಾಗ. ಆಟ ಆಡೀ ಆಡಿ ಬದುಕು ಚೆನ್ನಾಗಿ ಮಾಗುತ್ತಲ್ವಾ, ಆಗ.

ನಾವೆಲ್ಲ ಏನು ಮಾಡ್ತೀವಿ ಅಂದರೆ, ಬೇರೆಯವರ ಶ್ರೀಮಂತಿಕೆಯನ್ನೋ, ಅವರು ಓಡಾಡುವ ಐಷಾರಾಮಿ ಕಾರನ್ನೋ, ಮಾಡುವ ಧಾರಾಳ ಖರ್ಚುನ್ನೋ ನೋಡಿ ಎಂಥ ಬ್ಯುಟಿಫುಲ್ ಲೈಫ್ ಅಲ್ವಾ ಇವರ್ದು, ನಮಗೆ ಇಂಥ ಭಾಗ್ಯವಿಲ್ಲ ಅಂದ್ಕೊಬಿಡ್ತೀವಿ. ಹೀಗನಿಸಿದರೆ, ನೀವು ಅವರಿಗಿಂತ ಶ್ರೀಮಂತರು ಅಂತಲೇ ಅರ್ಥ; ಹಣದಲ್ಲಿ ಅಲ್ಲ- ನೆಮ್ಮದಿಯಲ್ಲಿ.

ನಿಜಾ ರೀ,
ಮೇಲುನೋಟಕ್ಕೆ ಅವರ ಬದುಕೆಲ್ಲಾ ಚಂದಾತಿಚಂದ ಅನಿಸುಬಿಡುತ್ತದೆ. ಆದರೆ, ಯಾವ ಕಾರಣಕ್ಕೂ ನಾವು ಒಳಗಿ ಬದುಕನ್ನು ನೋಡಿರುವುದೇ ಇಲ್ಲ. ಅವರ ಬದುಕಿನ ಎಷ್ಟೋ ಮಗ್ಗಿಲುಗಳು,ಅವೆಷ್ಟೋ ಮೂಲೆಗಳು ಕಿಲುಬು ಹಿಡಿದಿರೋಗಿರುತ್ತದೆ. ಅವೆಲ್ಲಾ ನಮಗೆ ಗೊತ್ತೇ ಇರೋಲ್ಲ. ಶ್ರೀಮಂತಿಕೆ ಅನ್ನೋದು ಮಾತ್ರ ಈ ಎಲ್ಲವನ್ನೂ ಜಗತ್ತಿನಿಂದ ಮುಚ್ಚಿಹಾಕಿರುತ್ತದೆ. ಅವರನ್ನು ಹೋಗಿ ಕೇಳಿ, ನಿಮ್ಮ ಲೈಫ್ ಎಷ್ಟೊಂದು ಬ್ಯುಟಿಫುಲ್ ಅಲ್ವಾ ಅಂಥ. ಅವರ ಮುಖದಲ್ಲಿ ಹುಳಿ ಹುಳಿ ಗೆರೆಗಳು ಎದ್ದೇಳದೇ ಇದ್ದರೆ ಕೇಳಿ,

ಜೀವನದಲ್ಲಿ ನೆಮ್ಮದಿ ಬಹಳ ಮುಖ್ಯ. ಆಗಲೇ ಲೈಫ್ ಈಸ್ ಬ್ಯುಟಿಫುಲ್ ಅನಿಸೋದು. ಈ ನೆಮ್ಮದಿ ಹೇಗೆ ಸಿಗುತ್ತೆ ಅಂತ ಕೇಳಬೇಡಿ, ಇದನ್ನು ಯಾರೇನು ತಂದುಕೊಡುವುದಿಲ್ಲ. ನಮ್ಮ ನೆಮ್ಮದಿಗೆ ನಾವೇ ವಾರಸುದಾರರು. ನಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು, ತಂದೆ-ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು, ಹೆಂಡತಿಯೊಂದಿಗೆ ಹೇಗೆಲ್ಲಾ ಇರಬೇಕು, ಸಾರ್ವಜನಿಕ ಬದುಕಲ್ಲಿ ವರ್ತಿಸುವ ಬಗೆ- ಎಲ್ಲವೂ ನೆಮ್ಮದಿಯ ಅಡಿಪಾಯಗಳೇ.
ನಮ್ಮ ಕಾರ್ಯ, ನಮ್ಮವರ್ತನೆಗಳು, ನಮ್ಮ ಸೇವಾಮನೋಭಾವ, ನಮ್ಮ ಸಂಸ್ಕಾರ, ಸಂಸ್ಕೃತಿ ಇವೆಲ್ಲವೂ ಬದುಕಿನ ನೆಮ್ಮದಿ ಹಾದಿಯಲ್ಲಿ ಬಿದ್ದಿರುವ ಅಡತಡೆಗಳನ್ನು ಒಮ್ಮೆಗೇ ಗುಡಿಸಿಹಾಕಿಬಿಡುವ ಟೂಲ್ಸ್ .

ನೆಮ್ಮದಿ ಇಲ್ಲ, ನೆಮ್ಮದಿ ಬೇಕು, ನೆಮ್ಮದಿ ಸಿಗೋಲ್ಲ ಅನ್ನೋದೆಲ್ಲ ಫೂಲೀಷ್. ನೆಮ್ಮದಿಯನ್ನು ತಂದುಕೊಳ್ಳುವ ವಿಚಾರದಲ್ಲಿ ಒಂದಷ್ಟು ಕಸರತ್ತುಗಳನ್ನು ನಾವೂ ಮಾಡಬೇಕು. ಬ್ಯೂಟಿಫುಲ್ ಬದುಕಿನ ದೊಡ್ಡ ಸೀಕ್ರೇಟೇ ಇದು.

ಈ ಚಿತ್ರ ನೋಡಿದ್ರಲ್ಲ, ಕೂದಲು ಇರುವ ವ್ಯಕ್ತಿ ತನ್ನ ಕಲ್ಪನೆಗೆ ದಕ್ಕಿದ್ದನ್ನು ಬರೆಯುವ ಬದಲು, ಕದ್ದು ಬೆನ್ನಹಿಂದಿನ ವ್ಯಕ್ತಿ ಏನು ಮಾಡ್ತಾ ಇದ್ದಾನೆ ಅಂತ ನೋಡಿ ಚಿತ್ರಬಿಡಿಸುವ ಪ್ರಯತ್ನ ಮಾಡುತ್ತಿದ್ದಾನೆ. ಲೈಫ್ ಈಸ್ ಬ್ಯುಟಿಫುಲ್ ಆಗೋದು ಹೀಗೇ ಬೇರೆಯವರ ಬದುಕನ್ನೋ, ಪ್ರಯತ್ನಗಳನ್ನೋ, ಯಶಸ್ಸನ್ನೋ ನೋಡಿ ಕುರುಬುವುದರಿಂದಲ್ಲ. ಅವರನ್ನು ಸ್ಫೂರ್ತಿಯಾಗಿ ಪಡೆಯುವುದರಿಂದ. ದುರಂತ ಏನೆಂದರೆ, ನಾವುಗಳು ನಮ್ಮ ಬದುಕಿನ ಒಳಾಂಗಣವನ್ನು ಒಂದೇ ಒಂದು ಸಾರಿಯೂ ತಂಗಿ ನೋಡಲ್ಲ, ಬದಲಾಗಿ ಬೇರೆಯವರ ಬದುಕನ್ನೋ, ಬೆನ್ನನ್ನೋ ನೋಡಿ ಬದುಕುತ್ತಿರುತ್ತೇವೆ. ಅದರ ಬದಲು ನಮ್ಮ ಬದುಕನ್ನು ಬೇರೆಯವರು ನೋಡುವಂತೆ ಮಾಡುವ ಪ್ರಯತ್ನಗಳಿಂದಿಲೂ ನಮ್ಮ ಜೀವನವನ್ನು ಬಹಳ ಸುಂದರಗೊಳಿಸಿಕೊಳ್ಳಬಹುದು.
ನಮಗೆ ಏನುಬೇಕು, ಏನುಬೇಡ, ನಾವು ಏನು ಕಲಿಯಬೇಕು, ಏನು ಕಲಿಯಬಾರದು ಅನ್ನೋ ಖಚಿತತೆ ಇದ್ದರೆ ಸಾಕು. ಇದನ್ನು ಕಲಿಸುವ ಮೇಷ್ಟ್ರೇ ಜೀವನಾನುಭವ.

ಆಗ ಲೈಫ್ ಈಸ್ ಮೋರ್ ಬ್ಯುಟಿಫುಲ್.

-ಬರಹ: ಕಟ್ಟೆ ಗುರುರಾಜ, ಹಿರಿಯ ಪತ್ರಕರ್ತರು,ಬರಹಗಾರರು

ಇದನ್ನೂ ಓದಿ: Opinion Left Right And Central : ನೀವು ಯಾವ ಪಂಥೀಯರು?

(Life Is More Beautiful when you live like this)

Comments are closed.