Maha Shivaratri 2023: ಮಹಾಶಿವರಾತ್ರಿಯ ಹಿನ್ನಲೆ, ಹಬ್ಬದ ಆಚರಣೆ ಏಕೆ ಮಾಡುತ್ತಾರೆ ಗೊತ್ತಾ?

(Maha Shivaratri 2023) ಭಾರತೀಯ ಸಂಪ್ರದಾಯದಲ್ಲಿ ಆಚರಿಸುವ ಯಾವುದೇ ಹಬ್ಬ ಹರದಿನಗಳು ಅದರದ್ದೇ ಆದ ಕೆಲವು ಹಿನ್ನಲೆಯನ್ನು ಹೊಂದಿರುತ್ತವೆ. ಅಲ್ಲದೇ ಕೆಲವು ಆಚರಣೆಗಳು ಸಾಮಾನ್ಯವಾಗಿ ನೆನಪಿನಲ್ಲಿ ಉಳಿದಿರುವ ಯಾವುದೋ ಒಂದು ಕಾಲದ ವ್ಯಕ್ತಿಯ, ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕವಾಗಿರುತ್ತದೆ. ಅಂತೆಯೇ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಉತ್ಸವ ಕೂಡ ಇನ್ನೇನು ಹತ್ತಿರದಲ್ಲಿದೆ. ಇದಕ್ಕೂ ಕೂಡ ಅದರದ್ದೇ ಆದ ಅಚರಣೆ ಹಾಗೂ ಹಿನ್ನಲೆಯಿದೆ, ಅನೇಕ ಕಥೆಗಳು ಕೂಡ ಇವೆ.

ಪುರಾಣಗಳ ಪ್ರಕಾರ, ಶಿವನು ದೇವಿ ಪಾರ್ವತಿಯನ್ನು ವರಿಸಿದ ದಿನವನ್ನೇ ಶಿವರಾತ್ರಿ (Maha Shivaratri 2023) ಎಂದು ಹೇಳಲಾಗುತ್ತದೆ. ಇದಲ್ಲದೇ ಇದಕ್ಕೆ ಇನ್ನೂ ಕೆಲವು ಕಥೆಗಳಿವೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದಾಗ ವಿಷ ಉದ್ಭವವಾಗುತ್ತದೆ. ಲೋಕಕಲ್ಯಾಣಾರ್ಥವಾಗಿ ಶಿವ ಅದನ್ನು ಕುಡಿಯುತ್ತಾನೆ. ಆದರೆ ವಿಷ ಗಂಟಲಿನಿಂದ ಕೆಳಗಿಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆ ಹಿಡಿದಳು. ಈ ದಿನವನ್ನು ಕೂಡ ಶಿವಪುರಾಣಗಳ ಪ್ರಕಾರ ಮಹಾಶಿವರಾತ್ರಿ ಎನ್ನಲಾಗಿದೆ. ಇನ್ನೂ ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ್ದು, ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಬಿಟ್ಟ ದಿನವೂ ಕೂಡ ಮಹಾಶಿವರಾತ್ರಿಯಂದೇ ಎಂದು ಪುರಾಣಗಳು ಹೇಳುತ್ತದೆ. ಇದಲ್ಲದೇ ಶಿವನ ಆದಿ ಮತ್ತು ಅಂತ್ಯವನ್ನು ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಇದೇ ದಿನದಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದನೆಂದು ಪುರಾಣಗಳಲ್ಲಿ ಹೇಳಲಾಗುತ್ತದೆ.

ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ರಾತ್ರಿ ವೇಳೆಯಲ್ಲಿ ಶಿವ ಪಾರ್ವತಿ ಜೊತೆಯಾಗಿ ಭೂಮಿಯಲ್ಲಿ ಸಂಚಾರ ನಡೆಸುತ್ತಾ ಎಲ್ಲಾ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಇದು ಶಿವರಾತ್ರಿಯ (Maha Shivaratri 2023) ಸಮಯದಲ್ಲೇ. ಈ ಸಮಯದಲ್ಲಿ ತನ್ನನ್ನು ಯಾರು ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂಬುದಾಗಿ ಸ್ವತಂ ಶಿವನೇ ಹೇಳಿರುವುದರ ಬಗ್ಗೆ ಶಾಸ್ತ್ರೋಕ್ತಗಳು ಇವೆ. ಇದು ಶಿವನಿಗೆ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುತ್ತೇನೆ ಎನ್ನುವುದಾಗಿ ಸ್ವತಃ ಶಿವನೇ ಪಾರ್ವತಿಯ ಬಳಿ ತಿಳಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಆ ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ ನಂತರ ಶಿವಪಾರ್ವತಿಯರನ್ನು ಪೂಜಿಸಿದರಂತೆ. ಈ ಕಾರಣದಿಂದಲೇ ಶಿವರಾತ್ರಿಯಂದು ಜಾಗರಣೆ ಪದ್ದತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ.

ಹಿಂದೂಗಳಿಗೆ ಪ್ರಮುಖವಾಗಿ ಶಿವಭಕ್ತರಿಗೆ ಮಹಾ ಶಿವರಾತ್ರಿ ಒಂದು ರೀತಿಯ ಹಬ್ಬದ ಸಡಗರ. ಪ್ರಾತಃಕಾಲದ ಮೊದಲೇ ಎದ್ದು ಸ್ನಾನ ಮಾಡಿ, ಮಡಿ ವಸ್ತ್ರ ತೊಟ್ಟು, ಉಪವಾಸ ವೃತ ಮಾಡಿ, ರಾತ್ರಿಯಿಡಿ ಜಾಗರಣೆ ಮಾಡಿ ಶಿವಮನ ಪೂಜೆ ಮಾಡಿದರೆ ಎಲ್ಲ ಕಷ್ಟಗಳೂ ಪರಿಹಾರವಾಗಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ. ಸಾಮಾನ್ಯವಾಗಿ ಎಲ್ಲಾ ಶಿವನ ದೇವಾಲಯಗಳಲ್ಲೂ ಈ ದಿನ ರಾತ್ರಿಯಿಡೀ ಗಂಗಾಜಲಾಭೀಷೇಕ, ಪಂಚಾಮೃತ ಅಭಿಷೇಕ ನಡೆಯುತ್ತದೆ. ಅಲ್ಲದೇ ಶಿವಲಿಂಗವನ್ನು ಗೋರೋಚನ, ವಿಭೂತಿ ಹಾಗೂ ರುದ್ರಾಕ್ಷಿ ಮಾಲೆಯಿಂದ ಅಲಂಕರಿಸಿ, ಬಿಲ್ವಪತ್ರೆ ಹಾಗೂ ವಿವಿಧ ಪುಷ್ಪಗಳೊಂದಿಗೆ ಪೂಜಾ ಕೈಂಕರ್ಯಗಳು ನೆರವೇರುತ್ತದೆ. ಮಹಾ ಶಿವರಾತ್ರಿಯಂದು ಬಿಲ್ವ ಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ ಯಾಗ ಮಾಡಿದ ಫಲ ದೊರಕುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಇದಷ್ಟೇ ಅಲ್ಲದೇ ಶಿವರಾತ್ರಿ ಆಚರಣೆಗೆ ಕೆಲವು ವೈಜ್ಞಾನಿಕ ಕಾರಣಗಳು ಇವೆ ಎಂದು ಹೇಳಲಾಗುತ್ತದೆ. ಸೂರ್ಯ ಚಂದ್ರರ ಚಲನೆಯಿಂದಾಗುವ ಎಲ್ಲಾ ವ್ಯತ್ಯಾಸಕ್ಕೂ ನಮ್ಮ ದೇಹ ಒಗ್ಗಿಕೊಳ್ಳಬೇಕಾಗುತ್ತದೆ. ಶಿವರಾತ್ರಿ ಚಳಿಗಾಲ ಮುಗಿದು ಬೇಸಿಗೆಕಾಲ ಪ್ರಾರಂಭಗೊಳ್ಳುವ ಸಮಯ. ಅಂದರೆ ಈದ ದಿನ ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿದ್ದು, ಚಂದ್ರನ ಪ್ರಕಾಶಮಾನವೂ ಕ್ಷೀಣಿಸುತ್ತದೆ.

ಇನ್ನೂ ಪರಶಿವನಿಗೆ ನೀರಿನ ಅಭಿಷೇಕ ಹಾಗೂ ಬಿಲ್ವ ಪತ್ರೆಯ ಪೂಜೆ ಮಾಡುತ್ತೇವೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದ್ದು, ಬಿಲ್ವವನ್ನು ಲಿಂಗದ ಮೇಲಿಡುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುತ್ತದೆ. ಹೀಗಾಗಿ ನಮ್ಮ ದೇಹದಲ್ಲಿನ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಇನ್ನೂ ಶಿವನ ಲಿಂಗವನ್ನು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ. ಹೀಗಾಗಿ ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಇದರ ಜೊತೆ ಜೊತೆಗೆ ಶಿವನನ್ನು ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು, ಅದನ್ನು ಶಿವ ಶಕ್ತಿಯೆಂದೂ ಕರೆಯುವರು.

ಇದನ್ನೂ ಓದಿ : International Epilepsy Day : ಅಂತರಾಷ್ಟ್ರೀಯ ಅಪಸ್ಮಾರ ದಿನ : ಇದು ಮಾನಸಿಕ ಕಾಯಿಲೆ ಅಲ್ಲ; ಮೆದುಳಿನ ಅಸ್ವಸ್ಥತೆ

ಒಟ್ಟಾರೆಯಾಗಿ ಶಿವರಾತ್ರಿಯ ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯವಾಗಿದ್ದು, ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ, ಸ್ಪೂರ್ತಿ ಹುಟ್ಟಿಸುವ ಚಂದ್ರನ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು. ಈ ಪರ್ವಕಾಲ ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು, ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳು ಕಳೆಯುತ್ತದೆ ಎಂಬ ಪ್ರತೀತಿ ಸ್ಕಂದ ಪುರಾಣದಲ್ಲಿದೆ.

Maha Shivaratri 2023: Background of Maha Shivaratri, Do you know why the festival is celebrated?

Comments are closed.