ಕೊಳ್ಳೆಗಾಲದ ಉದನೂರಿನ ಆ ಮಾಂತ್ರಿಕ ತನ್ನನ್ನ ತಾನು ಮೋಡಿ ವಿದ್ಯೆಯ ಪಾರಂಗತ ಅಂತ ತೋರಿಸೋಕೆ ನನ್ನ ಕಣ್ಣ ಮುಂದೆಯೇ ಒಂದು ಪವಾಡ ಮಾಡಿದ್ದ.. ಒಂದು ಸಣ್ಣ ಮಡಿಕೆ, ಒಂದು ಕಪ್ ಅಕ್ಕಿ, ನೀರು ಹಾಕಿ ರಕ್ತ ಸೃಷ್ಟಿಸಿದ್ದ.. ಇದನ್ನ ಕಂಡ ನನ್ನ ಗೆಳೆಯ ಬಸಂತ್ ದೇವರಿಗೆ ಕೈ ಮುಗಿಯುತ್ತಿದ್ದರೆ, ನಾನು ಮಾಂತ್ರಿಕನಿಗೆ ಒಂದು ಪ್ರಶ್ನೆ ಕೇಳಿದ್ದೆ…ಮಹಾಗುರುಗಳೇ ನಿಮ್ಮ ಶಕ್ತಿಗೆ ನಾನು ಉಧೋ ಉಧೋ.. ಅಲ್ಲಾ ಅಕ್ಕಿ ನಿಮ್ಮ ಬಳಿಯೇ ಇತ್ತು.. ಮಡಿಕೆಯೂ ನಿಮ್ಮದೆ.. ಇನ್ನೂ ನೀರು ಕೂಡ ನಿಮ್ಮ ಮನೆಯದ್ದೇ.. ಇದೇ ರೀತಿ ಮಡಿಕೆ, ಅಕ್ಕಿ, ಮತ್ತು ನೀರನ್ನ ನಾನು ತಂದುಕೊಟ್ರೆ ಮಾಡ್ತೀರಾ ಅಂತ ಕೇಳಿದ್ದ.. ಮಾಂತ್ರಿಕ ತಡವರಿಸೋಕೆ ಶುರು ಮಾಡಿದ್ದ… ಹೌದು.. ಎಲ್ಲವೂ ವಿಜ್ಞಾನವೇ.. ಓದುಗರೇ ಅದು ಸಿಂಪಲ್ ಟೆಕ್ನಿಕ್.. ಅನೇಕ ಮೋಡಿ ಮತ್ತು ಮ್ಯಾಜಿಕ್ ಬುಕ್ ನಲ್ಲಿ ಈ ಟ್ರಿಕ್ ಇದೆ.

ಬಹುತೇಕ ಹಳ್ಳಿಗರೇ ಈತನಿಗೆ ಕಸ್ಟಮರ್ಸ್ ಆಗಿರೋ ಕಾರಣ ಅವರು ಓದಿರೋದಿಲ್ಲ.. ತಿಳುವಳಿಕೆಯೂ ಇರೋದಿಲ್ಲ.. ಹೀಗಾಗಿ ಮಡಿಕೆಗೆ ಅಕ್ಕಿ ಹಾಕಿ, ಅದರೊಳಗೆ ನೀರು ಸುರಿದರೆ, ಕೆಂಪು ನೊರೆಯಂತಹ ರಕ್ತ ಹೇಗೆ ಆಗುತ್ತೆ ಅನ್ನೋದು ಅವರಿಗೆ ಗೊತ್ತಿರೋದಿಲ್ಲ.. ಅದು ದೇವರ ಶಕ್ತಿ, ನಿಜಕ್ಕೂ ಯಾರೋ ಮಾಟ ಮಾಡಿಸಿದ್ದಾರೆ, ಅದನ್ನ ಈ ಮಾಂತ್ರಿಕ ತೆಗೆಯುತ್ತಿದ್ದಾನೆ ಅಂತಲೇ ಭಾವಿಸಿ ಸಾವಿರವೋ ಎರಡು ಸಾವಿರವೋ ಹಣ ಕೊಟ್ಟು ಅಲ್ಲಿಂದ ಬಂದು ಬಿಡ್ತಾರೆ…

ಆದ್ರೆ ನಾನು ಅಸಲಿ ಸತ್ಯದ ಬೆನ್ನತ್ತಿಕೊಂಡೇ ಅಲ್ಲಿಗೆ ಹೋದವನು.. ಸಾಕಷ್ಟು ವಿದ್ಯೆಗಳನ್ನ ಹೇಗೆ ಮಾಡ್ತಾರೆ ಅಂತ ಅನೇಕ ಪುಸ್ತಕಗಳನ್ನ ಓದಿಕೊಂಡಿದ್ದವನು.. ಈ ಟ್ರಿಕ್ ಮಾಡುತ್ತಲೇ ಅದರ ಹಿಂದೆ ಅಡಗಿರೋ ಸತ್ಯ ನನಗೆ ಗೊತ್ತಾಗಿತ್ತು… ಅಂದಾಗೆ ಈ ಮಾಂತ್ರಿಕ ನನ್ನ ಕೈಗೆ ಅಕ್ಕಿ ಕೊಟ್ಟನಲ್ಲ, ಅದರಲ್ಲಿ ಮೊದಲೆ ಪೊಟೆಶಿಯಂ ಬೆರೆತ್ತಿರುತ್ತದೆ.. ಅದು ನಮಗೆ ಗೊತ್ತಾಗೋದಿಲ್ಲ… ಇನ್ನು ಅದರೊಟ್ಟಿಗೆ ಗಂಧಕವನ್ನ ಬೆರೆಸಲಾಗಿರುತ್ತದೆ… ಜೊತೆಗೆ ರಕ್ತ ಚಂದನದ ಬೇರನ್ನ ಸಣ್ಣಗೆ ಕುಟ್ಟಿ ಪುಡಿ ಮಾಡಿ ಸಿದ್ದವಾಗಿಸಿದ್ದ ಅಕ್ಕಿಯದು.. ಅದನ್ನ ನಮ್ಮ ಕೈಗೆ ಕೊಡ್ತಾನೆ..
ಮಡಿಕೆಯೊಳಗೆ ಹಾಕಿ ಅದರಲ್ಲಿ ನೀರು ಸುರಿದರೆ, ಪೋಟ್ಯಾಶಿಯಂ ಗಂಧಕದ ಜೊತೆ ಹೆಚ್2ಓ ಅಂದ್ರೆ ನೀರು ಬೆರೆತಾಗ ಬುಗ್ಗೆ ಏಳ ತೊಡಗುತ್ತೆ.. ಇನ್ನು ರಕ್ತ ಚಂದನ ಮಿಕ್ಸ್ ಆಗಿರುತ್ತಲ್ಲ, ಹೀಗಾಗಿ ಬಿಸಿಗೆ ಅದು ಕರಗಿ ಕೆಂಪಾಗಿ ರಕ್ತದಂತೆ ಹೊರ ಬರುತ್ತದೆ ಅಷ್ಟೆ… ಇದನ್ನ ಕಂಡು ಜನ ಭಯ ಬೀಳ್ತಾರೆ.. ಇದೊಂದೆ ಅಲ್ಲ ಇಂತಹ ಹತ್ತಾರು ವಿದ್ಯೆಗಳನ್ನ ಕಲಿತು ಜನರನ್ನ ಯಾಮಾರಿಸುತ್ತಾರೆ…

ನಾನು ಪೊಟೆಶಿಯಂ ಗಂಧಕ ಎಲ್ಲಿಂದ ತಂದ್ರಿ ಅಂತ ಕೇಳಿದ್ದೆ.. ಅಷ್ಟೆ ಮಾಂತ್ರಿಕ ಸಿಟ್ಟಾಗಿಬಿಟ್ಟ… ಯಾವ ರಸಾಯನಿಕವೂ ಇಲ್ಲ..ನೀವು ಇನ್ನು ಹೊರಡಬಹುದು ಅಂದಿದ್ದ.. ಹೊರಗಡೆ ಜನ ನನಗಾಗಿ ಕಾಯುತ್ತಿದ್ದಾರೆ..ನಂಬಿ ಬರೋಕೆ ಅವರ್ಯಾರು ಮೂರ್ಖರಲ್ಲ ಅಂತಲೂ ಹೇಳಿದ್ದ.. ನಾವು ಮುಸಿ ಮುಸಿ ನಗುತ್ತಾ ಅಲ್ಲಿಂದ ಹೊರಗಡೆ ಎದ್ದು ಬಂದ್ವಿ… ಹೊರಗೆ ಸಾಲುಗಟ್ಟಲೇ ಜನ ನಿಂತಿದ್ರು.. ತಲೆಗೆ ಹರಳೆಣ್ಣೆ ಹಚ್ಕೊಂಡು ಚೆಂಡು ಹೂ ಇಟ್ಕೊಂಡು ನಿಂತಿದ್ದವರೇ ಹೆಚ್ಚು… ಅವರನ್ನ ನೋಡಿ ನಗು ಬಂತೆ ಹೊರತು ಅನುಕಂಪವಲ್ಲ..ಇದೆಲ್ಲಾ ಸುಳ್ಳು ಅಂದ್ರೆ ನಂಬೋ ಜನರೂ ಅವರಲ್ಲ.. ಇವತ್ತಿಗು ಇಂತಹ ಜನ ನಮ್ಮ ದೇಶದಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ..

ಒಂದಿಷ್ಟು ಮ್ಯಾಜಿಕ್ ಕಲಿತು ನಾವು ಮಹಾ ಮಾಂತ್ರಿಕರು ಅನ್ನೋ ಇವರು ಮುಗ್ಧರನ್ನ ವಂಚಿಸುತ್ತಾಲೆ ಇದ್ದಾರೆ. ನಾವು ಕೊತ್ತ ಮಲೆಯಾಳದ ಮಹಾಂತಚಾರಿ ವಂಶಸ್ಥರು, ನಮ್ಮದು 800 ವರ್ಷಗಳ ಇತಿಹಾಸ ಅಂತ ಬೊಗಳೇ ಬಿಡೋ ಇವರ ಮಾತನ್ನ ನಂಬಿ ಹೂಂ ಹೂಂ ಅಂತಲೇ ಅನೇಕ ರಹಸ್ಯಗಳನ್ನ ಪತ್ತೆ ಹಚ್ಚಿದವನು ನಾನು.. ಮೋಡಿ ವಿದ್ಯೆಯ ಒಂದಷ್ಟು ಟ್ರಿಕ್ಗಳ ಬಗ್ಗೆ ತಿಳಿಸ್ತೀನಿ ಮುಂದಿನ ಸಂಚಿಕೆಯಲ್ಲಿ…
(ಮುಂದುವರಿಯುತ್ತದೆ…)
- ಕೆ.ಆರ್.ಬಾಬು