ಅಡುಗೆಮನೆಯಲ್ಲಿ ದೇವರಮನೆಯಿರುವುದು ಸರಿನಾ ಅಥವಾ ತಪ್ಪಾ? ವಾಸ್ತು ನಂಬಿಕೆ ಏನು ಹೇಳುತ್ತದೆ?

ಅಡುಗೆಮನೆಯಲ್ಲಿ ದೇವರಮನೆ ಏಕಿರಬಾರದು? ವಾಸ್ತು ನಿಯಮ ಹೇಳುವುದೇನು? ಇಲ್ಲಿದೆ ಓದಿ.

ಇತ್ತೀಚಿನ ನಗರ ಪ್ರದೇಶದಲ್ಲಿ ಹೆಚ್ಚಾಗಿ ಜನರು ಅಪಾರ್ಟ್‌ಮೆಂಟ್‌, ಮಿನಿ ಅಪಾರ್ಟ್‌ಮೆಂಟ್‌ಗಳನ್ನೇ ವಾಸಕ್ಕೆ ಆಯ್ದುಕೊಳ್ಳುತ್ತಾರೆ. ಅಲ್ಲಿನ ಮನೆಗಳನ್ನು ಕಡಿಮೆ ಜಾಗದಲ್ಲಿ ಹೆಚ್ಚು ಅನುಕೂಲಗಳು ಸಿಗುವಂತೆ ಕಟ್ಟಿರುತ್ತಾರೆ. ಕೆಲವೊಂದಕ್ಕೆ ಪ್ರತ್ಯೇಕ ರೂಮುಗಳನ್ನು ನಿರ್ಮಿಸಿರುವುದಿಲ್ಲ. ಉದಾಹರಣೆಗೆ ದೇವರ ಮನೆ. ಅದನ್ನು ಅಡುಗೆಮನೆಯಲ್ಲಿಯೋ, ಹಾಲ್‌ನಲ್ಲಿಯೋ ಅಥವಾ ಎಲ್ಲೋ ಚಿಕ್ಕ ಜಾಗದಲ್ಲೋ ಹೊಂದಿಸಿ ನಿರ್ಮಿಸಿರುತ್ತಾರೆ. ಮನೆಗೆ ಅಡುಗೆ ಮನೆ ಎಷ್ಟು ಮುಖ್ಯವೋ ಅದೇ ರೀತಿ ದೇವರ ಮನೆಯೂ ಅಷ್ಟೇ ಮುಖ್ಯ. ಅಡುಗೆ ಮನೆ ಅನ್ನಪೂರ್ಣೇಶ್ವರಿಯ ವಾಸಸ್ಥಾನ. ಇದು ಮನೆಗೆ ಧನಾತ್ಮಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ತರುತ್ತದೆ. ಅಂತಹ ಅಡುಗೆ ಮನೆಯ ಚಿಕ್ಕ ಮೂಲೆಯಲ್ಲಿ ದೇವರ ಮನೆ ನಿರ್ಮಿಸುವುದು ವಾಸ್ತು ಪ್ರಕಾರ ಶುಭವಲ್ಲವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ದೇವರ ಮನೆ ಏಕಿರಬಾರದು? ಅದರಿಂದ ಏನಾದ್ರೂ ತೊಂದರೆಯಿದೆಯೇ ಎಂದು ನೋಡೋಣ.

ಅಡುಗೆ ಮನೆಯಲ್ಲಿ ದೇವರ ಮನೆ ಏಕಿರಬಾರದು?

ಎಲ್ಲಾ ಅಡುಗೆ ಮನೆಯಲ್ಲಿ ಪಾತ್ರ ತೊಳೆಯುವ ಸಿಂಕ್‌ ಇರುವುದು ಸಾಮಾನ್ಯ. ಅಲ್ಲಿ ಕೊಳೆಯಾದ ಪಾತ್ರೆಗಳನ್ನು ತೊಳೆಯಲಾಗುತ್ತದೆ. ದೇವರ ಮನೆಯು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಕೊಳೆಯಾದ ಪಾತ್ರೆಗಳನ್ನು ತೊಳೆಯುವುದರಿಂದ ದೇವರಮನೆಗಿರುವ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಸ್ತು ಹೇಳುತ್ತದೆ. ಆದ್ದರಿಂದ ಅಡುಗೆ ಮನೆಯಲ್ಲಿ ಎಂದಿಗೂ ದೇವರ ಮನೆ ಇರಬಾರದು.

ತಾಮಸಿಕ ಆಹಾರಗಳು

ಅನೇಕ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಅಥವಾ ಮಾಂಸವನ್ನು ಅಡುಗೆಮನೆಯಲ್ಲಿ ತಯಾರಿಸಲಾಗುತ್ತದೆ. ಈ ಆಹಾರಗಳನ್ನು ತಯಾರಿಸಿದಾಗ ಅಡುಗೆಮನೆಯಲ್ಲಿರುವ ದೇವರ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸೃಷ್ಟಿಯಾಗುತ್ತದೆ. ಇದು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.

ಕಸದ ಬುಟ್ಟಿ

ಅಡುಗೆ ಮನೆಯಲ್ಲಿ ಕಸದ ಬುಟ್ಟಿಯನ್ನು ಸಹ ಇಡಲಾಗುತ್ತದೆ. ಅದು ಕೂಡಾ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಆದ್ದರಿಂದ ಅಡುಗೆ ಮನೆಯಲ್ಲಿ ದೇವರ ಮನೆ ಇರಬಾರದು ಎನ್ನಲಾಗುತ್ತದೆ.

ದೇವರ ಮನೆಗೆ ಯಾವ ದಿಕ್ಕು ಶುಭ?

ವಾಸ್ತು ಪ್ರಕಾರ, ಈಶಾನ್ಯ ಮೂಲೆಯು ದೇವರಮನೆಗೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಗುರು ಮತ್ತು ಶಿವ ಈ ದಿಕ್ಕಿನಲ್ಲಿ ವಾಸಿಸುತ್ತಾರೆ. ಈ ದಿಕ್ಕಿನಲ್ಲಿ ದೇವರ ಪೂಜೆ ಮಾಡುವುದರಿಂದ ಸಾಧಕರ ಮನಸ್ಸಿಗೆ ಶಾಂತಿ ಸಿಗುತ್ತದೆ. ಪರ್ಯಾಯವಾಗಿ, ಪೂರ್ವ ಅಥವಾ ಉತ್ತರ ದಿಕ್ಕುಗಳಲ್ಲಿಯೂ ದೇವರಮನೆಯನ್ನು ನಿರ್ಮಿಸಬಹುದು.

ಇದನ್ನೂ ಓದಿ: ಅಧಿಕ ಮಾಸ 2026 : ಲಕ್ಷ್ಮಿನಾರಾಯಣನ ಕೃಪೆಗಾಗಿ ಈ 5 ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ

ಈ ವಿಷಯ ನೆನಪಿಡಿ

ಮೆಟ್ಟಿಲುಗಳ ಕೆಳಗೆ: ದೇವರಮನೆಯನ್ನು ಎಂದಿಗೂ ಮೆಟ್ಟಿಲುಗಳ ಕೆಳಗೆ ನಿರ್ಮಿಸಬಾರದು. ಮೆಟ್ಟಿಲುಗಳ ಮೇಲೆ ಜನರ ಓಡಾಡುವುದರಿಂದ ಇದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ.

ಸ್ನಾನಗೃಹದ ಹತ್ತಿರ ಅಥವಾ ಮುಂದೆ : ದೇವರಮನೆಯನ್ನು ಸ್ನಾನಗೃಹದ ಹತ್ತಿರ ಅಥವಾ ಮುಂದೆ ಇರಬಾರದು. ಅಷ್ಟೇ ಅಲ್ಲದೇ ಡುಪ್ಲೆಕ್ಸ್‌ ಮನೆಗಳಲ್ಲಿ ದೇವಾಲಯದ ಮೇಲೆ ಶೌಚಾಲಯವನ್ನು ನಿರ್ಮಿಸಬಾರದು.

ಮಲಗುವ ಕೋಣೆ : ವಾಸ್ತು ಪ್ರಕಾರ, ಮಲಗುವ ಕೋಣೆಯಲ್ಲಿ ದೇವರಮನೆಯಿದ್ದರೆ ಅದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಮಲಗುವಾಗ ದೇವರ ಕಡೆಗೆ ಪಾದಗಳು ತೋರಿಸುವಂತಾಗಬಹುದು. ಹಾಗಾಗಿ ಅಲ್ಲಿ ದೇವರಮನೆ ಇರಬಾರದು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.