Varadahalli Sridhara Swami Ashram : ಪಾಪವಿನಾಶಿ ತೀರ್ಥ : ಭಕ್ತರ ಪಾಲಿಸುವ ಶ್ರೀಕ್ಷೇತ್ರ : ಭಕ್ತರ ಪಾಲಿಗೆ ಕಾಮಧೇನು ವರದಹಳ್ಳಿ ಶ್ರೀಧರಾಶ್ರಮ

ಕರುನಾಡಿನಲ್ಲಿ ಪುಣ್ಯಕ್ಷೇತ್ರಗಳಿಗೆ ಬರವಿಲ್ಲ. ಇಂತಹ ಪುಣ್ಯಕ್ಷೇತ್ರಗಳಲ್ಲಿ ಭಕ್ತರ ಪಾಲಿನ ಕಾಮಧೇನು ಎನ್ನಿಸಿದ ಶ್ರೀಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ವರದಹಳ್ಳಿ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಕೇವಲ ಮಾನವನ ಉದ್ಧಾರವಲ್ಲದೇ ಮತ್ತೆನನ್ನೂ ಧ್ಯಾನಿಸದೇ ತಪ್ಪಸ್ಸುಗೈಯ್ದ ಶ್ರೀಶ್ರೀಧರ ಸ್ವಾಮಿಗಳು ( Varadahalli Sridhara Swami Ashram) ನೆಲೆ ನಿಂತ ಈ ಕ್ಷೇತ್ರ ನರಜನ್ಮದ ಎಲ್ಲ ನೋವುಗಳನ್ನು ನೀಗಬಲ್ಲ ತಪೋಧಾಮ. ಸದ್ಭಕ್ತರ ಪಾಲಿನ ಶೃದ್ಧಾಕೇಂದ್ರ.

ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಸಾಗಿ ಬಂದ್ರೆ ಸಾಗರ ಪಟ್ಟಣದಿಂದ 7-8 ಕಿಲೋಮೀಟರ್ ದೂರದಲ್ಲಿರುವ ವರದಹಳ್ಳಿ ಶತಮಾನ ಗಳಿಂದ ಭಕ್ತರ ಪೊರೈಯುವ ತಾಣವಾಗಿ ಬೆಳೆದುಬಂದಿದೆ. ವರದಹಳ್ಳಿಯಲ್ಲಿ ಗೋಮುಖದಿಂದ ಒಂದು ಹೆಬ್ಬೆಟ್ಟಿಗಿಂತಲೂ ದಪ್ಪವಾಗಿ ಹರಿಯುವ ಶ್ರೀಧರ ತೀರ್ಥವಿದ್ದು ವರ್ಷಪೂರ್ತಿ ಬತ್ತದೇ ಹರಿಯುತ್ತ ಅದೇಷ್ಟೋ ವರ್ಷಗಳಿಂದ ಭಕ್ತರ ದುಃಖ ಕಳೆಯುವ ಪಾಪನಾಶಿಯಾಗಿ ಈ ತೀರ್ಥ ಹರಿಯುತ್ತಿದೆ.

ಕಡ್ಡಾಯವಾಗಿ ಈ ತೀರ್ಥದಲ್ಲಿ ಮಿಂದು ನೀವು ಶ್ರೀಶ್ರೀಧರ ಸ್ವಾಮಿಗಳ ದರ್ಶನಕ್ಕೆ ತೆರಳಬೇಕು. ವರ್ಷದ 365 ದಿನವೂ ಒಂದೇ ಅಳತೆಯಲ್ಲಿ ಗೋಮುಖದ್ವಾರದಿಂದ ಹರಿಯುವ ಈ ಪವಿತ್ರ ಜಲ ಅನಾರೋಗ್ಯ,ಚರ್ಮ ರೋಗ, ಮಾನಸಿಕ ಖಿನ್ನತೆ ಪರಿಹರಿಸುವ ಶಕ್ತಿ ಹೊಂದಿದೆ ಎಂದು ಭಕ್ತರು ನಂಬುತ್ತಾರೆ. ಹೀಗೆ ತಲೆಯ ಮೇಲೆ ಧುಮುಕುವ ಈ ಜಲಧಾರೆಯಡಿ ನಿಂತು ಮಿಂದು ಪುನೀತರಾದರೇ ತಿರುಪತಿಯನ್ನು ನೆನಪಿಸುವಂತ ಮೆಟ್ಟಿಲುಗಳನ್ನು ಹತ್ತಿ ನೀವು ಶ್ರೀಶ್ರೀಧರಸ್ವಾಮಿಗಳ ದರ್ಶನಕ್ಕೆ ತೆರಳಬೇಕು.

ತ್ರಿಕಾಲ ಅತ್ಯಂತ ಮಡಿಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಶ್ರೀಧರ ಸ್ವಾಮಿಗಳ ಸಮಾಧಿ ಸ್ಥಳವಾಗಿರುವ ಇಲ್ಲಿ ಶುದ್ಧಮನಸ್ಸಿನಿಂದ ಭಕ್ತಿಯಿಂದ ಬೇಡಿಕೊಳ್ಳುವ ಎಲ್ಲ ಬೇಡಿಕೆಗಳನ್ನು ಸ್ವಾಮಿಗಳು ಈಡೇರಿಸುತ್ತಾರೆ ಎಂಬುದು ಲಕ್ಷಾಂತರ ಭಕ್ತರ ನಂಬಿಕೆ. ಮಹಾರಾಷ್ಟ್ರ, ಬೆಳಗಾವಿ, ಬೆಂಗಳೂರು ಸೇರಿದಂತೆ ದೇಶದ ನಾನಾಭಾಗಗಳಿಂದ ಸದಾಕಾಲ ಭಕ್ತರು ತಮ್ಮ ದುಃಖ,ಕಷ್ಟ,ಕಾರ್ಪಣ್ಯಗಳನ್ನು ಹೊತ್ತು ಈ ಸನ್ನಿಧಿಗೆ ಬರುತ್ತಾರೆ.

“ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮಸ್ವರೂಪಿಣೆ, ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋನಮಃ” ಹಾಗೂ ಶ್ರೀರಾಮ ಜಯರಾಮ ಜಯ ಜಯ ರಾಮ ಇದು ಶ್ರೀಶ್ರೀಧರಸ್ವಾಮಿಗಳು ತಮ್ಮ ಭಕ್ತರಿಗೆ ಬಿಟ್ಟು ಹೋದ ಶಕ್ತಿಯಮಂತ್ರಗಳಾಗಿವೆ. ಇವುಗಳನ್ನು ಸದಾಕಾಲ ಶುದ್ಧಮನಸ್ಸಿನಿಂದ ಪಠಿಸುವುದರಿಂದ ಎಲ್ಲ ದುರಿತಗಳನ್ನು ಕಳೆದುಕೊಳ್ಳಬಹುದೆಂದು ಶ್ರೀಗಳು ತಮ್ಮ ಹಲವಾರು ಉಪನ್ಯಾಸಗಳಲ್ಲಿ ಆರ್ಶೀವಾದ ರೂಪದಲ್ಲಿ ಹೇಳಿರೋದರಿಂದ ಭಕ್ತರ ಮನೆ-ಮನಗಳಲ್ಲಿ ಈ ಮಂತ್ರ ಸದಾ ನೆಲೆಸಿದೆ.

ಶ್ರೀಧರ ಸ್ವಾಮಿಗಳು ತಪೋನಿರತರಾದ ಈ ಕ್ಷೇತ್ರದಲ್ಲಿ ಗೋವುಗಳಿಗೆ ದೇವರಷ್ಟೇ ಮಹತ್ವವಿದ್ದು, ಗೋಶಾಲೆಯಲ್ಲಿ ನೂರಾರು ಗೋವುಗಳು ಕಾಣಸಿಗುತ್ತವೆ. ಧರ್ಮಸಂಸ್ಥಾಪನೆ ಹಾಗೂ ಧಾರ್ಮಿಕ ಆಚರಣೆಗಳ ಮಹತ್ವದ ಸಾರಿದ್ದ ಶ್ರೀಧರ ಸ್ವಾಮಿಗಳು ಇಲ್ಲಿ ವೇದಪಾಠಶಾಲೆಯನ್ನು ಸ್ಥಾಪಿಸಿದ್ದು, ನೂರಾರು ವಿದ್ಯಾರ್ಥಿಗಳು ಸಾತ್ವಿಕವಾತಾವರಣದಲ್ಲಿ ಕಠಿಣವಾದ ನಿಯಮಗಳೊಂದಿಗೆ ವೇದಾಧ್ಯಯನದಲ್ಲಿ ತೊಡಗಿದ್ದಾರೆ. ಇನ್ನು ಶ್ರೀಧರಸ್ವಾಮಿಗಳ ಆಶಯದಂತೆ ಇಲ್ಲಿ ಪ್ರಸಾದ ಭೋಜನ ಶಾಲೆ ಇದ್ದು ಮೂರು ಹೊತ್ತು ಹಸಿದು ಬಂದ ಭಕ್ತರಿಗೆ ಪ್ರಸಾದ ಭೋಜನ, ಉಪಹಾರದ ವ್ಯವಸ್ಥೆ ಇದೆ. ದತ್ತಜಯಂತಿ, ಶ್ರೀರಾಮನವಮಿ, ದಾಸನವಮಿ, ನವರಾತ್ರಿಗಳಲ್ಲಿ ವಿಜಯದಶಮಿಯಂದು ವಿಶೇಷ ಪೂಜೆ ಹಾಗೂ ಉತ್ಸವಗಳನ್ನು ನಡೆಸಲಾಗುತ್ತದೆ.

ವರದಹಳ್ಳಿಯ ಸಮೀಪದಲ್ಲೇ, ಶ್ರೀಶ್ರೀಧರಸ್ವಾಮಿಗಳು ಕಲಾವೃದ್ಧಿಗೊಳಿಸಿದ ಶ್ರೀದುರ್ಗಾಂಬಾ ದೇವಿಯ ದೇವಾಲಯ ಹಾಗೂ ನಾಗಬನ ಗಳಿದ್ದು, ಅವುಗಳು ಕೂಡ ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿಯಾಗಿ ಪೊರೆಯುತ್ತಿವೆ. ಶ್ರೀಧರಸ್ವಾಮಿಗಳು ತಪಸ್ಸು ಮಾಡಿದ ಈ ಸ್ಥಳದಲ್ಲಿ ಇಂದಿಗೂ ಅವರು ಅದೃಶ್ಯರೂಪದಲ್ಲಿ ನೆಲೆನಿಂತು ಭಕ್ತರನ್ನು ಪೊರೈಯುತ್ತಿದ್ದಾರೆ ಎಂಬ ನಂಬಿಕೆ ಭಕ್ತರಲ್ಲಿದೆ.

ವಿಶೇಷವಾಗಿ ಮಕ್ಕಳಾಗದವರು, ಆರೋಗ್ಯ ಸಮಸ್ಯೆಗೆ ಒಳಗಾದವರು ಹೀಗೆ ಬದುಕಿನ ನಾನಾ ದುರಿತಗಳಲ್ಲಿ ನೊಂದವರು ಶ್ರೀ ಶ್ರೀಧರ ಸ್ವಾಮಿಗಳ ಪಾದಕ್ಕೆ ಶರಣು ಬಂದು ತಮ್ಮ ಕಷ್ಟ ಕಳೆದುಕೊಂಡು ಜೀವನ್ಮುಕ್ತಿ ಪಡೆದ ಉದಾಹರಣೆ ಸಾವಿರ-ಸಾವಿರ. ಹೀಗಾಗಿ ವರದಹಳ್ಳಿ ಸದ್ಭಕ್ತರ ಪಾಲಿಗೆ ಅಕ್ಷರಷಃ ವರ ರೂಪವೇ ಆಗಿದೆ.

ಇದನ್ನೂ ಓದಿ : ಕಂಕಣಬಲ, ಸಂತಾನಫಲ ಕರುಣಿಸುತ್ತೆ ಈ ಪುಣ್ಯಕ್ಷೇತ್ರ !

ಇದನ್ನೂ ಓದಿ : 800 ವರ್ಷಗಳಿಂದ ಈ ದೇವಾಲಯದಲ್ಲಿದೆ ಸಂತನೊಬ್ಬನ ದೇಹ : ವಿಸ್ಮಯ ಮಾಡ್ತಿದ್ದಾನೆ ಮಹಾವಿಷ್ಣು

( The pilgrimage Varadapura Varadahalli Sridhara Swami Ashram )

Comments are closed.