Maha Shivratri 2026 : ಮಹಾಶಿವರಾತ್ರಿಯನ್ನು ಏಕೆ ಆಚರಿಸುತ್ತಾರೆ ?

Maha Shivratri 2026 : ಭಾರತೀಯ ಸಂಸ್ಕೃತಿಯಲ್ಲಿ ಶಿವರಾತ್ರಿಗೆ ವಿಶೇಷ ಸ್ಥಾನವಿದೆ. ಪ್ರತಿ ತಿಂಗಳು ಶಿವರಾತ್ರಿ ಬದರೂ, ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಬರುವ ರಾತ್ರಿಯನ್ನು ‘ಮಹಾಶಿವರಾತ್ರಿ’ ಎಂದು ಕರೆಯಲಾಗುತ್ತದೆ. ಈ ದಿನ ಶಿವನ ಭಕ್ತರು ಉಪವಾಸ, ಜಾಗರಣೆ ಮತ್ತು ಧ್ಯಾನದ ಮೂಲಕ ಲಯಕಾರಕ ಶಿವನನ್ನು ಆರಾಧಿಸುತ್ತಾರೆ.
Maha Shivratri 2026 : ಶಿವರಾತ್ರಿಯನ್ನು ಏಕೆ ಆಚರಿಸುತ್ತಾರೆ ?
ಮಹಾಶಿವರಾತ್ರಿಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತದೆ. ಶಿವರಾತ್ರಿಯ ಆಚರಣೆಯ ಹಿಂದೆ ಸಾಕಷ್ಟು ಆಸಕ್ತಿದಾಯಕ ಪುರಾಣದ ಕಥೆಗಳಿವೆ.
- ಶಿವ-ಪಾರ್ವತಿಯರ ವಿವಾಹ: ಶಿವಪುರಾಣದ ಪ್ರಕಾರ, ಈ ಪವಿತ್ರ ದಿನದಂದೇ ಕೈಲಾಸಪತಿ ಶಿವ ಮತ್ತು ತಾಯಿ ಪಾರ್ವತಿಯ ವಿವಾಹ ಮಹೋತ್ಸವ ನಡೆಯಿತು. ಇದು ಪ್ರಕೃತಿ ಮತ್ತು ಪುರುಷನ ಮಿಲನದ ಸಂಕೇತವಾಗಿದೆ.
- ಲಿಂಗೋದ್ಭವ: ಬ್ರಹ್ಮ ಮತ್ತು ವಿಷ್ಣುವಿನ ನಡುವೆ ‘ಯಾರು ಶ್ರೇಷ್ಠ?’ ಎಂಬ ಅಹಂಕಾರದ ಜಗಳ ನಡೆದಾಗ, ಶಿವನು ದೈತ್ಯಾಕಾರದ ಜ್ಯೋತಿರ್ಲಿಂಗವಾಗಿ ಅವತರಿಸಿದ ದಿನವೇ ಈ ಶಿವರಾತ್ರಿ. ಅಹಂಕಾರವನ್ನು ಅಳಿಸಿ ಜ್ಞಾನದ ಜ್ಯೋತಿಯನ್ನು ಬೆಳಗುವುದೇ ಇದರ ಅರ್ಥ.
- ಹಾಲಾಹಲ ಪಾನ: ಸಮುದ್ರ ಮಂಥನದ ವೇಳೆ ಉದ್ಭವಿಸಿದ ಭೀಕರ ‘ಹಾಲಾಹಲ’ ವಿಷವನ್ನು ಲೋಕ ಕಲ್ಯಾಣಕ್ಕಾಗಿ ಶಿವನು ಕುಡಿದು ‘ನೀಲಕಂಠ’ನಾದನು. ಈ ಅಪಾಯದಿಂದ ಜಗತ್ತನ್ನು ರಕ್ಷಿಸಿದ ಶಿವನಿಗೆ ಕೃತಜ್ಞತೆ ಸಲ್ಲಿಸಲು ಈ ಹಬ್ಬ ಆಚರಿಸಲಾಗುತ್ತದೆ.
ಶಿವರಾತ್ರಿಯಂದು ಜಾಗರಣೆ ಯಾಕೆ ಮಾಡಬೇಕು ?
ಶಿವರಾತ್ರಿಯಂದು ರಾತ್ರಿಯಿಡೀ ನಿದ್ರಿಸದೆ ‘ಜಾಗರಣೆ’ ಮಾಡುವುದು ಅತ್ಯಂತ ಮುಖ್ಯವಾದ ವಿಧಿ. ಇದರ ಹಿಂದೆ ಬಲವಾದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ:
Also Read : ಕುಂಭ ಸಂಕ್ರಮಣ 2026: ಕುಂಭ ರಾಶಿಗೆ ಸೂರ್ಯನ ಪ್ರವೇಶ; ನಿಮ್ಮ ರಾಶಿಯ ಫಲಾಫಲ ಇಲ್ಲಿದೆ!
ಆಧ್ಯಾತ್ಮಿಕ ಜಾಗೃತಿ: ‘ಜಾಗರಣೆ’ ಎಂದರೆ ಕೇವಲ ಎಚ್ಚರವಾಗಿರುವುದಲ್ಲ, ಅದು ಅಂತರಂಗದ ಅರಿವನ್ನು ಜಾಗೃತಗೊಳಿಸಿಕೊಳ್ಳುವುದು. ನಮ್ಮಲ್ಲಿರುವ ಕಾಮ, ಕ್ರೋಧ, ಲೋಭದಂತಹ ಅಂಧಕಾರವನ್ನು ದೂರಮಾಡಿ ಜ್ಞಾನದ ಬೆಳಕನ್ನು ಪಡೆಯುವುದು ಇದರ ಉದ್ದೇಶ.
ಗ್ರಹಗತಿಗಳ ಪ್ರಭಾವ: ಶಿವರಾತ್ರಿಯಂದು ಭೂಮಿಯ ಉತ್ತರ ಗೋಳಾರ್ಧದಲ್ಲಿ ನೈಸರ್ಗಿಕವಾಗಿ ಶಕ್ತಿಯು ಮೇಲ್ಮುಖವಾಗಿ ಚಲಿಸುತ್ತದೆ. ಈ ಸಮಯದಲ್ಲಿ ಬೆನ್ನುಮೂಳೆಯನ್ನು ನೇರವಾಗಿ ಇಟ್ಟುಕೊಂಡು (ಕುಳಿತುಕೊಂಡು) ಜಾಗರಣೆ ಮಾಡುವುದರಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಯೋಗ ವಿಜ್ಞಾನ ಹೇಳುತ್ತದೆ.
ಧ್ಯಾನದ ಶಕ್ತಿ: ರಾತ್ರಿಯ ನಿಶ್ಯಬ್ದದಲ್ಲಿ ಶಿವನ ನಾಮಸ್ಮರಣೆ ಮಾಡುವುದರಿಂದ ಮನಸ್ಸು ಶಾಂತವಾಗಿ, ಏಕಾಗ್ರತೆ ಹೆಚ್ಚುತ್ತದೆ.
Also Read : ಭಾರತದ ಅಡುಗೆಗೆ ಟೇಸ್ಟ್‌ಅಟ್ಲಾಸ್ ಗರಿ: ಟಾಪ್ 15ರಲ್ಲಿ ಎಷ್ಟನೇ ಸ್ಥಾನ?
ಶಿವರಾತ್ರಿಯಂದು ಭಕ್ತರು ಬೆಳಿಗ್ಗೆಯಿಂದಲೇ ಉಪವಾಸ ವ್ರತ ಕೈಗೊಳ್ಳುತ್ತಾರೆ. ಶಿವಲಿಂಗಕ್ಕೆ ಹಾಲು, ಮೊಸರು, ಜೇನುತುಪ್ಪ ಮತ್ತು ಗಂಗಾಜಲದಿಂದ ಅಭಿಷೇಕ ಮಾಡಲಾಗುತ್ತದೆ. ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸಿ ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸುತ್ತಾರೆ. ರಾತ್ರಿಯ ನಾಲ್ಕು ಪ್ರಹರಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಮಹಾಶಿವರಾತ್ರಿಯು ಕೇವಲ ಒಂದು ಆಚರಣೆಯಲ್ಲ; ಅದು ನಮ್ಮೊಳಗಿನ ಶಿವತ್ವವನ್ನು (ಪರಮಾನಂದವನ್ನು) ಗುರುತಿಸುವ ಪ್ರಕ್ರಿಯೆ. ಉಪವಾಸದಿಂದ ದೇಹ ಶುದ್ಧಿಯಾದರೆ, ಜಾಗರಣೆಯಿಂದ ಮನಸ್ಸಿನ ಶುದ್ಧಿಯಾಗುತ್ತದೆ.
Maha Shivratri 2026 Why Do We Celebrate It Significance and History



