Ravichandran Ashwin : “ನಿನ್ನನ್ನು ಇನ್ನೂ ನಾನು ಬ್ಲಾಕ್ ಮಾಡಿಲ್ಲವೇ” ರವಿಚಂದ್ರನ್ ಅಶ್ವಿನ್ ಹೀಗಂದದ್ದು ಯಾರಿಗೆ, ಯಾಕೆ?

ಬೆಂಗಳೂರು: ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin) ಆಟದಲ್ಲಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲೂ ಪಂಚಿಂಗ್ ಲೈನ್’ಗಳನ್ನು ಹಾಕೋದ್ರಲ್ಲಿ ಪಂಟರ್. ಇದೀಗ ಅಶ್ವಿನ್ ತಮ್ಮನ್ನು ಕೆಣಕುವ ರೀತಿಯಲ್ಲಿ ಟ್ವೀಟ್ ಮಾಡಿದ ಶ್ರೀಲಂಕಾದ ಕ್ರಿಕೆಟ್ ಪಂಡಿತನೊಬ್ಬನಿಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಟ್ವೀಟ್ ಏಟು ಕೊಟ್ಟಿದ್ದಾರೆ.

ಬಾಂಗ್ಲಾದೇಶ ವಿರುದ್ದ ಮೀರ್’ಪುರದ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ (India vs Bangladesh test match) ಪಂದ್ಯವನ್ನು ಭಾರತ 3 ವಿಕೆಟ್’ಗಳಿಂದ ರೋಚಕವಾಗಿ ಗೆದ್ದುಕೊಂಡಿತ್ತು. ಗೆಲ್ಲಲು 145 ರನ್’ಗಳ ಗುರಿ ಬೆನ್ನಟ್ಟಿದ ಭಾರತ 3ನೇ ದಿನದಂತ್ಯಕ್ಕೆ 45 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 4ನೇ ದಿನ ಆಟ ಮುಂದುವರಿಸಿದ ಟೀಮ್ ಇಂಡಿಯಾ 74 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತ್ತು.

ಸೋಲಿನ ಸುಳಿಗೆ ಸಿಲುಕಿದ್ದ ಭಾರತಕ್ಕೆ ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ ಆಸರೆಯಾಗಿದ್ದರು. ಈ ಜೋಡಿ ಮುರಿಯದ 8ನೇ ವಿಕೆಟ್’ಗೆ 71 ರನ್ ಸೇರಿಸಿ ಭಾರತವನ್ನು ಗೆಲುವಿನ ದಡ ಸೇರಿಸಿತು. 8ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಶ್ರೇಯಸ್ ಅಯ್ಯರ್ ಅಜೇಯ 29 ರನ್ ಗಳಿಸಿದ್ರೆ, 9ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಅಶ್ವಿನ್ ಅತ್ಯಂತ ಒತ್ತಡದ ಸನ್ನಿವೇಶದಲ್ಲಿ ತಮ್ಮೆಲ್ಲಾ ಅನುಭವವನ್ನು ಧಾರೆ ಎರೆದು 62 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 42 ರನ್ ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.ಪಂದ್ಯದಲ್ಲಿ ಒಟ್ಟು 6 ವಿಕೆಟ್ ಹಾಗೂ 54 ರನ್ ಗಳಿಸಿ ಭಾರತ ಗೆಲುವಿಗೆ ಕಾರಣರಾದ ರವಿಚಂದ್ರನ್ ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಪಂದ್ಯ ಗೆದ್ದ ಬೆನ್ನಲ್ಲೇ ಟ್ಲೀಟ್ ಮಾಡಿದ್ದ ಅಶ್ವಿನ್, “ಅದ್ಭುತ ಪಂದ್ಯ, ಸ್ಮರಣೀಯ ವಿಜಯ” ಎಂದು ಟ್ವಿಟರ್’ನಲ್ಲಿ ಬರೆದುಕೊಂಡಿದ್ದರು.

ಅಶ್ವಿನ್ ಅವರ ಈ ಟ್ವೀಟ್’ಗೆ ಪ್ರತಿಕ್ರಿಯಿಸಿದ್ದ ಶ್ರೀಲಂಕಾದ ಕ್ರಿಕೆಟ್ ಪಂಡಿತನೊಬ್ಬ, ಭಾರತದ ಸ್ಪಿನ್ ಮಾಂತ್ರಿಕನನ್ನು ಕೆಣಕುವ ರೀತಿಯಲ್ಲಿ ಟ್ವೀಟ್ ಮಾಡಿದ್ದ. “ನೀನು ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಂಗ್ಲಾದೇಶದ ಮೊಮಿನುಲ್ ಹಕ್’ಗೆ ಹಸ್ತಾಂತರಿಸಬೇಕು. ಯಾಕಂದ್ರೆ ನೀನು ಇನ್ನೂ ಖಾತೆ ತೆರೆಯದಿದ್ದಾಗ ನಿನ್ನ ಕ್ಯಾಚ್ ಡ್ರಾಪ್ ಮಾಡಿದ್ದ. ಆ ಕ್ಯಾಚನ್ನು ಆತ ಪಡೆದಿದ್ದರೆ ಭಾರತ 89 ರನ್ನಿಗೆ ಆಲೌಟಾಗಿರುತ್ತಿತ್ತು” ಎಂದು ಶ್ರೀಲಂಕಾದ ಆ ಕ್ರಿಕೆಟ್ ಪಂಡಿತ ಟ್ವೀಟ್ ಮಾಡಿದ್ದ.

ಈ ವ್ಯಂಗ್ಯಭರಿತ ಟ್ವೀಟ್’ಗೆ ತಮ್ಮದೇ ಟಿಪಿಕಲ್ ಸ್ಟೈಲ್’ನಲ್ಲಿ ರವಿಚಂದ್ರನ್ ಅಶ್ವಿನ್ ಉತ್ತರ ಕೊಟ್ಟಿದ್ದಾರೆ. “ಓಹ್ ನೋ, ನಾನು ನಿನ್ನನ್ನು ಬ್ಲಾಕ್ ಮಾಡಿದ್ದೆ ಅಂದುಕೊಂಡಿದ್ದೆ. ಓಹ್ ಸಾರಿ, ಅದು ಇನ್ನೊಬ್ಬ ವ್ಯಕ್ತಿ. ಆತನ ಹೆಸರೇನು? ಯೆಸ್, ಡೇನಿಯೆಲ್ ಅಲೆಕ್ಸಾಂಡರ್! ಭಾರತ ಒಂದು ವೇಳೆ ಕ್ರಿಕೆಟನ್ನೇ ಆಡದಿರುತ್ತಿದ್ದರೆ ನೀವಿಬ್ಬರೂ ಏನು ಮಾಡುತ್ತಿದ್ದೀರಿ ಅಂತ ಒಮ್ಮೆ ಊಹಿಸಿಕೊಳ್ಳಿ ಸಾಕು” ಎಂದು ಅಶ್ವಿನ್ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ : CSK new captain: ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಿಕ್ಕಿಯೇ ಬಿಟ್ಟ ಹೊಸ ಕ್ಯಾಪ್ಟನ್, ಈತನೇ ಧೋನಿ ಉತ್ತರಾಧಿಕಾರಿ

ಇದನ್ನೂ ಓದಿ : Ind vs ban 2nd test : 2ನೇ ಟೆಸ್ಟ್‌ನಲ್ಲಿ ಬಾಂಗ್ಲಾ ವಿರುದ್ಧ ರೋಚಕ ಜಯ, ಸರಣಿ 2-0 ಕ್ಲೀನ್ ಸ್ವೀಪ್

ಇದನ್ನೂ ಓದಿ : KL Rahul Out : ಕಳಪೆ ಫಾರ್ಮ್‌ಗೆ ಸಿಗಲಿದೆ ಗೇಟ್ ಪಾಸ್ ಶಿಕ್ಷೆ, ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಕೆ.ಎಲ್ ರಾಹುಲ್ ಔಟ್ ?

ಭಾರತ 74 ರನ್ನಿಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್’ಗಿಳಿದ ಅಶ್ವಿನ್’ಗೆ 34ನೇ ಓವರ್’ನಲ್ಲಿ ಜೀವದಾನ ಸಿಕ್ಕಿತ್ತು. ಮೆಹದಿ ಹಸನ್ ಬೌಲಿಂಗ್’ನಲ್ಲಿ ಅಶ್ವಿನ್ ನೀಡಿದ್ದ ಸುಲಭ ಕ್ಯಾಚನ್ನು ಶಾರ್ಟ್ ಲೆಗ್’ನಲ್ಲಿ ಮೊಮಿನುಲ್ ಹಕ್ ಕೈಚೆಲ್ಲಿದ್ದರು. ಆ ಜೀವದಾನವನ್ನು ಸದುಪಯೋಗ ಪಡಿಸಿಕೊಂಡ ಅಶ್ವಿನ್, ಶ್ರೇಯಸ್ ಅಯ್ಯರ್ ಜೊತೆ ಅಮೋಘ ಜೊತೆಯಾಟವಾಡಿ ಭಾರತವನ್ನು ಗೆಲುವಿನ ದಡ ಸೇರಿಸಿದ್ದರು.

“Haven’t I blocked you yet” Ravichandran Ashwin said to whom and why?

Comments are closed.