MS Dhoni: ಚೆನ್ನೈನಲ್ಲಿ ನಾಳೆ ಭಾರತ Vs ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಲಿದ್ದಾರೆ ಎಂ.ಎಸ್‌ ಧೋನಿ

ಚೆನ್ನೈ: ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ (India Vs Australia ODI series) ಸರಣಿಯ ಅಂತಿಮ ಪಂದ್ಯ ನಾಳೆ (ಬುಧವಾರ) ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್ ಮೈದಾನ) ನಡೆಯಲಿದೆ. 3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು, 3ನೇ ಪಂದ್ಯ ಸರಣಿ ನಿರ್ಣಾಯಕ ಪಂದ್ಯವಾಗಿದೆ.

ಫೈನಲ್ ಮಹತ್ವ ಪಡೆದಿರುವ 3ನೇ ಏಕದಿನ ಪಂದ್ಯವನ್ನು ವೀಕ್ಷಿಸಲು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni), ಚೆನ್ನೈನ ಚೆಪಾಕ್ ಮೈದಾನಕ್ಕೆ ಆಗಮಿಸಲಿದ್ದಾರೆ. ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ 5 ವಿಕೆಟ್’ಗಳಿಂದ ಗೆದ್ದರೆ, ವಿಶಾಖಪಟ್ಟಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿದ್ದ ಆಸೀಸ್ ಆತಿಥೇಯರಿಗೆ ತಿರುಗೇಟು ನೀಡಿತ್ತು. ಹೀಗಾಗಿ 3ನೇ ಪಂದ್ಯಕ್ಕೆ ಫೈನಲ್ ಮಹತ್ವ ಬಂದಿದೆ.

41 ವರ್ಷದ ಎಂ.ಎಸ್ ಧೋನಿ ಐಪಿಎಲ್-16 ಟೂರ್ನಿಗಾಗಿ ಚೆನ್ನೈನಲ್ಲಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಚೆನ್ನೈನಲ್ಲಿ ಬೀಡು ಬಿಟ್ಟಿರುವ ಧೋನಿ, ಚೆಪಾಕ್ ಮೈದಾನದಲ್ಲೇ ಕಠಿಣ ತಾಲೀಮು ನಡೆಸುತ್ತಿದ್ದಾರೆ. ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಪೆವಿಲಿಯನ್ ಸ್ಟ್ಯಾಂಡ್ ಅನ್ನು ಧೋನಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಶುಕ್ರವಾರವಷ್ಟೇ ಉದ್ಘಾಟಿಸಿದ್ದರು. ಈ ಹೊಸ ಸ್ಟ್ಯಾಂಡ್’ಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಹೆಸರಿಡಲಾಗಿದೆ.

ಚೆಪಾಕ್ ಮೈದಾನದಲ್ಲಿ ನಿರ್ಮಾಣವಾಗಿರುವ ಹೊಸ ಸ್ಟ್ಯಾಂಡ್ ಹಲವು ವಿಶೇಷತೆಗಳನ್ನು ಹೊಂದಿದೆ. ಎಂ.ಎ ಚಿದಂಬರಂ ಕ್ರೀಡಾಂಗಣದ ಇತಿಹಾಸವನ್ನು ಬಿಂಬಿಸುವ ಮ್ಯೂಸಿಯಂ, ಕಲಾಕೃತಿಗಳನ್ನ ಈ ಸ್ಟ್ಯಾಂಡ್ ಹೊಂದಿದೆ. ಹೊಸ ಸ್ಟ್ಯಾಂಡ್ ಉದ್ಘಾಟನೆಯ ನಂತರ ಚೆಪಾಕ್ ಮೈದಾನದ ಒಟ್ಟು ಕೆಪಾಸಿಟಿ 38 ಸಾವಿರಕ್ಕೆ ಏರಿಕೆಯಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯದ ವೇಳೆ ಹೊಸ ಸ್ಟ್ಯಾಂಡ್’ನಲ್ಲಿ ಕುಳಿತು ಪ್ರೇಕ್ಷಕರು ಪಂದ್ಯ ವೀಕ್ಷಿಸಲಿದ್ದಾರೆ.

ಇದನ್ನೂ ಓದಿ : Women’s Premier League : ಗುಜರಾತ್ ವಿರುದ್ಧ ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಯು.ಪಿ ವಾರಿಯರ್ಸ್; ಆರ್‌ಸಿಬಿ ಕನಸು ನುಚ್ಚುನೂರು

ಇದನ್ನೂ ಓದಿ : IPL media rights : ವಯಕಾಮ್-ಸ್ಟಾರ್ ಸ್ಪೋರ್ಟ್ಸ್ ಜಾಹೀರಾತು ಯುದ್ಧ, ಇದು ಧೋನಿ Vs ಕೊಹ್ಲಿ ಕಾಳಗ

India Vs Australia ODI series : ಭಾರತ Vs ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯ

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಎಂ.ಎ ಚಿದಂಬರಂ ಕ್ರೀಡಾಂಗಣ, ಚೆಪಾಕ್; ಚೆನ್ನೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

India Vs Australia ODI series: MS Dhoni will watch the India Vs Australia match in Chennai tomorrow

Comments are closed.