India Vs Bangladesh: ಭಾರತದ ಗೆಲುವಿಗೆ ಕನ್ನಡಿಗನ ಕಿರು ಕಾಣಿಕೆ, ಬಾಂಗ್ಲಾ ವಿರುದ್ಧದ ಗೆಲುವಿನ ಹಿಂದೆ ‘ಬ್ರಷ್’ ಮಹಿಮೆ

ಅಡಿಲೇಡ್: India Vs Bangladesh : ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದ ಟೀಮ್ ಇಂಡಿಯಾ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 5 ರನ್’ಗಳಿಂದ ಮಣಿಸಿದ ಭಾರತ ಎರಡು ಅಮೂಲ್ಯ ಅಂಕ ಗಳಿಸಿತು. ಇದರೊಂದಿಗೆ ಆಡಿರುವ 4 ಪಂದ್ಯಗಳಿಂದ 3 ಗೆಲುವು ಹಾಗೂ 1 ಸೋಲಿನೊಂದಿಗೆ ಒಟ್ಟು 6 ಅಂಕ ಸಂಪಾದಿಸಿರುವ ಭಾರತ ಗ್ರೂಪ್-2ನಲ್ಲಿ ಅಗ್ರಸ್ಥಾನಕ್ಕೇರಿದೆ.

ಬಾಂಗ್ಲಾ ವಿರುದ್ಧ ಭಾರತ ಗೆಲ್ಲಲು (India Vs Bangladesh) ಕಾರಣ ಕನ್ನಡಿಗ ಕೆ.ಎಲ್ ರಾಹುಲ್ ಬಾರಿಸಿದ ಸ್ಫೋಟಕ ಅರ್ಧಶತಕ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕ. ಇವರ ಜೊತೆ ಟೀಮ್ ಇಂಡಿಯಾ ಗೆಲುವಿನಲ್ಲಿ ಮತ್ತೊಬ್ಬ ಕನ್ನಡಿಗ ಮಹತ್ವದ ಪಾತ್ರ ವಹಿಸಿದ್ದಾರೆ. ಅವರೇ ಭಾರತ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಡ್ವಿಗಿ (Raghavindraa DVGI).

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಬಾಂಗ್ಲಾ ಗೆಲುವಿಗೆ 16 ಓವರ್’ಗಳಲ್ಲಿ 151 ರನ್’ಗಳ ಪರಿಷ್ಕೃತ ಗುರಿ ನಿಗದಿ ಪಡಿಸಲಾಗಿತ್ತು. ಮಳೆಯಿಂದ ಒದ್ದೆಯಾಗಿದ್ದ ಮೈದಾನದಿಂದ ಸೂಪರ್ ಸಾಪರ್’ಗಳ ಮೂಲಕ ನೀರು ಹೊರ ಹಾಕಿದ್ರೂ, ಹುಲ್ಲು ಹಾಸಿನ ಮೇಲೆ ತೇವ ಹಾಗೇ ಉಳಿದುಕೊಂಡಿತ್ತು. ಹೀಗಾಗಿ ಫೀಲ್ಡಿಂಗ್ ಮಾಡುತ್ತಿದ್ದ ಟೀಮ್ ಇಂಡಿಯಾ ಆಟಗಾರರ ಶೂ ಸ್ಪೈಕ್’ನಲ್ಲಿ ಮಣ್ಣು ಅಂಟಿಕೊಂಡು ಮೈದಾನದಲ್ಲಿ ಜಾರಿ ಬೀಳುವ ಅಪಾಯವಿತ್ತು. ಈ ಅಪಾಯದಿಂದ ಆಟಗಾರರನ್ನು ರಕ್ಷಿಸಿದ್ದು ತಂಡದ ಸಹಾಯಕ ಸಿಬ್ಬಂದಿ ರಾಘವೇಂದ್ರ. ಭಾರತ ತಂಡದ ಆಟಗಾರರು ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಕೈಯಲ್ಲಿ ಬ್ರಷ್ ಹಿಡಿದು ಬೌಂಡರಿ ಗೆರೆಯ ಸುತ್ತ ಓಡಾಡಿದ ರಾಘವೇಂದ್ರ ಆಟಗಾರರ ಶೂನಲ್ಲಿ ಸೇರಿದ್ದ ಮಣ್ಣನ್ನು ತೆಗೆದರು. ಇದರಿಂದ ಆಟಗಾರರು ಮೈದಾನದಲ್ಲಿ ಜಾರಿ ಬೀಳುವ ಸಂಭಾವ್ಯ ಅಪಾಯದಿಂದ ಪಾರಾದರು. ಹೀಗೆ ಭಾರತದ ಗೆಲುವಿಗೆ ರಾಘವೇಂದ್ರ ಕಿರು ಕಾಣಿಕೆ ನೀಡಿದರು. ರಾಘವೇಂದ್ರ ಅವರ ಈ ಕಾರ್ಯಕ್ಕೆ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ರಾಘವೇಂದ್ರ 2011ರಿಂದಲೂ ಟೀಮ್ ಇಂಡಿಯಾದಲ್ಲಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾ ಬ್ಯಾಟ್ಸ್’ಮನ್’ಗಳ ಯಶಸ್ಸಿನ ಹಿಂದಿನ ಶಕ್ತಿಯಾಗಿ ನಿಂತಿದ್ದಾರೆ. ತಮ್ಮ ಯಶಸ್ಸಿನಲ್ಲಿ ರಾಘವೇಂದ್ರ ಅವರ ಪಾತ್ರ ತುಂಬಾ ದೊಡ್ಡದು ಎಂದು ಸ್ವತಃ ವಿರಾಟ್ ಕೊಹ್ಲಿ ಅವರೇ ಸಾಕಷ್ಟು ಬಾರಿ ಹೇಳಿದ್ದಾರೆ.

ಇದನ್ನೂ ಓದಿ : T20 World Cup 2022: ಬಾಂಗ್ಲಾ ವಿರುದ್ಧ ಗೆದ್ದ ಭಾರತ, ಸೆಮಿಫೈನಲ್‌ಗೆ ರೋಹಿತ್ ಬಳಗ ಮತ್ತಷ್ಟು ಹತ್ತಿರ

ಇದನ್ನೂ ಓದಿ : Kannada Rojyotsava : ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಆರ್‌ಸಿಬಿ, ಬೆಂಗಳೂರು ಬುಲ್ಸ್

India Vs Bangladesh Raghavindraa DVG Brush Workout in India’s win t20 world cup

Comments are closed.