India Vs England Mankading: ಕ್ರಿಕೆಟ್ ಕಾಶಿಯಲ್ಲಿ ಇಂಗ್ಲೆಂಡ್ ನಾಯಕಿಯ ಮೋಸದಾಟ; “ಮಂಕಡಿಂಗ್” ರನೌಟ್ ಮಾಡಿದ ಭಾರತದ ಆಟಗಾರ್ತಿಯ ಮೇಲೆ ಕೆಂಗಣ್ಣ ನೋಟ

ಲಾರ್ಡ್ಸ್: (India Vs England Mankading Runout) ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಶನಿವಾರ ನಡೆದ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ 3ನೇ ಏಕದಿನ ಪಂದ್ಯ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ಇಂಗ್ಲೆಂಡ್ ತಂಡದ ನಾಯಕಿ ಹಾಗೂ ವಿಕೆಟ್ ಕೀಪರ್ ಏಮಿ ಜೋನ್ಸ್ (Amy Jones) ನೆಲಕ್ಕೆ ಬಿದ್ದಿದ್ದ ಚೆಂಡನ್ನು ಕ್ಯಾಚ್ ಎಂದು ಅಪೀಲ್ ಮಾಡಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಇಂಗ್ಲೆಂಡ್ ಆಟಗಾರ್ತಿ ಚಾರ್ಲೀ ಡೀನ್ (Charlie Dean) ಅವರನ್ನು ಮಂಕಡಿಂಗ್ ಮೂಲಕ ರನೌಟ್ ಮಾಡಿದ ದೀಪ್ತಿ ಶರ್ಮಾ (Deepti Sharma). ಮಂಕಡಿಂಗ್ ತಪ್ಪು ಎಂದು ವಾದ ಮಾಡುತ್ತಿರುವ ಇಂಗ್ಲೆಂಡ್ ಕ್ರಿಕೆಟಿಗರು, ಇಂಗ್ಲೆಂಡ್ ನಾಯಕಿಯ ಮೋಸದಾಟವನ್ನು ಪ್ರಶ್ನಿಸದೆ ಮೌನಕ್ಕೆ ಶರಣಾಗಿದ್ದಾರೆ.

170 ರನ್’ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡಕ್ಕೆ 39 ಎಸೆತಗಳಲ್ಲಿ 17 ರನ್’ಗಳ ಅವಶ್ಯಕತೆಯಿತ್ತು. ಕೈಯಲ್ಲಿದ್ದ ವಿಕೆಟ್ ಒಂದು. ಈ ವೇಳೆ ಭಾರತ ಆಫ್’ಸ್ಪಿನ್ನರ್ ದೀಪ್ತಿ ಶರ್ಮಾ, ಇಂಗ್ಲೆಂಡ್ ಆಟಗಾರ್ತಿ ಚಾರ್ಲೀ ಡೀನ್ ಅವರನ್ನು ಮಂಕಡಿಂಗ್ ಮೂಲಕ ರನೌಟ್ ಮಾಡಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ನಾಯಕಿ ಹರ್ಮನ್’ಪ್ರೀಕ್ ಕೌರ್ ಸೂಚನೆಯಂತೆ ಡೀನ್ ಅವರನ್ನು ದೀಪ್ತಿ ಶರ್ಮಾ ರನೌಟ್ ಮಾಡಿದರು.

ದೀಪ್ತಿ ಶರ್ಮಾ ಬೌಲಿಂಗ್ ಮಾಡುವುದಕ್ಕೆ ಮೊದಲೇ ನಾನ್’ಸ್ಟ್ರೈಕ್’ನಲ್ಲಿದ್ದ ಚಾರ್ಲೀ ಡೀನ್ ಕ್ರೀಸ್ ಕ್ರೀಸ್ ಬಿಟ್ಟಿದ್ದರು. ಕೂಡಲೇ ಬೌಲಿಂಗ್ ನಿಲ್ಲಿಸಿದ ದೀಪ್ತಿ ಶರ್ಮಾ ರನೌಟ್ ಮಾಡಿದರು.

ಬದಲಾದ ಕ್ರಿಕೆಟ್ ನಿಯಮದಲ್ಲಿ ಮಂಕಡಿಂಗ್ ಮೂಲಕ ರನೌಟ್ ಮಾಡುವ ಅವಕಾಶವಿದೆ. ಆದರೆ ಇದನ್ನು ಇಂಗ್ಲೆಂಡ್ ಕ್ರಿಕೆಟಿಗರು ಪ್ರಶ್ನಿಸ್ತಿದ್ದಾರೆ. ಇದು ಜಂಟಲ್’ಮ್ಯಾನ್ ಕ್ರಿಕೆಟ್’ಗೆ ಕಳಂಕ ತರುವ ನಡವಳಿಕೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾರತ ತಂಡದ ಮಂಕಡಿಂಗ್ ನಡೆಯನ್ನು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಪ್ರಶ್ನಿಸಿದ್ದಾರೆ. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಬ್ರಾಡ್ ಟ್ವೀಟ್ ಮಾಡಿದ್ದಾರೆ.

ಮಂಕಡಿಂಗ್ ನಡೆಯನ್ನು ಪ್ರಶ್ನಿಸಿರುವ ಇಂಗ್ಲೆಂಡ್ ತಂಡದ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರಿಗೆ ಕ್ರಿಕೆಟ್ ಪ್ರಿಯರು ಬ್ರಾಡ್ ಅವರ ಹಳೇ ವೀಡಿಯೊವೊಂದರ ಮೂಲಕ ತಿರುಗೇಟು ಕೊಟ್ದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಸ್ಲಿಪ್’ನಲ್ಲಿ ಕ್ಯಾಚ್ ನೀಡಿದ್ದರೂ ಕ್ರೀಸ್ ತೊರೆಯದೆ ನಿಂತಿದ್ದರು. “ಆಗೆಲ್ಲಿ ಹೋಗಿತ್ತು ನಿಮ್ಮ ಕ್ರೀಡಾ ಸ್ಫೂರ್ತಿ” ಎಂದು ಕ್ರಿಕೆಟ್ ಪ್ರಿಯರು ಪ್ರಶ್ನಿಸಿದ್ದಾರೆ.

ಆದರೆ ಅದೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕಿ ಏಮಿ ಜೋನ್ಸ್ ನೆಲಕ್ಕೆ ಬಿದ್ದಿದ್ದ ಚೆಂಡನ್ನು ಔಟ್ ಎಂದು ಅಪೀಲ್ ಮಾಡಿದ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಏಮಿ ಜೋನ್ಸ್ ಅವರ ಮೋಸದಾಟ ಕ್ಯಾಮರಾ ಕಣ್ಣುಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಸೆರೆಯಾಗಿದೆ. ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ನೀಡಿದ ಕ್ಯಾಚನ್ನು ಪಡೆಯುವಲ್ಲಿ ವಿಕೆಟ್ ಕೀಪರ್ ಏಮಿ ಜೋನ್ಸ್ ಎಡವಿದ್ದರು. ಆದರೆ ನೆಲಕ್ಕೆ ಬಿದ್ದಿದ್ದ ಚೆಂಡನ್ನು ಎತ್ತಿಕೊಂಡ ಜೋನ್ಸ್ ಕ್ಯಾಚ್ ಎಂದು ಅಪೀಲ್ ಮಾಡಿದರು. ಏಮಿ ಜೋನ್ಸ್ ಅವರ ಕಳ್ಳಾಟ ಟಿವಿ ರಿಪ್ಲೇನಲ್ಲಿ ಬಯಲಾಗುತ್ತಿದ್ದಂತೆ ಪೆವಿಲಿಯನ್ ಹಾದಿ ಹಿಡಿದಿದ್ದ ಸ್ಮೃತಿ ಮಂಧಾನ ಅವರನ್ನು ಮತ್ತೆ ಕ್ರೀಸ್’ಗೆ ವಾಪಸ್ ಕರೆಸಿಕೊಳ್ಳಲಾಯಿತು.


ಇದನ್ನೂ ಓದಿ : Rahul Dravid : ಹೃದಯವಂತ ರಾಹುಲ್ ದ್ರಾವಿಡ್.. “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಇಷ್ಟವಾಗೋದು ಇದೇ ಕಾರಣಕ್ಕೆ

ಇದನ್ನೂ ಓದಿ : BCCI: ಪಿಚ್ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ, ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಇದೆಂಥಾ ದುರ್ಗತಿ..?

India Vs England Mankading Runout Deepthi Sharma Indian Womens Cricket

Comments are closed.