ಮೆಲ್ಬೋರ್ನ್: India vs Pakistan Live : ರನ್ ಮಷಿನ್ ವಿರಾಟ್ ಕೊಹ್ಲಿ ಅವರ ಅಸೀಮ ಬ್ಯಾಟಿಂಗ್ ತಾಕತ್ತಿನ ಬಲದಿಂದ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯ (T20 World Cup 2022) ತನ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು(India Beat Pakistan) 4 ವಿಕೆಟ್’ಗಳಿಂದ ರೋಚಕವಾಗಿ ಮಣಿಸಿದೆ.
ಇದರೊಂದಿಗೆ ರೋಹಿತ್ ಶರ್ಮಾ ಬಳಗ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 160 ರನ್’ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ 31 ರನ್ನಿಗೆ ರಾಹುಲ್, ರೋಹಿತ್, ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಮೊದಲ 10 ಓವರ್’ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 45 ರನ್ ಗಳಿಸಿ ಸೋಲಿನತ್ತ ಮುಖ ಮಾಡಿ ನಿಂತಿದ್ದ ಭಾರತ ತಂಡವನ್ನು ವಿರಾಟ್ ಕೊಹ್ಲಿ ತಮ್ಮ ಅಮೋಘ ಆಟದಿಂದ ಗೆಲುವಿನ ದಡ ಸೇರಿಸಿದರು. 5ನೇ ವಿಕೆಟ್’ಗೆ ಹಾರ್ದಿಕ್ ಪಾಂಡ್ಯ (40) ಜೊತೆ 78 ಎಸೆತಗಳಲ್ಲಿ 113 ರನ್’ಗಳ ಜೊತೆಯಾಟವಾಡಿದ ವಿರಾಟ್ ಕೊಹ್ಲಿ, ಮೆಲ್ಬೋರ್ನ್ ಮೈದಾನದಲ್ಲಿ ಸೇರಿದ್ದ 90 ಸಾವಿರ ಪ್ರೇಕ್ಷಕರ ಮುಂದೆ ತಮ್ಮ ವೃತ್ತಿಜೀವನದ ಮತ್ತೊಂದು ಅಮೋಘ ಇನ್ನಿಂಗ್ಸ್ ಆಡಿದರು.
ಕೊನೆಯ 2 ಓವರ್’ಗಳಲ್ಲಿ ಗೆಲುವಿಗೆ 31 ರನ್ ಬೇಕಿದ್ದಾಗ ಸಿಡಿದು ನಿಂತ ಕೊಹ್ಲಿ, ಬೌಂಡರಿ ಸಿಕ್ಸರ್’ಗಳ ಸುರಿಮಳೆಗೈದು ಭಾರತಕ್ಕೆ ಅಮೋಘ ಜಯ ತಂದುಕೊಟ್ಟರು. ತಮ್ಮ ವಿಜಯದ ಇನ್ನಿಂಗ್ಸ್’ನಲ್ಲಿ 53 ಎಸೆತಗಳನ್ನು ಎದುರಿಸಿದ ಕೊಹ್ಲಿ, 6 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ ಅಜೇಯ 82 ರನ್ ಗಳಿಸಿದರು. ಇದಕ್ಕೂ ಮೊದಲು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಬ್ಯಾಟಿಂಗ್ ಆಹ್ವಾನವಿತ್ತರು. ಭುವನೇಶ್ವರ್ ಕುಮಾರ್ ಅವರ ಬಿಗು ಓವರ್ ನಂತರ ಮತ್ತೊಂದು ತುದಿಯಲ್ಲಿ ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಪಂಜಾಬ್’ನ ಯುವ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್, ತಮ್ಮ ಮೊದಲ ಎಸೆತದಲ್ಲೇ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಭಾರತ ವಿರುದ್ಧದ ಮಹತ್ವದ ಪಂದ್ಯದಲ್ಲಿ ಬಾಬರ್ ಎದುರಿಸಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್’ಗೆ ಔಟಾದರು.
The KING is back 👑
— T20 World Cup (@T20WorldCup) October 23, 2022
Take a bow, Virat Kohli 🙌#T20WorldCup | #INDvPAK pic.twitter.com/5aCOCF6JIS
ತಮ್ಮ 2ನೇ ಓವರ್’ನಲ್ಲಿ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ರಿಜ್ವಾನ್ (4) ವಿಕೆಟ್ ಪಡೆದ ಅರ್ಷದೀಪ್ ಭಾರತಕ್ಕೆ ಆರಂಭಿಕ ಮೇಲುಗೈ ತಂದುಕೊಟ್ಟರು.
ಆದರೆ 3ನೇ ವಿಕೆಟ್’ಗೆ ಜೊತೆಯಾದ ಶಾನ್ ಮಸೂದ್ ಹಾಗೂ ಇಫ್ತಿಕಾರ್ ಅಹ್ಮದ್ 50 ಎಸೆತಗಳಲ್ಲಿ 76 ರನ್’ಗಳ ಜೊತೆಯಾಟವಾಡಿ ಪಾಕಿಸ್ತಾನದ ಚೇತರಿಕೆಗೆ ಕಾರಣರಾದರು. ಆರಂಭದಲ್ಲೇ 2 ವಿಕೆಟ್’ಗಳು ಬಿದ್ದಾಗ ಕೌಂಟರ್ ಅಟ್ಯಾಕ್ ನಡೆಸಿದ ಪಾಕ್ ದಾಂಡಿಗ ಇಫ್ತಿಕಾರ್ ಅಹ್ಮದ್, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ಒಂದೇ ಓವರ್’ನಲ್ಲಿ 3 ಸಿಕ್ಸರ್ ಸಿಡಿಸಿದರು,. ಅಂತಿಮವಾಗಿ 34 ಎಸೆತಗಳಲ್ಲಿ 51 ರನ್ ಗಳಿಸಿದ ಇಫ್ತಿಕಾರ್, ವೇಗಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವಿತ್ತ 3ನೇ ಕ್ರಮಾಂಕದ ದಾಂಡಿಗ ಶಾನ್ ಮಸೂದ್ 42 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗುಳಿದರು. ಕೊನೇ ಕ್ಷಣಗಳಲ್ಲಿ ಅಬ್ಬರಿಸಿದ ವೇಗಿ ಶಾಹೀನ್ ಶಾ ಆಫ್ರಿದಿ ಕೇವಲ 8 ಎಸೆತಗಳಲ್ಲಿ 16 ರನ್ ಸಿಡಿಸಿ ಪಾಕಿಸ್ತಾನದ ಮೊತ್ತ 150ರ ಗಡಿ ದಾಟಲು ಕಾರಣರಾದರು.
ಪಾಕಿಸ್ತಾನ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್’ರನ್ನು ತಮ್ಮ ಆರಂಭಿಕ ಸ್ಪೆಲ್’ನಲ್ಲಿ ಪೆವಿಲಿಯನ್’ಗಟ್ಟಿದ ಅರ್ಷದೀಪ್ ಸಿಂಗ್, ತಮ್ಮ 2ನೇ ಸ್ಪೆಲ್’ನಲ್ಲಿ ಪಾಕಿಸ್ತಾನದ ಮತ್ತೊಬ್ಬ ಡೇಂಜರಸ್ ಬ್ಯಾಟ್ಸ್’ಮನ್ ಆಸಿಫ ಅಲಿ ಅವರನ್ನು ಕೇವಲ 2 ರನ್ನಿಗೆ ಔಟ್ ಮಾಡಿದರು. ಅಂತಿಮವಾಗಿ ತಮ್ಮ 4 ಓವರ್’ಗಳ ಸ್ಪೆಲ್’ನಲ್ಲಿ 32 ರನ್ ಬಿಟ್ಟು ಕೊಟ್ಟ ಅರ್ಷದೀಪ್, 3 ಪ್ರಮುಖ ವಿಕೆಟ್ ಪಡೆದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 30 ರನ್ನಿಗೆ 3 ವಿಕೆಟ್ ಉರುಳಿಸಿದ್ರೆ, ಭುವನೇಶ್ವರ್ ಕುಮಾಪ್ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ : India Vs Pakistan T20 World Cup 2022 : ಭಾರತಕ್ಕೆ 160 ರನ್ ಟಾರ್ಗೆಟ್ ಕೊಟ್ಟ ಪಾಕಿಸ್ತಾನ
ಇದನ್ನೂ ಓದಿ : Arshdeep Singh: ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದ ಅರ್ಷದೀಪ್, ಅಂದು ಖಲಿಸ್ತಾನಿ ಅಂದವರೇ ಇಂದು ಬಹುಪರಾಕ್ ಹಾಕಿದ್ರು
India vs Pakistan Live T20 World Cup 2022 India Beat Pakistan Four wicket