India vs South Africa 1st ODI: ಪದಾರ್ಪಣೆಯ ಪಂದ್ಯದಲ್ಲೇ ಭಾರತವನ್ನು ಸೋಲಿಸಿದ ಧೋನಿ ಶಿಷ್ಯ

ಲಕ್ನೋ: Ruturaj Gaikwad Failure: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ (India vs South Africa 1st ODI) ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ 9 ರನ್’ಗಳಿಂದ ಸೋಲು ಕಂಡಿದೆ. ಲಕ್ನೋದ ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಹರಿಣ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣವಾಗಿದ್ದು ಪದಾರ್ಪಣೆ ಪಂದ್ಯದಲ್ಲೇ ಧೋನಿ ಶಿಷ್ಯನ ನಿಧಾನಗತಿಯ ಬ್ಯಾಟಿಂಗ್.

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯದಲ್ಲಿ ಓವರ್’ಗಳ ಸಂಖ್ಯೆಯಲ್ಲಿ 40ಕ್ಕೆ ಇಳಿಸಲಾಗಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 40 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ಹೆನ್ರಿಕ್ ಕ್ಲಾಸೆನ್ (ಅಜೇಯ 74, 65 ಎಸೆತ) ಮತ್ತು ಡೇವಿಡ್ ಮಿಲ್ಲರ್ (ಅಜೇಯ 75, 63 ಎಸೆತ) ನಡುವಿನ ಅಮೋಘ ಶತಕದ ಜೊತೆಯಾಟದಿಂದಾಗಿ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಗಳಿಸುವಂತಾಯಿತು.

ಗುರಿ ಬೆನ್ನಟ್ಟಿದ ಶಿಖರ್ ಧವನ್ ನಾಯಕತ್ವದ ಭಾರತ 5 ಓವರ್’ಗಳ ಒಳಗೆ ನಾಯಕ ಶಿಖರ್ (4) ಹಾಗೂ ಶುಭಮನ್ ಗಿಲ್ (3) ವಿಕೆಟ್ ಕಳೆದುಕೊಂಡಿತು. ಆ ಸಂದರ್ಭದಲ್ಲಿ ಜೊತೆಯಾದ ಋತುರಾಜ್ ಗಾಯಕ್ವಾಡ್ (Ruturaj Gaikwad) ಮತ್ತು ಇಶಾನ್ ಕಿಶನ್ (Ishan Kishan) ನಿಧಾನಗತಿಯ ಆಟವಾಡಿ 3ನೇ ವಿಕೆಟ್’ಗೆ 69 ಎಸೆತಗಳಲ್ಲಿ ಕೇವಲ 40 ರನ್ ಸೇರಿಸಿದರು. ಅದರಲ್ಲೂ ಪದಾರ್ಪಣೆಯ ಪಂದ್ಯದಲ್ಲಿ ಆಮೆಗತಿಯ ಆಟವಾಡಿದ ಋತುರಾಜ್ ಗಾಯಕ್ವಾಡ್ 42 ಎಸೆತಗಳನ್ನೆದುರಿಸಿ ಕೇವಲ 19 ರನ್ ಗಳಿಸಿದ್ದು ಭಾರತದ ಸೋಲಿಗೆ ಕಾರಣವಾಯಿತು. ಋತುರಾಜ್ ಅವರ ನಿಧಾನಗತಿಯ ಆಟದ ಪರಿಣಾಮ ಕೊನೆಯ ನಾಲ್ಕು ಓವರ್’ಗಳಲ್ಲಿ ಭಾರತ ಪ್ರತೀ ಓವರ್’ಗೆ 13ಕ್ಕೂ ಹೆಚ್ಚು ರನ್ ಗಳಿಸುವ ಒತ್ತಡಕ್ಕೆ ಬಿತ್ತು. ಆ ಸಂದರ್ಭದಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಸ್ಫೋಟಕ ಆಟವಾಡಿದ್ರೂ, ಕೊನೆಯಲ್ಲಿ 9 ರನ್’ಗಳಿಂದ ಭಾರತ ಸೋಲು ಕಂಡಿತು.

ಉಪನಾಯಕ ಶ್ರೇಯಸ್ ಅಯ್ಯರ್ 37 ಎಸೆತಗಳಲ್ಲಿ 50 ರನ್ ಬಾರಿಸಿ ಔಟಾದ ನಂತರ ಶಾರ್ದೂಲ್ ಠಾಕೂರ್ (33) ಜೊತೆ 6ನೇ ವಿಕೆಟ್’ಗೆ 66 ಎಸೆತಗಳಲ್ಲಿ 93 ರನ್ ಸೇರಿಸಿದ ಸ್ಯಾಮ್ಸನ್ ಗೆಲುವಿನ ಆಸೆ ಚಿಗುರಿಸಿದರು. ಆದರೆ 39ನೇ ಓವರ್’ನಲ್ಲಿ ಆವೇಶ್ ಖಾನ್ ಅವರ ಬೇಜವಾಬ್ದಾರಿ ಆಟದ ಪರಿಣಾಮ ಸ್ಯಾಮ್ಸನ್’ಗೆ ಒಂದೂ ಎಸೆತ ಎದುರಿಸಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ಭಾರತ ಕೊನೆಯ ಎರಡು ಓವರ್’ಗಳಲ್ಲಿ 37 ರನ್ ಗಳಿಸಬೇಕಿತ್ತು. ಆವೇಶ್ ಖಾನ್ ಒಂಟಿ ರನ್ ಪಡೆದು ಸ್ಯಾಮ್ಸನ್’ಗೆ ಸ್ಟ್ರೈಕ್ ನೀಡುವ ಬದಲು ಸಿಕ್ಸರ್ ಬಾರಿಸಲು ಪ್ರಯತ್ನಿಸಿ ಕೈ ಸುಟ್ಟುಕೊಂಡರು. ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಎಸೆದ ಆ ಓವರ್’ನಲ್ಲಿ ಭಾರತ ಗಳಿಸಿದ್ದು ಕೇವಲ 6 ರನ್. ಹೀಗಾಗಿ ಅಂತಿಮ ಓವರ್’ನಲ್ಲಿ ಭಾರತ ಗೆಲುವಿಗೆ 31 ರನ್’ಗಳ ಅವಶ್ಯಕತೆ ಎದುರಾಯಿತು. ತಂಡವನ್ನು ಗೆಲ್ಲಿಸಲು ಶಕ್ತಿಮೀರಿ ಪ್ರಯತ್ನಿಸಿದ ಸ್ಯಾಮ್ಸನ್, ಹರಿಣ ಪಡೆಯ ಸ್ಪಿನ್ನರ್ ತರ್ಬೈಜ್ ಶಮ್ಸಿ ಎಸೆದ ಅಂತಿಮ ಓವರ್’ನಲ್ಲಿ 19 ರನ್ ಬಾರಿಸಿದರು. ಸ್ಯಾಮ್ಸನ್ ಹೋರಾಟದ ಮಧ್ಯೆಯೂ 9 ರನ್’ಗಳಿಂದ ಭಾರತ ಪಂದ್ಯ ಸೋಲುವಂತಾಯಿತು. ವೀರೋಚಿತ ಆಟವಾಡಿದ ಸ್ಯಾಮ್ಸನ್ 63 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್’ಗಳ ನೆರವಿನಿಂದ ಅಜೇಯ 86 ರನ್ ಬಾರಿಸಿದರು.

ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಋತುರಾಜ್ ಗಾಯಕ್ವಾಡ್ ಮಾಜಿ ನಾಯಕ ಎಂ.ಎಸ್ ಧೋನಿ ಗರಡಿಯಲ್ಲಿ ಪಳಗಿದ ಆಟಗಾರ. ಆದರೆ ಧೋನಿ ಹೇಳಿಕೊಟ್ಟ ಕ್ರಿಕೆಟ್ ಪಾಠಗಳನ್ನು ಕಾರ್ಯರೂಪಕ್ಕೆ ಇಳಿಸುವಲ್ಲಿ ಋತುರಾಜ್ ಎಡವಿದರು. ಎದುರಿಸಿದ 42 ಎಸೆತಗಳಲ್ಲಿ ಗಾಯತ್ವಾಡ್ ಕನಿಷ್ಠ 25 ರನ್ ಗಳಿಸಿದ್ದರೂ ಭಾರತ ಗೆಲ್ಲುವ ಸಾಧ್ಯತೆಯಿತ್ತು. ಭಾರತ ಪಂದ್ಯ ಸೋಲಲು ಕಾರಣನಾದ ಋತುರಾಜ್ ಗಾಯಕ್ವಾಡ್ ಜೊತೆ ಇಶಾನ್ ಕಿಶನ್ ವಿರುದ್ಧವೂನ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಾಯಕ್ವಾಡ್’ರಂತೆ ನಿಧಾನಗತಿಯ ಆಟವಾಡಿದ್ದ ಇಶಾನ್ ಕಿಶನ್ 37 ಎಸೆತಗಳಲ್ಲಿ ಕೇವಲ 20 ರನ್ ಗಳಿಸಿದ್ದರು. ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಒಟ್ಟು 79 ಎಸೆತಗಳನ್ನೆದುರಿಸಿ ಗಳಿಸಿದ್ದು ಕೇವಲ 39 ರನ್. ಕೊನೆಯಲ್ಲಿ ಭಾರತವನ್ನು ಸೋಲಿಸಿದ್ದು ಇದೇ.

ಇದನ್ನೂ ಓದಿ : Rakheem Cornwall : 22 ಸಿಕ್ಸರ್+17 ಬೌಂಡರಿ=200: ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ವಿಂಡೀಸ್ ದೈತ್ಯ

ಇದನ್ನೂ ಓದಿ : Pro Kabaddi League: ಮತ್ತೆ ಬಂತು ಪ್ರೊ ಕಬಡ್ಡಿ: ಇಲ್ಲಿದೆ ವೇಳಾಪಟ್ಟಿ, ನೇರಪ್ರಸಾರ, ಟಿಕೆಟ್ ಬುಕ್ಕಿಂಗ್‌ನ ಕಂಪ್ಲೀಟ್ ಡೀಟೇಲ್ಸ್

https://twitter.com/SportyVishal/status/1578035119184838663?s=20&t=pY80zykWVsrlKF_8nhI3Pg
https://twitter.com/WoniWroos/status/1578034451698679810?s=20&t=pY80zykWVsrlKF_8nhI3Pg


India vs South Africa 1st ODI Ruturaj Gaikwad Failure debut Match beats India

Comments are closed.