Veda Krishnamurthy: ಖಾಸಗಿ ಹೋಟೆಲ್‌ನಲ್ಲಿ ನಡೆಯಿತು ವೇದಾ ಕೃಷ್ಣಮೂರ್ತಿ ನಿಶ್ಚಿತಾರ್ಥ.. ಅರ್ಜುನ್ ಜೊತೆ ಉಂಗುರ ಬದಲಿಸಿಕೊಂಡ ಸ್ಟಾರ್ ಕ್ರಿಕೆಟರ್

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ, ಕರ್ನಾಟಕದ ಸ್ಟಾರ್ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ (Veda Krishnamurthy), ಕ್ರಿಕೆಟಿಗ ಅರ್ಜುನ್ ಹೊಯ್ಸಳ (Arjun Hoysala) ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೇದಾ ಕೃಷ್ಣಮೂರ್ತಿ ಮತ್ತು ಅರ್ಜುನ್ ಹೊಯ್ಸಳ ನಿಶ್ಚಿತಾರ್ಥ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ನಡೆದಿದ್ದು, ಇಬ್ಬರೂ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಆತ್ಮೀಯ ಸ್ನೇಹಿತರು ಹಾಗೂ ಕೆಲ ಕ್ರಿಕೆಟಿಗರು ಹಾಜರಿದ್ದರು.

ಸೆಪ್ಟೆಂಬರ್ 11ರಂದು (Arjun Hoysala) ಅರ್ಜುನ್ ಹೊಯ್ಸಳ, ಪ್ರಕೃತಿಯ ಮಡಿಲಲ್ಲಿ ಪ್ರೇಯಸಿ ವೇದಾ ಕೃಷ್ಣಮೂರ್ತಿ(Veda Krishnamurthy) ಮುಂದೆ ಮಂಡಿಯೂರಿ ಲವ್ ಪ್ರಪೋಸ್ ಮಾಡಿದ್ದರು. ಪ್ರಿಯಮತನ ಪ್ರೇಮ ನಿವೇದನೆಗೆ ವೇದಾ ಕೃಷ್ಣಮೂರ್ತಿ ‘ಯೆಸ್’ ಎಂದಿದ್ದರು. ನಂತರ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡಿದ್ದರು. ಆ ಚಿತ್ರಗಳನ್ನು ವೇದಾ ಹಾಗೂ ಅರ್ಜುನ್ ಹೊಯ್ಸಳ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಇದಾಗಿ ಒಂದೇ ವಾರದಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 29 ವರ್ಷದ ವೇದಾ ಕೃಷ್ಣಮೂರ್ತಿ ಮತ್ತು 32 ವರ್ಷದ ಅರ್ಜುನ್ ಹೊಯ್ಸಳ (Arjun Hoysala)ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸ್ಟಾರ್ ಕ್ರಿಕೆಟ್ ಜೋಡಿಯ ವಿವಾಹ ಮುಂದಿನ ವರ್ಷ ನಡೆಯುವ ಸಾಧ್ಯತೆಯಿದೆ.

ಅರ್ಜುನ್ ಹೊಯ್ಸಳ 2016ರಲ್ಲಿ ಕರ್ನಾಟಕ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಮಹಾರಾಷ್ಟ್ರ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ಇನ್ನಿಂಗ್ಸ್ ಆರಂಭಿಸಿದ್ದ ಎಡಗೈ ಬ್ಯಾಟ್ಸ್’ಮನ್ ಅರ್ಜುನ್ ಹೊಯ್ಸಳ ಶೂನ್ಯಕ್ಕೆ ಔಟಾಗಿದ್ದರು. 2ನೇ ಇನ್ನಿಂಗ್ಸ್’ನಲ್ಲಿ ಅರ್ಜುನ್’ಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ಸಿಕ್ಕಿರಲಿಲ್ಲ. ಕರ್ನಾಟಕ ಪ್ರೀಮಿಯರ್ ಲೀಗ್’ನಲ್ಲಿ ಅರ್ಜುನ್ ಹೊಯ್ಸಳ ಬೆಳಗಾವಿ ಪ್ಯಾಂಥರ್ಸ್, ಮೈಸೂರು ವಾರಿಯರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ತಂಡಗಳ ಪರ ಆಡಿದ್ದಾರೆ.

ಇದನ್ನೂ ಓದಿ : ಮೊಹಮ್ಮದ್ ಶಮಿಗೆ ಕೋವಿಡ್ ಪಾಸಿಟಿವ್.. ಕಂಬ್ಯಾಕ್‌ಗೆ ಮೊದಲೇ ಶಾಕ್, ಆಸೀಸ್ ಸರಣಿಯಿಂದ ಔಟ್

ಇದನ್ನೂ ಓದಿ : ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ 2 ಸೆಮಿಫೈನಲ್; ಮಂಗಳವಾರ ಶುರು ಮೊದಲ ಸೆಮೀಸ್

ಇನ್ನು ಚಿಕ್ಕಮಗಳೂರಿನ ಕಡೂರಿನ ಹುಡುಗಿ ವೇದಾ ಕೃಷ್ಣಮೂರ್ತಿ 18ನೇ ವಯಸ್ಸಿಗೆ ಭಾರತ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಭಾರತ ಪರ 48 ಏಕದಿನ ಪಂದ್ಯಗಳನ್ನಾಡಿರುವ ವೇದಾ 8 ಅರ್ಧಶತಕಗಳ ಸಹಿತ 829 ರನ್ ಗಳಿಸಿದ್ದಾರೆ. 76 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿರುವ ವೇದಾ ಕೃಷ್ಣಮೂರ್ತಿ ಎರಡು ಅರ್ಧಶತಕಗಳೊಂದಿಗೆ 875 ರನ್ ಕಲೆ ಹಾಕಿದ್ದಾರೆ. ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ಆಗಿರುವ ವೇದಾ, 2017ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ 45 ಎಸೆತಗಳಲ್ಲಿ ಸ್ಫೋಟಕ 70 ರನ್ ಬಾರಿಸಿದ್ದರು. ಸದ್ಯ ಭಾರತ ತಂಡದಿಂದ ಹೊರ ಬಿದ್ದಿರುವ ವೇದಾ ಕರ್ನಾಟಕ ಪರ ಆಡುತ್ತಿದ್ದು, ಕ್ರಿಕೆಟ್ ಕಾಮೆಂಟೇಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Veda Krishnamurthy’s engagement took place in a private hotel.. The star cricketer exchanged rings with Arjun

Comments are closed.