Commentators in RCB team: ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡುತ್ತಿದ್ದಾರೆ ಇಬ್ಬರು ಕಾಮೆಂಟೇಟರ್ಸ್ !

ಬೆಂಗಳೂರು: Commentators in RCB team : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್’ನ ಹೆವಿವೇಟ್ ತಂಡಗಳಲ್ಲೊಂದು. ರಾಯಲ್ ಚಾಲೆಂಜರ್ಸ್ ಪರ ವಿರಾಟ್ ಕೊಹ್ಲಿ, ಫಾಫ್ ಡುಪ್ಲಿಸಿಸ್, ಗ್ಲೆನ್ ಮ್ಯಾಕ್ಸ್’ವೆಲ್’ರಂಥಾ ದಿಗ್ಗಜರು ಆಡುತ್ತಿದ್ದಾರೆ. ಈ ಹಿಂದೆ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಯುವರಾಜ್ ಸಿಂಗ್, ಜಹೀರ್ ಖಾನ್ ಅವರಂಥಾ ಘಟಾನುಘಟಿಗಳು ಆರ್’ಸಿಬಿ ಪರ ಆಡಿದ್ದಾರೆ.

ಹೆವಿವೇಟ್ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈಗ ಇಬ್ಬರು ಕ್ರಿಕೆಟ್ ಕಾಮೆಂಟೇಟರ್ಸ್ ಆಡುತ್ತಿದ್ದಾರೆ. ಅಚ್ಚರಿಯಾದರೂ ಇದು ಸತ್ಯ. ಆ ಕಾಮೆಂಟೇಟರ್’ಗಳಲ್ಲಿ ಒಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ (Dinesh Karthik), ಮತ್ತೊಬ್ಬರು ಬ್ಯಾಟಿಂಗ್ ಆಲ್ರೌಂಡರ್ ಕೇದಾರ್ ಜಾಧವ್ (Kedar Jadhav).

ದಿನೇಶ್ ಕಾರ್ತಿಕ್ ಈಗಾಗಲೇ ಫುಲ್ ಟೈಮ್ ಕಾಮೆಂಟೇಟರ್, ಪಾರ್ಟ್ ಟೈಮ್ ಕ್ರಿಕೆಟರ್ ಆಗಿದ್ದಾರೆ. ಕ್ರಿಕೆಟ್ ಬಿಟ್ಟು ಕಾಮೆಂಟರಿ ಮಾಡುತ್ತಿದ್ದ ಡಿಕೆ, ಕಳೆದ ಐಪಿಎಲ್’ನಲ್ಲಿ ಆರ್’ಸಿಬಿ ಪರ ಭರ್ಜರಿ ಪ್ರದರ್ಶನ ತೋರಿ ಟೀಮ್ ಇಂಡಿಯಾ ಟಿ20 ಕಂಡಕ್ಕೆ ಕಂಬ್ಯಾಕ್ ಮಾಡಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್’ನಲ್ಲೂ ಆಡಿದ್ದರು. ಈಗ ಐಪಿಎಲ್ ಆಡುತ್ತಿರುವ ಡಿಕೆ, ಐಪಿಎಲ್ ಮುಗಿದ ಬೆನ್ನಲ್ಲೇ ಮತ್ತೆ ಕ್ರಿಕೆಟ್ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಕೇದಾರ್ ಜಾಧವ್. ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲೀ ಗಾಯಗೊಂಡಿರುವ ಕಾರಣ ಅವರಿಗೆ ಬದಲಿ ಆಟಗಾರನಾಗಿ ಕೇದಾರ್ ಜಾಧವ್ ಅವರನ್ನು ಆರ್’ಸಿಬಿ (Commentators in RCB team) ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್ ತಂಡದಿಂದ ಕರೆ ಬರುವ ಸಂದರ್ಭದಲ್ಲಿ ಕೇದಾರ್ ಜಾಧವ್ ಮರಾಠಿ ಕಾಮೆಂಟರಿ ನಡೆಸುತ್ತಿದ್ದರು. ಈ ವಿಚಾರವನ್ನು ಸ್ವತಃ ಕೇದಾರ್ ಜಾಧವ್ ಅವರೇ ಆರ್’ಸಿಬಿ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

“ನಾನು ಐಪಿಎಲ್’ನಲ್ಲಿ ಮರಾಠಿ ಕಾಮೆಂಟರಿಯಲ್ಲಿ ಭಾಗಿಯಾಗಿದ್ದೆ. ಈ ವೇಳೆ ಆರ್’ಸಿಬಿ ತಂಡದ ಕೋಚ್ ಸಂಜಯ್ ಬಾಂಗರ್ ನನಗೆ ದೂರವಾಣಿ ಕರೆ ಮಾಡಿದರು. ನನ್ನ ಫಿಟ್ನೆಸ್ ಬಗ್ಗೆ ವಿಚಾರಿಸಿದರು. ನಾನು ಆರ್’ಸಿಬಿ ತಂಡ ಸೇರಲಿದ್ದೇನೆ ಅಂತ ನನಗೆ ಆಗಲೇ ಗೊತ್ತಾಯಿತು. ತಂಡಕ್ಕಾಗಿ ನಾನು 110% ನೀಡಲು ರೆಡಿಯಿದ್ದೇನೆ” ಎಂದು 38 ವರ್ಷದ ಕೇದಾರ್ ಜಾಧವ್ ಹೇಳಿದ್ದಾರೆ.

ಕೇದಾರ್ ಜಾಧವ್ 2021ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕೊನೆಯ ಬಾರಿ ಐಪಿಎಲ್ ಆಡಿದ್ದರು. ಆ ಟೂರ್ನಿಯಲ್ಲಿ ಜಾಧವ್ 6 ಪಂದ್ಯಗಳಿಂದ ಕೇವಲ 55 ರನ್ ಕಲೆ ಹಾಕಿದ್ದರು. ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ಕೇದಾರ್ ಜಾಧವ್ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಮಹಾರಾಷ್ಟ್ರ ಪರ ಅಬ್ಬರಿಸಿದ್ದ ಕೇದಾರ್ ಜಾಧವ್ 92.5ರ ಅಮೋಘ ಸರಾಸರಿಯಲ್ಲಿ ಬ್ಯಾಟ್ ಮಾಡುವ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ : India WTC final: ಭಾರತ ಈ ಬಾರಿಯೂ ಟೆಸ್ಟ್ ವಿಶ್ವಕಪ್ ಗೆಲ್ಲೋದು ಡೌಟ್.. ಕಾರಣ ಇಲ್ಲಿದೆ..!

ಇದನ್ನೂ ಓದಿ : Shreyas Iyer Tulunadu link : ತುಳುನಾಡಿನ ದೈವಾರಾಧನೆ ಬಗ್ಗೆ ಶ್ರೇಯಸ್ ಅಯ್ಯರ್ ಅಚ್ಚರಿಯ ಮಾತು, ಮುಂಬೈಕರ್’ಗೂ ತುಳುನಾಡಿದೂ ಇರೋ ಸಂಬಂಧ ಎಂಥದ್ದು ಗೊತ್ತಾ?

Comments are closed.