Manish Pandey Shreyas Iyer :ಮತ್ತೊಬ್ಬ ಮನೀಶ್ ಪಾಂಡೆ ಆಗಲಿದ್ದಾರಾ ಟೀಮ್ ಇಂಡಿಯಾದ ಈ ಆಟಗಾರ !

ಬೆಂಗಳೂರು: ಕರ್ನಾಟಕದ ಸ್ಟಾರ್ ಬ್ಯಾಟ್ಸ್”ಮನ್ ಮನೀಶ್ ಪಾಂಡೆ (Manish Pandey) ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಎಂದೇ ಕರೆಸಿಕೊಂಡವರು. ಆದರೆ ಬರ ಬರುತ್ತಾ ಪಾಂಡೆ ಆಟದಲ್ಲಿ ಪವರ್ ಕಡಿಮೆಯಾಗಿ, ಈಗ ಟೀಮ್ ಇಂಡಿಯಾದಲ್ಲೇ ಪಾಂಡೆಗೆ ಸ್ಥಾನವಿಲ್ಲ. ಮನೀಶ್ ಪಾಂಡೆಯ ಹಾದಿಯಲ್ಲಿ ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ ಸಾಗುತ್ತಿದ್ದಾನೆ. ಆತ ಬೇರಾರೂ ಅಲ್ಲ, ಮುಂಬೈ ಬ್ಯಾಟ್ಸ್”ಮನ್ ಶ್ರೇಯಸ್ ಅಯ್ಯರ್ (Shreyas Iyer). ಕರ್ನಾಟಕದ ಮನೀಶ್ ಪಾಂಡೆ ಟೀಮ್ ಇಂಡಿಯಾದಲ್ಲಿ ಇದ್ದಾಗ ಮಾಡಿದ ತಪ್ಪುಗಳನ್ನೇ ಶ್ರೇಯಸ್ ಅಯ್ಯರ್ ಈಗ ಮಾಡುತ್ತಿದ್ದಾರೆ.

ಮನೀಶ್ ಪಾಂಡೆ ಅದ್ಭುತ ಪ್ರತಿಭಾವಂತ ಆಟಗಾರ. ಆದರೆ ಕೊಟ್ಟ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದ ಕಾರಣ, ಟೀಮ್ ಇಂಡಿಯಾದಿಂದ ಹೊರ ಬಿದ್ದು ಒಂದು ವರ್ಷವೇ ಕಳೆದಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ 2ನೇ ದರ್ಜೆಯ ತಂಡವನ್ನು ಆಯ್ಕೆ ಮಾಡುವಾಗಲೂ ಮನೀಶ್ ಪಾಂಡೆಯನ್ನು ಪರಿಗಣಿಸಲಾಗುತ್ತಿಲ್ಲ ಅಂದರೆ, ಪಾಂಡೆ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯವಾಗಿದೆ ಎಂದೇ ಅರ್ಥ.

ಶ್ರೇಯಸ್ ಅಯ್ಯರ್ ಅವರ ವೃತ್ತಿಜೀವನವೂ ಪಾಂಡೆ ಹಾದಿಯಲ್ಲೇ ಸಾಗುತ್ತಿದೆ. ಮನೀಶ್ ಪಾಂಡೆಯಂತೆ ಅಯ್ಯರ್ ಕೂಡ ಸಿಕ್ಕ ಅವಕಾಶಗಳನ್ನು ವ್ಯರ್ಥಗೊಳಿಸುತ್ತಾ ತಮ್ಮ ಕ್ರಿಕೆಟ್ ಪ್ರಯಾಣದಲ್ಲಿ ತಾವೇ ಕಲ್ಲು-ಮುಳ್ಳುಗಳನ್ನು ಎಳೆದುಕೊಳ್ಳುತ್ತಿದ್ದಾರೆ. ಸದ್ಯ ಶ್ರೇಯಸ್ ಅಯ್ಯರ್ ಆಡುತ್ತಿರುವ ಆಟವನ್ನು ನೋಡಿದರೆ, ಮುಂದಿನ ಟಿ20 ವಿಶ್ವಕಪ್’ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಆಡಿದ ರೀತಿ ಅವರ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ. 3ನೇ ಟಿ20 ಪಂದ್ಯದ ನಡೆದ ಟ್ರೆಂಟ್’ಬ್ರಿಡ್ಜ್ ಮೈದಾನ ಬ್ಯಾಟ್ಸ್”ಮನ್”ಗಳ ಪಾಲಿಗೆ ಸ್ವರ್ಗವಾಗಿತ್ತು. ಅದೇ ಮೈದಾನದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 55 ಎಸೆತಗಳಲ್ಲಿ 117 ರನ್ ಸಿಡಿಸಿ ಅಬ್ಬರಿಸಿದ್ರೆ, ಸೂರ್ಯನ ಜೊತೆ ಕ್ರೀಸ್”ನಲ್ಲಿದ್ದ ಅಯ್ಯರ್ ಗಳಿಸಿದ್ದು 23 ಎಸೆತಗಳಲ್ಲಿ ಕೇವಲ 28 ರನ್. ಬ್ಯಾಟಿಂಗ್”ಗೆ ಯೋಗ್ಯವಾಗಿದ್ದ ವಿಕೆಟ್”ನಲ್ಲಿ ಶ್ರೇಯಸ್ ಅಯ್ಯರ್ 121ರ ಸ್ಟ್ರೈಕ್”ರೇಟ್’ನಲ್ಲಿ ನಿಧಾನಗತಿಯಿಂದ ಆಡಿದ್ದೇ ಭಾರತದ ಸೋಲಿಗೆ ಕಾರಣವಾಗಿತ್ತು. ಇಂತಹ ಆಟಗಳಿಂದ ಶ್ರೇಯಸ್ ಅಯ್ಯರ್ ಟೀಕೆಗೆ ಗುರಿಯಾಗುತ್ತಿದ್ದಾರೆ.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಅನುಮಾನ:
ಭಾರತ ತಂಡ ಟಿ20 ವಿಶ್ವಕಪ್‌ಗೆ ತಾಲೀಮು ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ತಂಡದ ಅಗ್ರಕ್ರಮಾಂಕ ಸದೃಢವಾಗಿದ್ದು, ಒಂದರಿಂದ 6ನೇ ಕ್ರಮಾಂಕಕ್ಕೆ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಫಿಕ್ಸ್ ಆಗಿದ್ದಾರೆ. ಬ್ಯಾಕಪ್ ಬ್ಯಾಟ್ಸ್’ಮನ್ ಆಗಿ ದೀಪಕ್ ಹೂಡ ಮತ್ತು ಬ್ಯಾಕಪ್ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಇದ್ದಾರೆ. ಹೀಗಿರುವಾಗ ಶ್ರೇಯಸ್ ಅಯ್ಯರ್”ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ. ಶ್ರೇಯರ್ ಅಯ್ಯರ್ ಕಳೆದ 6 ಟಿ20 ಪಂದ್ಯಗಳಲ್ಲಿ 36, 40, 14, 4, 0, 28 ರನ್ ಗಳಿಸಿದ್ದಾರೆ.

ಅಯ್ಯರ್ ಅವರನ್ನು ಪಾಂಡೆಗೆ ಹೋಲಿಸಲು ಕಾರಣ:
ಒಂದು ಕಾಲದಲ್ಲಿ ಮನೀಶ್ ಪಾಂಡೆಯನ್ನು ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದೇ ಪರಿಗಣಿಸಲಾಗಿತ್ತು. ಟೀಂ ಇಂಡಿಯಾಕ್ಕೆ ಮನೀಷ್ ಪಾಂಡೆಯ ಎಂಟ್ರಿಯೂ ಅಷ್ಟೇ ಅಮೋಘವಾಗಿತ್ತು. 2015ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಪಂದ್ಯದ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಪಾಂಡೆ 86 ಎಸೆತ ಗಳಲ್ಲಿ 71 ರನ್ ಗಳಿಸಿದ್ದರು. ಇದಾದ ಮರುವರ್ಷವೇ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 81 ಎಸೆತಗಳಲ್ಲಿ 104 ರನ್ ಗಳಿಸಿ ಭಾರತಕ್ಕೆ ಅಮೋಘ ಗೆಲುವು ತಂದುಕೊಟ್ಟಿದ್ದರು. ಆದರೆ ಅದಾದ ನಂತರ ಪಾಂಡೆ ತಮ್ಮ ಆಟದ ಖದರ್ ಕಳೆದುಕೊಂಡಿದ್ದರು. ಸಿಕ್ಕ ಒಳ್ಳೆಯ ಆರಂಭವನ್ನು ವೃತ್ತಿಜೀವನಕ್ಕೆ ಭದ್ರ ಅಡಿಪಾಯವನ್ನಾಗಿಸಿ ಕೊಳ್ಳುವಲ್ಲಿ ಪಾಂಡೆ ವಿಫಲರಾಗಿದ್ದರು. ಶ್ರೇಯಸ್ ಅಯ್ಯರ್ ಕೂಡ ಈಗ ಮನೀಶ್ ಪಾಂಡೆ ಹಾದಿಯಲ್ಲಿ ಸಾಗುತ್ತಿದ್ದಾರೆ.

Is Shreyas Iyer going to be another Manish Pandey?

Comments are closed.