Mayank Agarwal Cooking : ಕ್ರಿಕೆಟ್ ಬಿಟ್ಟು ಅಡುಗೆ ಭಟ್ಟನಾದ ಮಯಾಂಕ್… ಅಗರ್ವಾಲ್ ಕೈಯಿಂದ ರೆಡಿಯಾಯ್ತು ಘಮ ಘಮ ಬಿರಿಯಾನಿ

ಮೈಸೂರು: (Mayank Agarwal Cooking) ಕರ್ನಾಟಕದ ಸ್ಟಾರ್ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ತಮ್ಮ ಹೊಡಿಬಡಿಯ ಆಟಕ್ಕೆ ಹೆಸರುವಾಸಿ. ಮಯಾಂಕ್ ಕ್ರೀಸ್’ ನಲ್ಲಿದ್ದರೆ ಅವರ ಆಟ ನೋಡೋದೇ ಕಣ್ಣಿಗೊಂದು ಹಬ್ಬ. ಮಯಾಂಕ್ ಅಗರ್ವಾಲ್ ಒಳ್ಳೆಯ ಕ್ರಿಕೆಟಿಗನಷ್ಟೇ ಅಲ್ಲ, ಒಳ್ಳೆಯ ಕುಕ್ (ಅಡುಗೆ ತಯಾರಕ) ಕೂಡ ಹೌದು. ತಾವೊಬ್ಬ ಒಳ್ಳೆಯ ಅಡುಗೆಗಾರ ಎಂಬುದನ್ನು ಮೈಸೂರಿನಲ್ಲಿ ನಡೆಯುತ್ತಿರುವ KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯ ವೇಳೆ ಮಯಾಂಕ್ ಅಗರ್ವಾಲ್ ಸಾಬೀತು ಮಾಡಿದ್ದಾರೆ.

ಮೈಸೂರಿನಲ್ಲಿ ತಾವು ತಂಗಿರುವ ಹೋಟೆಲ್’ನಲ್ಲಿ ಮಯಾಂಕ್ ಅಗರ್ವಾಲ್ ಘಮ ಘಮ ಬಿರಿಯಾನಿ ತಯಾರಿಸಿದ್ದಾರೆ. ಹೋಟೆಲ್ ಕಿಚನ್’ನಲ್ಲಿ ಬಿರಿಯಾನಿ ತಯಾರಿಸಿ ಸಹ ಆಟಗಾರರಿಗೆ ಸರ್ಪೈಜ್ ಕೊಟ್ಟಿದ್ದಾರೆ. ಬಿರಿಯಾನಿ ತಯಾರಿಸುವ ಸಂದರ್ಭದಲ್ಲಿ ಮಯಾಂಕ್ ಅಗರ್ವಾರ್ ಅವರಿಗೆ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಹೆಡ್ ಕೋಚ್ ನಾಸಿರುದ್ದೀನ್ ಸಾಥ್ ಕೊಟ್ಟಿದ್ದಾರೆ.

KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕತ್ವ ವಹಿಸಿದ್ದಾರೆ. ಮಯಾಂಕ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಟೂರ್ನಿಯಲ್ಲಿ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ. ಮೊದಲ ಪಂದ್ಯದಲ್ಲಿ ಮನೀಶ್ ಪಾಂಡೆ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 54 ರನ್’ಗಳ ಭರ್ಜರಿ ಗೆಲುವು ದಾಖಲಿಸಿದ್ದ ಬೆಂಗಳೂರು ಬ್ಲಾಸ್ಟರ್ಸ್, 2ನೇ ಪಂದ್ಯದಲ್ಲಿ ವೇಗಿ ಅಭಿಮನ್ಯು ಮಿಥುನ್ ಸಾರಥ್ಯದ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 4 ವಿಕೆಟ್’ಗಳ ಸೋಲು ಕಂಡಿತ್ತು. 3ನೇ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಬಳಗ ಮಂಗಳೂರು ಯುನೈಟೆಡ್ ತಂಡವನ್ನು 35 ರನ್’ಗಳಿಂದ ಬಗ್ಗು ಬಡಿದು ಮತ್ತೆ ಗೆಲುವಿನ ಹಾದಿಗೆ ಮರಳಿತ್ತು.

31 ವರ್ಷ ವಯಸ್ಸಿನ ಬಲಗೈ ಬ್ಯಾಟ್’ಮನ್ ಮಯಾಂಕ್ ಅಗರ್ವಾಲ್ ಭಾರತ ಪರ 21 ಟೆಸ್ಟ್ ಪಂದ್ಯಗಳನ್ನಾಡಿದ್ದು 41.33ರ ಸರಾಸರಿಯಲ್ಲಿ ಆರು ಶತಕಗಳ ಸಹಿತ 1,488 ರನ್ ಗಳಿಸಿದ್ದಾರೆ. ಭಾರತ ಪರ 5 ಏಕದಿನ ಪಂದ್ಯಗಳನ್ನೂ ಆಡಿರುವ ಮಯಾಂಕ್ 86 ರನ್ ಕಲೆ ಹಾಕಿದ್ದಾರೆ. 2013ರಲ್ಲಿ ಕರ್ನಾಟಕ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಮಯಾಂಕ್ ಅಗರ್ವಾಲ್, 78 ಪ್ರಥಮದರ್ಜೆ ಪಂದ್ಯಗಳಿಂದ 12 ಶತಕಗಳ ಸಹಿತ 5,707 ರನ್ ಕಲೆ ಹಾಕಿದ್ದಾರೆ 89 ಲಿಸ್ಟ್ ಎ ಪಂದ್ಯಗಳಿಂದ 13 ಶತಕಗಳೊಂದಿಗೆ 4,085 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Legends League Cricket : ಟೀಂ ಇಂಡಿಯಾ ನಾಯಕನಾಗಿ ಸೌರವ್‌ ಗಂಗೂಲಿ ಆಯ್ಕೆ

ಇದನ್ನೂ ಓದಿ : Virat Kohli Practice : ಏಷ್ಯಾ ಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ಭರ್ಜರಿ ತಾಲೀಮು, ಹೇಗಿದೆ ಹೊತ್ತಾ ಕಿಂಗ್ ಕೊಹ್ಲಿಯ ಸಿದ್ಧತೆ

Mayank Agarwal Cooking biriyani in Mysore Maharaja Trophy T20

Comments are closed.