India Vs Australia test : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಂದು ಲಕ್ಷ ಪ್ರೇಕ್ಷಕರು, ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ

ಅಹ್ಮದಾಬಾದ್ : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಆತಿಥ್ಯ ವಹಿಸಿರುವ ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium) ಹೊಸ ವಿಶ್ವದಾಖಲೆ ನಿರ್ಮಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) 4ನೇ ಪಂದ್ಯದ ಮೊದಲ ದಿನ ಒಂದು ಲಕ್ಷ ಪ್ರೇಕ್ಷಕರು ಪಂದ್ಯ ವೀಕ್ಷಿಸುತ್ತಿದ್ದಾರೆ.

ಇದು ಟೆಸ್ಟ್ ಪಂದ್ಯವೊಂದನ್ನು ವೀಕ್ಷಿಸಿದ ಅತೀ ಹೆಚ್ಚು ಪ್ರೇಕ್ಷಕರ ಸಂಖ್ಯೆ. ಈ ಮೂಲಕ ನರೇಂದ್ರ ಮೋದಿ ಕ್ರೀಡಾಂಗಣ, ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನ ವಿಶ್ವದಾಖಲೆಯನ್ನು ಪುಡಿಗಟ್ಟಿದೆ. 2013ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು 91,112 ಮಂದಿ ಪ್ರೇಕ್ಷಕರು ವೀಕ್ಷಿಸಿದ್ದರು. 10 ವರ್ಷಗಳ ಹಿಂದಿನ ಈ ವಿಶ್ವದಾಖಲೆಯನ್ನು ಪುಡಿಗಟ್ಟಿರುವ ಅಹ್ಮದಾಬಾದ್”ನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ, ಹೊಸ ದಾಖಲೆ ಬರೆದಿದೆ.

ಟೆಸ್ಟ್ ಪಂದ್ಯದ ಒಂದೇ ದಿನ ಅತೀ ಹೆಚ್ಚು ಪ್ರೇಕ್ಷಕರು:
ಭಾರತ Vs ಆಸ್ಟ್ರೇಲಿಯಾ
ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್
1,00,000 ಪ್ರೇಕ್ಷಕರು

ಆಸ್ಟ್ರೇಲಿಯಾ Vs ಇಂಗ್ಲೆಂಡ್
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
91,112 ಪ್ರೇಕ್ಷಕರು

ಆಸ್ಟ್ರೇಲಿಯಾ Vs ವೆಸ್ಟ್ ಇಂಡೀಸ್
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
90,800 ಪ್ರೇಕ್ಷಕರು

ಆಸ್ಟ್ರೇಲಿಯಾ Vs ಇಂಗ್ಲೆಂಡ್
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
89,155 ಪ್ರೇಕ್ಷಕರು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಬಾಂಧವ್ಯಕ್ಕೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಕ್ಷಣಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್ ಸಾಕ್ಷಿಯಾಗಿದ್ದಾರೆ.ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್ ಜೊತೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಎರಡೂ ತಂಡಗಳ ಆಟಗಾರರನ್ನು ಅಭಿನಂದಿಸಿದರು. 75 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಟೆಸ್ಟ್ ಕ್ಯಾಪ್ ನೀಡಿದರೆ, ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರಿಗೆ ಆಸೀಸ್ ಪ್ರಧಾನಿ ಬ್ಯಾಗಿ ಗ್ರೀನ್ ಕ್ಯಾಪ್ ಹಸ್ತಾಂತರಿಸಿದರು.

ನಂತರ ಆಸ್ಟ್ರೇಲಿಯಾ ಪ್ರಧಾನಿ ಜೊತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರ ಕೈಗಳನ್ನು ಮೇಲೆತ್ತುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ಬಿಸಿಸಿಐ ವತಿಯಿಂದ ಭಾರತ ಮತ್ತು ಆಸ್ಟ್ರೇಲಿಯಾ ಪ್ರಧಾನಮಂತ್ರಿಗಳನ್ನು ಅಭಿನಂದಿಸಲಾಯಿತು. ಆಸ್ಟ್ರೇಲಿಯಾ ಪ್ರಧಾನಿಗೆ ಬಿಸಿಸಿಐ ಅಧ್ಯಕ್ಷ ರೋಜನ್ ಬಿನ್ನಿ ಸ್ಮರಣಿಕೆ ನೀಡಿದರೆ, ನರೇಂದ್ರ ಮೋದಿಯವರಿಗೆ ಬಿಸಿಸಿಐ ಕಾರ್ಯದರ್ಶಿಯೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈ ಶಾ ಸ್ಮರಣಿಕೆ ನೀಡಿದರು.

ಇದನ್ನೂ ಓದಿ : India Vs Australia : ಭಾರತ Vs ಆಸ್ಟ್ರೇಲಿಯಾ ಕ್ರಿಕೆಟ್ ಬಾಂಧವ್ಯಕ್ಕೆ 75 ವರ್ಷ, ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ

ಇದನ್ನೂ ಓದಿ : Team India Holi celebration: ಟೀಮ್ ಇಂಡಿಯಾ ಆಟಗಾರರು, ರಾಯಲ್ ಚಾಲೆಂಜರ್ಸ್ ವನಿತೆಯರ ಹೋಳಿ ಸಂಭ್ರಮ ನೋಡಿದಿರಾ?

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಚಿತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭೋಜನ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿತ್ತು.

One lakh spectators at Narendra Modi Stadium, a new world record in Test cricket

Comments are closed.