Rohit Sharma Dasun Shanaka : ರನೌಟ್ ಅಪೀಲ್ ವಾಪಸ್ ಪಡೆದು ಶನಕ ಶತಕ ಬಾರಿಸಲು ನೆರವಾದ ಹೃದಯವಂತ ಹಿಟ್‌ಮ್ಯಾನ್

ಗುವಾಹಟಿ: Rohit Sharma Dasun Shanaka : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಿಟ್ ಮ್ಯಾನ್ ಅಷ್ಟೇ ಅಲ್ಲ, ಹೃದಯವಂತ ಕೂಡ ಹೌದು. ರೋಹಿತ್ ಶರ್ಮಾ ಅವರ ಹೃದಯವಂತಿಕೆ ಏನು ಎಂಬುದು ಈ ಹಿಂದೆ ಸಾಕಷ್ಟು ಬಾರಿ ಸಾಬೀತಾಗಿದೆ. ಈಗ ಮತ್ತೊಮ್ಮೆ ಹಿಟ್ ಮ್ಯಾನ್ ಹೃದಯವಂತಿಕೆ ಜಗಜ್ಜಾಹೀರಾಗಿದೆ. ಅಷ್ಟಕ್ಕೂ ಆಗಿದ್ದೇನಂದ್ರೆ..

ಅಸ್ಸಾಂನ ಗುವಾಹಟಿಯ ಬರ್ಸಪರದಲ್ಲಿರುವ ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ (India Vs Sri Lanka ODI series) 374 ರನ್’ಗಳ ಬೃಹತ್ ಮೊತ್ತ ಬೆನ್ನಟ್ಟುತ್ತಿತ್ತು. ಸೋಲಿನ ಸುಳಿಗೆ ಸಿಲುಕಿದ್ದ ಶ್ರೀಲಂಕಾಗೆ ನಾಯಕ ದಸುನ್ ಶನಕ (Dasun Shanaka) ಆಸರೆಯಾಗಿದ್ದರು. ಸೋಲು ಖಚಿತವಾಗಿದ್ದರೂ ಲಂಕಾ ನಾಯಕನ ಹೋರಾಟ ಮುಂದುವರಿದಿತ್ತು. 49.4ನೇ ಓವರ್ ವೇಳೆ 98 ರನ್ ಗಳಿಸಿ ನಾನ್ ಸ್ಟ್ರೈಕರ್’ನಲ್ಲಿದ್ದ ದಸುನ್ ಶನಕ ಅವರನ್ನು ವೇಗಿ ಮೊಹಮ್ಮದ್ ಶಮಿ ಮಂಕಡ್ (Mohammed Shami Mankad) ಮೂಲಕ ರನೌಟ್ ಮಾಡಿದರು. ರನೌಟ್’ಗಾಗಿ ಅಪೀಲ್ ಮಾಡಿದರು. ಫೀಲ್ಡ್ ಅಂಪೈರ್ ಟಿವಿ ಅಂಪೈರ್’ಗೆ ನಿರ್ಧಾರವನ್ನು ಬಿಟ್ಟಾಗ ಮೊಹಮ್ಮದ್ ಶಮಿ ಬಳಿ ಬಂದ ನಾಯಕ ರೋಹಿತ್ ಶರ್ಮಾ, ರನೌಟ್ ಅಪೀಲ್ ನಿರ್ಧಾರವನ್ನು ವಾಪಸ್ ಪಡೆದರು.

98 ರನ್ ಗಳಿಸಿದ್ದ ದಸುನ್ ಶನಕ ನಂತರ ಶತಕ ಪೂರ್ತಿಗೊಳಿಸಿದರು. ಆ ವೇಳೆಗಾಗಲೇ ಭಾರತದ ಗೆಲುವು ಖಚಿತವಾಗಿದ್ದ ಕಾರಣ ಎದುರಾಳಿ ನಾಯಕ ಶತಕ ಬಾರಿಸಲು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವಕಾಶ ಮಾಡಿಕೊಟ್ಟರು. ಈ ಹೃದಯವಂತಿಕೆಯ ನಿರ್ಧಾರ ಕ್ರಿಕೆಟ್ ಪ್ರಿಯರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಪಂದ್ಯದ ನಂತರ ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, “ಶಮಿ ಆ ರೀತಿ ರನೌಟ್’ಗೆ ಪ್ರಯತ್ನ ಮಾಡುತ್ತಾರೆ ಎಂಬುದರ ಬಗ್ಗೆ ನನಗೆ ಕಲ್ಪನೆಯೇ ಇರಲಿಲ್ಲ. ದಸುನ್ ಶನಕ 98 ರನ್ ಗಳಿಸಿ ಆಡುತ್ತಿದ್ದರು. ಅದ್ಭುತವಾಗಿ ಆಡುತ್ತಿದ್ದ ಶನಕ ಶತಕಕ್ಕೆ ಅರ್ಹರಾಗಿದ್ದರು. ಹೀಗಾಗಿ ಅವರನ್ನು ನಾವು ಹೇಗಂದುಕೊಂಡಿದ್ದೆವೋ ಹಾಗೆಯೇ ಔಟ್ ಮಾಡಬೇಕಿತ್ತೇ ಹೊರತು, ಆ ರೀತಿ ಔಟ್ ಮಾಡುವುದು ಸರಿಯಲ್ಲ ಎಂದು ನನಗನಿಸಿತು” ಎಂದು ರೋಹಿತ್ ಹೇಳಿದ್ದಾರೆ.

ಶ್ರೀಲಂಕಾ ನಾಯಕನ ವಿರುದ್ಧದ ರನೌಟ್ ನಿರ್ಧಾರವನ್ನು ವಾಪಸ್ ಪಡೆದು ಶತಕ ಬಾರಿಸಲು ಅವಕಾಶ ಮಾಡಿಕೊಟ್ಟ ರೋಹಿತ್ ಶರ್ಮಾ ಬಗ್ಗೆ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇನ್ನು ಕೆಲವರು ರೋಹಿತ್ ಶರ್ಮಾ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ವಿರಾಟ್ ಕೊಹ್ಲಿ ಅವರ ಶತಕ (87 ಎಸೆತಗಳಲ್ಲಿ 113 ರನ್), ನಾಯಕ ರೋಹಿತ್ ಶರ್ಮಾ (67 ಎಸೆತಗಳಲ್ಲಿ 83 ರನ್) ಮತ್ತು ಓಪನರ್ ಶುಭಮನ್ ಗಿಲ್ (60 ಎಸೆತಗಳಲ್ಲಿ 70 ರನ್) ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಕಲೆ ಹಾಕಿತು. 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಕನ್ನಡಿಗ ಕೆ.ಎಲ್ ರಾಹುಲ್ 29 ಎಸೆತಗಳಲ್ಲಿ 39 ರನ್ ಗಳಿಸಿದರು.

ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ 50 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಲಷ್ಟೇ ಶಕ್ತವಾಗಿ 67 ರನ್’ಗಳಿಂದ ಭಾರತಕ್ಕೆ ಶರಣಾಗಿತ್ತು. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ಬಳಗ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಸರಣಿಯ 2ನೇ ಪಂದ್ಯ ನಾಳೆ (ಗುರುವಾರ) ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡಯಲಿದೆ.

ಇದನ್ನೂ ಓದಿ : Virat Kohli century: 2023ರಲ್ಲಿ ಶುರು ಕಿಂಗ್ ಕೊಹ್ಲಿಯ ಶತಕ ಬೇಟೆ, ಸಚಿನ್ ದಾಖಲೆ ಮುರಿಯಲು ಇನ್ನು ಐದೇ ಹೆಜ್ಜೆ..!

ಇದನ್ನೂ ಓದಿ : Virat Kohli Vs Gautam Gambhir : ಹೊಟ್ಟೆಕಿಚ್ಚಿಗೆ ಮದ್ದೇ ಇಲ್ಲ; ವಿರಾಟ್ ಕೊಹ್ಲಿ ಶತಕ ಬಾರಿಸಿದ ಬೆನ್ನಲ್ಲೇ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ ಗಂಭೀರ್ ಹೇಳಿದ್ದೇನು ಗೊತ್ತಾ?

Rohit Sharma Dasun Shanaka run out controversy

Comments are closed.