Sheldon Jackson: “ನನ್ನ ವಯಸ್ಸು 35, 75 ಅಲ್ಲ” ಅವಕಾಶ ಸಿಗದಿದ್ದಕ್ಕೆ ಬಿಸಿಸಿಐ ವಿರುದ್ಧ ಆಕ್ರೋಶ ಹೊರ ಹಾಕಿದ ಕ್ರಿಕೆಟರ್

ಬೆಂಗಳೂರು: (Sheldon Jackson) ಭಾರತ ಪರ ಆಡಬೇಕೆಂಬ ಕನಸು ಕಾಣುವ ವೃತ್ತಿಪರ ಕ್ರಿಕೆಟಿಗರು, ಆ ಆವಕಾಶ ಸಿಗದಿದ್ದರೆ ಕನಿಷ್ಠ ಭಾರತ ‘ಎ’ ತಂಡದ ಪರ ಆಡುವ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.ಆದರೆ ದೇಶೀಯ ಕ್ರಿಕೆಟ್’ನ ಸ್ಟಾರ್ ಕ್ರಿಕೆಟಿಗನೊಬ್ಬನಿಗೆ ಭಾರತ ‘ಎ‘ ಪರ ಮತ್ತೊಮ್ಮೆ ಅವಕಾಶ ಕೈ ತಪ್ಪಿದ್ದು, ಆತ ಬಿಸಿಸಿಐ ವಿರುದ್ಧ ವ್ಯಂಗ್ಯಭರಿತ ಟ್ವೀಟ್’ನೊಂದಿಗೆ ಆಕ್ರೋಶ ಹೊರ ಹೊರ ಹಾಕಿದ್ದಾರೆ. ಅಂದ ಹಾಗೆ ಆ ಕ್ರಿಕೆಟಿಗನ ಹೆಸರು ಶೆಲ್ಡನ್ ಜಾಕ್ಸನ್.

ಸೌರಾಷ್ಟ್ರ ಮೂಲದ 35 ವರ್ಷದ ಶೆಲ್ಡನ್ ಜಾಕ್ಸನ್ ನ್ಯೂಜಿಲೆಂಡ್ ’ಎ’ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟಿಸಲಾದ ಭಾರತ ’ಎ’ ತಂಡದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದರು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಬುಧವಾರ ಪ್ರಕಟಿಸಿದ ತಂಡದಲ್ಲಿ ಶೆಲ್ಡನ್ ಜಾಕ್ಸನ್ ಅವರಿಗೆ ಅವಕಾಶ ನೀಡಿಲ್ಲ. ಇದರಿಂದ ಬೇಸರಗೊಂಡಿರುವ ಜಾಕ್ಸನ್ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

https://twitter.com/ShelJackson27/status/1562436299885543424?s=20&t=3JYqiZyTBrWuemEh38igdg

“ನಾನು ಸತತ ಮೂರು ದೇಶೀಯ ಕ್ರಿಕೆಟ್ ಋತುಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. ಹೀಗಾಗಿ ನನ್ನ ಪ್ರದರ್ಶನದ ಆಧಾರದಲ್ಲಿ ಕನಿಷ್ಠ ಭಾರತ ’ಎ’ ತಂಡಕ್ಕಾದರೂ ಆಯ್ಕೆಯಾಗುವ ನಂಬಿಕೆ ಹಾಗೂ ಕನಸು ಕಾಣುವ ಎಲ್ಲಾ ಅಧಿಕಾರ ನನಗಿದೆ. ‘ನೀನು ಉತ್ತಮ ಆಟಗಾರ, ಆದರೆ ವಯಸ್ಸಾಗಿದೆ’ ಎಂಬ ಸ್ಪಷ್ಟೀಕರಣವನ್ನು ಆಯ್ಕೆ ಸಮಿತಿಯಿಂದ ಕೇಳಿ ಕೇಳಿ ಸಾಕಾಗಿದೆ. ನನಗೆ 35 ವರ್ಷ ಅಷ್ಟೇ, 75 ಅಲ್ಲ’’ ಎಂದು ಶೆಲ್ಡನ್ ಜಾಕ್ಸನ್ ಟ್ವೀಟ್ ಮಾಡಿದ್ದಾರೆ.

ಕಳೆದ ಮೂರು ದೇಶೀಯ ಕ್ರಿಕೆಟ್ ಋತುಗಳಲ್ಲಿ ಶೆಲ್ಡನ್ ಜಾಕ್ಸನ್ ಹತ್ತಿರ ಹತ್ತಿರ 2000 ರನ್ ಕಲೆ ಹಾಕಿದ್ದಾರೆ. 2006ರಲ್ಲಿ ಸೌರಾಷ್ಟ್ರ ಪರ ಆಡುವ ಮೂಲಕ ದೇಶೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಶೆಲ್ಡನ್ ಜಾಕ್ಸನ್, ಒಟ್ಟು 79 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು 50.39ರ ಸರಾಸರಿಯಲ್ಲಿ 19 ಶತಕ ಹಾಗೂ 31 ಅರ್ಧಶತಕಗಳ ನೆರವಿನಿಂದ 5,947 ರನ್ ಗಳಿಸಿದ್ದಾರೆ. 67 ಲಿಸ್ಟ್ ’ಎ’ ಪಂದ್ಯಗಳನ್ನಾಡಿರುವ ಜಾಕ್ಸನ್ 8 ಶತಕ ಹಾಗೂ 12 ಅರ್ಧಶತಕಗಳ ಸಹಿತ 37.23ರ ಸರಾಸರಿಯಲ್ಲಿ 2,346 ರನ್ ಕಲೆ ಹಾಕಿದ್ದಾರೆ. ಟಿ20 ವೃತ್ತಿಜೀವನದಲ್ಲಿ ಆಡಿದ 70 ಪಂದ್ಯಗಳಿಂದ ಒಂದು ಶತಕ ಹಾಗೂ 10 ಅರ್ಧಶತಕಗಳೊಂದಿಗೆ 1,534 ರನ್ ಗಳಿಸಿದ್ದಾರೆ. 2022ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ 5 ಪಂದ್ಯಗಳನ್ನಾಡಿದ್ದ ಶೆಲ್ಡನ್ ಜಾಕ್ಸನ್ ಕೇವಲ 23 ರನ್ ಗಳಿಸಿದ್ದರು.

ನ್ಯೂಜಿಲೆಂಡ್ ‘ಎ‘ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ‘ಎ‘ ತಂಡ
ಪ್ರಿಯಾಂಕ್ ಪಾಂಚಾಲ್ (ನಾಯಕ), ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಕೆ.ಎಲ್ ಭರತ್ (ವಿಕೆಟ್ ಕೀಪರ್), ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಸೌರಭ್ ಕುಮಾರ್, ರಾಹುಲ್ ಚಹರ್, ಪ್ರಸಿದ್ಧ್ ಕೃಷ್ಣ, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್, ಯಶ್ ದಯಾಳ್, ಅರ್ಝಾನ್ ನಾಗಸ್ವಾಲ.

ಭಾರತ ‘ಎ‘ Vs ನ್ಯೂಜಿಲೆಂಡ್ ‘ಎ‘ಟೆಸ್ಟ್ ಸರಣಿಯ ವೇಳಾಪಟ್ಟಿ
ಪ್ರಥಮ ಟೆಸ್ಟ್: ಸೆಪ್ಟೆಂಬರ್ 1-4 (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
ದ್ವಿತೀಯ ಟೆಸ್ಟ್: ಸೆಪ್ಟೆಂಬರ್ 8-11 (KSCA ರಾಜನಗರ ಕ್ರೀಡಾಂಗಣ, ಹುಬ್ಬಳ್ಳಿ)
ತೃತೀಯ ಟೆಸ್ಟ್: ಸೆಪ್ಟೆಂಬರ್ 15-18 (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)

ಇದನ್ನೂ ಓದಿ : Hardik Pandya Car Collection : ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್ ನೋಡಿದ್ರೆ ನಿಮ್ಗೆ ಅಚ್ಚರಿಯಾಗತ್ತೆ

ಇದನ್ನೂ ಓದಿ : Virat Kohli: “ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿಲ್ಲ, ಆದರೆ..” ಫಾರ್ಮ್ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ

Sheldon Jackson My age is 35 not 75 Cricketer lashed out at BCCI for not getting opportunity

Comments are closed.