Vijay Hazare Trophy Karnataka : ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡು ಸೆಮಿಫೈನಲ್’ಗೆ ಲಗ್ಗೆ ಇಟ್ಟ ಕರ್ನಾಟಕ

ಅಹ್ಮದಾಬಾದ್: ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ (Vijay Hazare Trophy Karnataka) ಏಕದಿನ ಟೂರ್ನಿಯಲ್ಲಿ ಸೆಮಿಫೈನಲ್’ ಗೆ ಲಗ್ಗೆ ಇಟ್ಟಿದೆ. ಅಹ್ಮದಾಬಾದ್’ನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್ ತಂಡವನ್ನು 4 ವಿಕೆಟ್’ಗಳಿಂದ ಮಣಿಸಿ ಸೆಮಿಫೈನಲ್’ಗೆ ಎಂಟ್ರಿ ಕೊಟ್ಟಿತು. ಈ ಗೆಲುವಿನೊಂದಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್’ನಲ್ಲಿ ಪಂಜಾಬ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಮಯಾಂಕ್ ಬಳಗ ಸೇಡು ತೀರಿಸಿಕೊಂಡಿತು.

ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಟಾಸ್ ಸೋತು ಬ್ಯಾಟಿಂಗ್’ಗೆ ಇಳಿಸಲ್ಪಟ್ಟ ಪಂಜಾಬ್’ಗೆ ಇನ್ನಿಂಗ್ಸ್’ನ ಮೊದಲ ಎಸೆತದಲ್ಲೇ ಮಧ್ಯಮ ವೇಗಿ ವಿದ್ವತ್ ಕಾವೇರಪ್ಪ, ಪ್ರಬ್’ಸಿಮ್ರಾನ್ ಸಿಂಗ್ ವಿಕೆಟ್ ಕಬಳಿಸಿ ಆಘಾತ ನೀಡಿದರು. ಆದರೆ ಮತ್ತೊಬ್ಬ ಓಪನರ್ ಅಭಿಷೇಕ್ ಸಿಂಗ್ ಅಮೋಘ ಶತಕ (109) ಬಾರಿಸಿ ಪಂಜಾಬ್’ಗೆ ಆಸರೆಯಾದರು. ಕೊನೆಯಲ್ಲಿ ಪಂಜಾಬ್ 50 ಓವರ್’ಗಳಲ್ಲಿ 235 ರನ್’ಗಳಿಗೆ ಆಲೌಟಾಯಿತು. ಕರ್ನಾಟಕ ಪರ ವಿದ್ವತ್ ಕಾವೇರಪ್ಪ 40 ರನ್ನಿಗೆ 4 ವಿಕೆಟ್ ಪಡೆದರೆ, ರೋನಿತ್ ಮೋರೆ 2 ವಿಕೆಟ್ ಹಾಗೂ ವಿ.ಕೌಶಿಕ್, ಮನೋಜ್ ಭಾಂಡಗೆ ಮತ್ತು ಕೆ.ಗೌತಮ್ ತಲಾ ಒಂದು ವಿಕೆಟ್ ಉರುಳಿಸಿದರು.

236 ರನ್’ಗಳ ಗುರಿ ಬೆನ್ನಟ್ಟಿದ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್(1) ಅವರನ್ನು ಅಲ್ಪಮೊತ್ತಕೆ ಕಳೆದುಕೊಂಡಿತು. ಆದರೆ 2ನೇ ವಿಕೆಟ್’ಗೆ ಉಪನಾಯಕ ಆರ್.ಸಮರ್ಥ್ (71) ಮತ್ತು ಯುವ ಬಲಗೈ ಬ್ಯಾಟ್ಸ್’ಮನ್ ನಿಕಿನ್ ಜೋಸ್(29) 51 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಮಾಜಿ ನಾಯಕ ಮನೀಶ್ ಪಾಂಡೆ 35 ರನ್, ಆಲ್ರೌಂಡರ್ ಶ್ರೇಯಸ್ ಗೋಪಾಲ್ 42 ರನ್ ಮತ್ತು ಮನೋಜ್ ಭಾಂಡಗೆ ಅಜೇಯ 25 ರನ್’ಗಳ ಕಾಣಿಕೆಯಿತ್ತರು. ಅಂತಿಮವಾಗಿ ಕರ್ನಾಟಕ 49.2 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿ ಗೆಲುವು ದಾಖಲಿಸಿತು. ಬುಧವಾರ (ನವೆಂಬರ್ 30) ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ಸವಾಲನ್ನು ಎದುರಿಸಲಿದೆ.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Ruturaj Gaikwad: ಒಂದೇ ಓವರ್‌ನಲ್ಲಿ 7 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಬರೆದ ರುತುರಾಜ್ ಗಾಯಕ್ವಾಡ್

ಇದನ್ನೂ ಓದಿ : Sanju Samson at Fifa World Cup : ಟೀಮ್ ಇಂಡಿಯಾದಲ್ಲಿ ನಿರಂತರ ಅನ್ಯಾಯ, ಫಿಪಾ ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್

Vijay Hazare Trophy Karnataka Enter Semi Final Karnataka vs Punjab

Comments are closed.