Yuvraj Singh SIX 6S : ಯುವಿ 6 ಸಿಕ್ಸರ್‌ಗಳ ವಿಶ್ವ ವಿಕ್ರಮಕ್ಕೆ ತುಂಬಿತು 15 ವರ್ಷ; ಮಗನ ಜೊತೆ ಕೂತು ಹೈಲೈಟ್ಸ್ ವೀಕ್ಷಿಸಿದ ಸಿಕ್ಸರ್ ಕಿಂಗ್

ಬೆಂಗಳೂರು: (Yuvraj Singh SIX 6S) ಯುವರಾಜ್ ಸಿಂಗ್ ಅಂದ್ರೆ ಥಟ್ ಅಂತ ನೆನಪಾಗೋದು 6 ಸಿಕ್ಸರ್’ಗಳು, ಒಂದೇ ಓವರ್ ಸಿಡಿಸಿದ ಆರು ಸಿಕ್ಸರ್’ಗಳು. 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್’ನಲ್ಲಿ ಆರು ಸಿಕ್ಸರ್’ಗಳನ್ನು ಯುವಿ ಬಾರಿಸಿದ್ರು. ಪಂಜಾಬ್ ಸಿಂಹ ಯುವರಾಜ್ ಸಿಂಗ್ (Yuvraj Singh) ಅವರ ಆ ಆರು ಸಿಕ್ಸರ್’ಗಳ ವಿಶ್ವವಿಕ್ರಮಕ್ಕೆ ಇವತ್ತಿಗೆ (ಸೆಪ್ಟೆಂಬರ್ 19) ಭರ್ತಿ 15 ವರ್ಷ ತುಂಬಿದೆ. ಆ ಕ್ಷಣವನ್ನು ಯುವರಾಜ್ ಸಿಂಗ್ ತಮ್ಮ 8 ತಿಂಗಳ ಪುತ್ರನ ಜೊತೆ ಕುಳಿತು ಮತ್ತೆ ಟಿವಿಯಲ್ಲಿ ವೀಕ್ಷಿಸಿದ್ದಾರೆ. ಪುತ್ರ ಓರಾಯನ್ ಕೀಚ್ ಸಿಂಗ್ ಜೊತೆ 15 ವರ್ಷಗಳ ಹಿಂದಿನ ಆ ಪಂದ್ಯದ ಹೈಲೈಟ್ಸನ್ನು ವೀಕ್ಷಿಸುತ್ತಿರುವ ದೃಶ್ಯವನ್ನು ಸ್ವತಃ ಯುವರಾಜ್ ಸಿಂಗ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, “15 ವರ್ಷಗಳ ನಂತರ ಇದನ್ನು ವೀಕ್ಷಿಸಲು ಈತನಿಗಿಂತ ಒಳ್ಳೆಯ ಜೊತೆಗಾರ ಮತ್ತೊಬ್ಬನಿಲ್ಲ” ಎಂದು ಬರೆದುಕೊಂಡಿದ್ದಾರೆ.

2007ರ ಸೆಪ್ಟೆಂಬರ್ 19ರಂದು ದಕ್ಷಿಣ ಆಫ್ರಿಕಾದ ಡರ್ಬನ್’ನ ಕಿಂಗ್ಸ್ ಮೀಡ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಯುವರಾಜ್ ಸಿಂಗ್, ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಎಸೆದ 19ನೇ ಓವರ್’ನ ಆರೂ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದರು. ಆ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ್ದ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಟಿ20 ಕ್ರಿಕೆಟ್ ಇತಿಹಾಸದ ಅತೀ ವೇಗದ ಅರ್ಧಶತಕ ಸಿಡಿಸಿದ್ದರು.

ಯುವಿ ಆರು ಸಿಕ್ಸರ್’ಗಳ ವಿಶ್ವದಾಖಲೆಗೆ ಒಂದೂವರೆ ದಶಕ ತುಂಬಿರುವ ಸಂಭ್ರಮ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಯುವರಾಜ್ ಸಿಂಗ್ ವಿಶ್ವವಿಕ್ರಮದ ಬಗ್ಗೆ ಬಿಸಿಸಿಐ ಟ್ವಿಟರ್ ಪೋಸ್ಟ್ ಹಾಕಿದೆ. ಐಪಿಎಲ್ ಫ್ರಾಂಚೈಸಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಸಿಕ್ಸರ್ ಕಿಂಗ್’ಗೆ ಟ್ವಿಟರ್ ಮೂಲಕ ತಮ್ಮ ಗೌರವ ಸಲ್ಲಿಸಿವೆ.

ಯುವರಾಜ್ ಸಿಂಗ್ ಅವರ ಸಾಹಸದಿಂದ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ತಲುಪಿತ್ತು. ಆಸ್ಟ್ರೇಲಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಸಿಡಿಲಬ್ಬರದ ಆಟವಾಡಿದ್ದ ಯುವಿ, ಕೇವಲ 30 ಎಸೆತಗಳಲ್ಲಿ 70 ರನ್ ಸಿಡಿಸಿದ್ದರು. ಯುವಿ ಸಾಹಸದಿಂದ 15 ರನ್’ಗಳಿಂದ ಪಂದ್ಯ ಗೆದ್ದಿದ್ದ ಭಾರತ ಫೈನಲ್ ತಲುಪಿತ್ತು. ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5 ರನ್’ಗಳಿಂದ ರೋಚಕವಾಗಿ ಮಣಿಸಿದ್ದ ಭಾರತ, ಚೊಚ್ಚಲ ಆವೃತ್ತಿಯಲ್ಲೇ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ಇದನ್ನೂ ಓದಿ : ಆಸೀಸ್ ವಿರುದ್ಧದ ಟಿ20 ಸರಣಿ: ಭಾರತ ತಂಡಕ್ಕೆ ಸಿಕ್ಕ ಹೊಸ ಬೌಲರ್; ಹೆಸರು ಕೇಳಿದ್ರೆ ಗಾಬರಿಯಾಗ್ತೀರಿ

ಇದನ್ನೂ ಒದಿ : Dhoni and Yuvraj Singh: ಮತ್ತೆ ಒಂದಾದ ಭಲೇ ಜೋಡಿ.. ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಧೋನಿ-ಯುವಿ

Yuvraj Singh SIX 6S Vs England Watching With Son

Comments are closed.