Rahul Dravid : ಹೃದಯವಂತ ರಾಹುಲ್ ದ್ರಾವಿಡ್.. “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಇಷ್ಟವಾಗೋದು ಇದೇ ಕಾರಣಕ್ಕೆ

ಮೊಹಾಲಿ: (Rahul Dravid ) ಭಾರತ ಕ್ರಿಕೆಟ್ ತಂಡದ ಹಾಲಿ ಕೋಚ್, ಭಾರತೀಯ ಕ್ರಿಕೆಟ್’ನ ಮಹಾಗೋಡೆ ಎಂಬ ಬಿರುದಾಂಕಿತ ರಾಹುಲ್ ದ್ರಾವಿಡ್ ಕ್ರಿಕೆಟ್ ಜಗತ್ತು ಕಂಡ ಜಂಟಲ್’ ಮ್ಯಾನ್. ಜಂಟಲ್’ಮ್ಯಾನ್ ಗೇಮ್’ನ ನಿಜವಾದ ಜಂಟಲ್’ಮ್ಯಾನ್ ರಾಹುಲ್ ದ್ರಾವಿಡ್. ಹೃದಯವೈಶಾಲ್ಯತೆಗೆ ಹೆಸರಾಗಿರುವ ರಾಹುಲ್ ದ್ರಾವಿಡ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯದ ನಂತರ ತಮ್ಮ ಹೃದಯ ವೈಶಾಲ್ಯತೆಯನ್ನು ಮತ್ತೊಮ್ಮೆ ತೋರಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆದ 2ನೇ ಟಿ20 ಪಂದ್ಯಕ್ಕೆ (India Vs Australia T20 Series) ಮಳೆಯ ಅಡಚಣೆ ಎದುರಾಗಿತ್ತು. ಹೀಗಾಗಿ ತಲಾ 8 ಓವರ್’ಗಳಿಗೆ ಸೀಮಿತಗೊಳಿಸಲಾಗಿದ್ದ ಪಂದ್ಯವನ್ನು 6 ವಿಕೆಟ್’ಗಳಿಂದ ಗೆದ್ದ ಭಾರತ 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು.

ಮಳೆಯಿಂದ ಒದ್ದೆಯಾಗಿದ್ದ ಪಿಚ್ ಅನ್ನು, ಮೈದಾನವನ್ನು ಒಣಗಿಸಲು ವಿದರ್ಭ ಕ್ರಿಕೆಟ್ ಸಂಸ್ಥೆಯ ಗ್ರೌಂಡ್ಸ್’ಮನ್’ಗಳು ಹರಸಾಹಸ ಪಟ್ಟರು. ಪಿಚ್ ಒಣಗಿಸಲು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆಗಳನ್ನು ಬಳಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಗ್ರೌಂಡ್ಸ್’ಮನ್’ಗಳ ಶ್ರಮದಿಂದ ಮತ್ತೆ ಪಂದ್ಯ ನಡೆಯುವಂತಾಗಿತ್ತು. ಕ್ರೀಡಾಂಗಣದ ಸಿಬ್ಬಂದಿಗಳ ಶ್ರಮ ಎಷ್ಟು ಜನರ ಗಮನಕ್ಕೆ ಬಂತೋ ಗೊತ್ತಿಲ್ಲ, ಆದ್ರೆ ರಾಹುಲ್ ದ್ರಾವಿಡ್ ಅವರಿಗಂತೂ ಆ ಶ್ರಮದ ಬಗ್ಗೆ ಬಗ್ಗೆ ಸ್ಪಷ್ಟ ಅರಿವಿತ್ತು. ಹೀಗಾಗಿ ಪಂದ್ಯ ಮುಗಿದ ನಂತರ ಕ್ರೀಡಾಂಗಣಕ್ಕೆ ಬಂದ ರಾಹುಲ್ ದ್ರಾವಿಡ್ ಪಿಚ್ ಕ್ಯುರೇಟರ್, ಗ್ರೌಂಡ್ಸ್’ಮನ್’ಗಳನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಮೈದಾನದ ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸಿ ಶಹಬ್ಬಾಸ್ ಹೇಳಿದರು. ರಾಹುಲ್ ದ್ರಾವಿಡ್ ಆಡಿದ ಮಾತುಗಳನ್ನು ಕೇಳಿ ಗ್ರೌಂಡ್ಸ್’ಮನ್’ಗಳು ಒಂದು ಕ್ಷಣ ಭಾವುಕರಾಗಿಬಿಟ್ರು.

ಮಳೆಯಿಂದ ಅಡಚಣೆಗೊಳಗಾಗಿ ತಲಾ 8 ಓವರ್’ಗಳಿಗೆ ಸೀಮಿತಗೊಳಿಸಲಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಭಾರತ ಇನ್ನೂ 4 ಎಸೆತಗಳು ಬಾಕಿ ಇರುತ್ತಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಭಾರತದ ಇನ್ನಿಂಗ್ಸ್ ವೇಳೆ ನಾಯಕ ರೋಹಿತ್ ಶರ್ಮಾ ಅಕ್ಷರಶಃ ಅಬ್ಬರಿಸಿದರು. ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 46 ರನ್ ಬಾರಿಸಿ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. 3 ಪಂದ್ಯಗಳ ಸರಣಿ ಇದೀಗ 1-1ರಲ್ಲಿ ಸಮಬಲಗೊಂಡಿತ್ತು, ಸರಣಿ ನಿರ್ಣಾಯಕ 3ನೇ ಟಿ20 ಪಂದ್ಯ ಭಾನುವಾರ (ಸೆಪ್ಟೆಂಬರ್ 25) ಹೈದರಾಬಾದ್’ನಲ್ಲಿ ನಡೆಯಲಿದೆ.

Hearty Rahul Dravid This is the reason why I like The Great Wall of India

Comments are closed.