IND vs SA 2nd ODI Results: 2ನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಸೋಲು; ಸರಣಿ ದಕ್ಷಿಣ ಆಫ್ರಿಕಾ ಪಾಲು

ಭಾರತ ತಂಡವು ನೀಡಿದ್ದ 288 ರನ್ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 48.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆತಿಥೇಯ ತಂಡ 7 ವಿಕೆಟ್‌ಗಳಿಂದ ಗೆದ್ದುಕೊಂಡಿದ್ದು, ಸರಣಿಯನ್ನು 2–0 ಅಂತರದಿಂದ (IND vs SA 2nd ODI Results) ತನ್ನದಾಗಿಸಿಕೊಂಡಿದೆ. ಈಮೂಲಕ ದಕ್ಷಿಣ ಆಫ್ರಿಕಾದ ಪಾರ್ಲ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ನಿರಾಸೆಯಾದಂತಾಗಿದೆ.

ಚೇಸಿಂಗ್ ಆರಂಭಿಸಿದ ಅತಿಥೇಯ ತಂಡಕ್ಕೆ ಆರಂಭದಲ್ಲೇ ಜಾನ್ನೆಮ್ ಮಲನ್ (91 ರನ್, 108 ಎಸೆತ, 8 ಬೌಂಡರಿ, 1 ಸಿಕ್ಸ್) ಹಾಗೂ ಕ್ವಿಂಟನ್ ಡಿಕಾಕ್ (78 ರನ್, 66 ಎಸೆತ, 7 ಬೌಂಡರಿ, 3 ಸಿಕ್ಸ್) ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 132 ರನ್ ಕಲೆಹಾಕಿತು. ಟೆಂಬಾ ಬೌಮಾ 36 ಎಸೆತಗಳಿಂದ 35 ರನ್ ಗಳಿಸಿದರು. ಈ ಆಟದಲ್ಲಿ 3 ಬೌಂಡರಿಗಳಿದ್ದವು. ಏಡನ್ ಮಾರ್ಕ್ರಂ ಔಟಾಗದೆ 37 ರನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಔಟಾಗದೆ 37 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ಪರ ಜಸ್‌ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡಕ್ಕೆ, ನಾಯಕ ಕೆ.ಎಲ್.ರಾಹುಲ್ (55 ರನ್, 79 ಎಸೆತ, 4 ಬೌಂಡರಿ) ಹಾಗೂ ಶಿಖರ್ ಧವನ್ (29 ರನ್, 38 ಎಸೆತ, 5 ಬೌಂಡರಿ) ಮೊದಲ ವಿಕೆಟ್‌ಗೆ 63 ರನ್‌ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ಬಳಿಕ ಜತೆಯಾದ ರಾಹುಲ್, ರಿಷಭ್ ಪಂತ್ ಅತ್ಯುತ್ತಮ ಜತೆಯಾಟ ಕಟ್ಟಿಕೊಟ್ಟರು.

ಕೆ.ಎಲ್.ರಾಹುಲ್ ತಾಳ್ಮೆಯ ಅರ್ಧಶತಕ ದಾಖಲಿಸುವ ಮೂಲಕ ಜತೆಗಾರ ರಿಷಭ್ ಪಂತ್‌ಗೆ ಉತ್ತಮ ಸಾಥ್ ಕೊಟ್ಟರು. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚಚ್ಚಿದ ಪಂತ್ (85 ರನ್, 71 ಎಸೆತ, 10 ಬೌಂಡರಿ, 2 ಸಿಕ್ಸರ್) ತಂಡದ ಮೊತ್ತ 300 ಗಡಿ ದಾಟಬಹುದೆಂಬ ಭರವಸೆ ಮೂಡಿಸಿದ್ದರು. ಆದರೆ ಪಂತ್–ರಾಹುಲ್ ಜೋಡಿ ವಿಕೆಟ್ ಪತನವಾದ ಬಳಿಕ ಉತ್ತಮ ಜತೆಯಾಟ ಮೂಡಿಬರಲೇ ಇಲ್ಲ. ಮಧ್ಯಮ ಕ್ರಮಾಂಕ ಭಾರತಕ್ಕೆ ರನ್‌ಗಳು ಹರಿದುಬರಲಿಲ್ಲ. ಆದರೆ ಕೊನೆಯಲ್ಲಿ ಶಾರ್ದೂಲ್ ಠಾಕೂರ್ (40 ರನ್ 38 ಎಸೆತ, 3 ಬೌಂಡರಿ, 1 ಸಿಕ್ಸ್) ಹಾಗೂ ಅಶ್ವಿನ್ (25 ರನ್, 24 ಎಸೆತ, 1 ಬೌಂಡರಿ, 1 ಸಿಕ್ಸ್) ಜೋಡಿ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಂತೆ ಮಾಡುವಲ್ಲಿ ಸಫಲರಾದರು. ಪರಿಣಾಮವಾಗಿ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್ ಕಲೆಹಾಕಿತು.

ದಕ್ಷಿಣ ಆಫ್ರಿಕಾ ಪರ ಶಮ್ಸಿ 2 ವಿಕೆಟ್ ಪಡೆದರೆ ಪೆಹ್ಲುಕ್ವಾಯೊ, ಮಹಾರಾಜ್, ಮಾರ್ಕ್ರಂ, ಮಗಲ ತಲಾ 1 ವಿಕೆಟ್ ಪಡೆದರು. ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು, 23ರಂದು ನಡೆಯಲಿದೆ.

ಇದನ್ನೂ ಓದಿ: How to earn from Instagram: ಇನ್ಸ್ಟಾಗ್ರಾಮ್ ಮೂಲಕವೂ ಹಣ ಗಳಿಸಬಹುದು!

(IND vs SA 2nd ODI Results India lost series)

Comments are closed.