Death Over Problem : ವಿಶ್ವಕಪ್‌ಗೆ ಡೇಂಜರ್ ಸಿಗ್ನಲ್.. ಭಾರತವನ್ನು ಸೋಲಿಸುತ್ತಿದ್ದಾನೆ “ಡೆತ್ ಓವರ್” ವಿಲನ್

ಮೊಹಾಲಿ: (Death Over Problem Team India) ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ (India vs as Australia) ಭಾರತದ ಪಾಲಿಗೆ ಟಿ20 ವಿಶ್ವಕಪ್’ಗೆ (ICC T20 World Cup) ಸಜ್ಜಾಗುವ ವೇದಿಕೆ. ಕಾಂಗರೂಗಳ ವಿರುದ್ಧ ವಿಶ್ವಕಪ್ ತಾಲೀಮು ಆರಂಭಿಸಿರುವ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲೇ ಸೋಲು ಕಂಡಿದೆ. ಈ ಸೋಲಿನೊಂದಿಗೆ ಭಾರತದ ಡೆತ್ ಓವರ್ ಬೌಲಿಂಗ್ ವೈಫಲ್ಯ ಮತ್ತೊಮ್ಮೆ ಬಟಾ ಬಯಲಾಗಿದೆ. ಅದರಲ್ಲೂ ಪ್ರಮುಖವಾಗಿ ಅನುಭವಿ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಅವರು ಡೆತ್ ಓವರ್ ಬೌಲಿಂಗ್’ನಲ್ಲಿ ಮತ್ತೆ ಎಡವಿದ್ದಾರೆ.

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ (India Vs Australia T20 Series) 209 ರನ್’ಗಳ ಕಠಿಣ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾಗೆ ಕೊನೆ 4 ಓವರ್’ಗಳಲ್ಲಿ 55 ರನ್’ಗಳ ಅವಶ್ಯಕತೆಯಿತ್ತು. 17ನೇ ಓವರ್ ಬೌಲಿಂಗ್ ಮಾಡಿದ್ದ ಭುವನೇಶ್ವರ್ ಕುಮಾರ್ 15 ರನ್ ಬಿಟ್ಟುಕೊಟ್ಟಿದ್ದರು. 19ನೇ ಓವರ್’ನಲ್ಲಿ ಮತ್ತೆ 16 ರನ್ ನೀಡಿದ ಭುವನೇಶ್ವರ್ ತಮ್ಮ ಅನುಭವಕ್ಕೆ ತಕ್ಕಂತೆ ಬೌಲಿಂಗ್ ಮಾಡುವಲ್ಲಿ ವಿಫಲರಾಗಿದ್ದರು. ಡೆತ್ ಓವರ್’ನಲ್ಲಿ ಭುವನೇಶ್ವರ್ 2 ಓವರ್’ಗಳಲ್ಲಿ 31 ರನ್ ಬಿಟ್ಟುಕೊಟ್ಟದ್ದು ಭಾರತದ ಸೋಲಿಗೆ ಕಾರಣವಾಗಿದ್ದು. 19ನೇ ಓವರ್’ನ ಕೊನೆಯ ಮೂರು ಎಸೆತಗಳಲ್ಲಿ ಆಸೀಸ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಭುವನೇಶ್ವರ್ ಕುಮಾರ್ ಬೌಲಿಂಗ್’ನಲ್ಲಿ ಸತತ ಮೂರು ಬೌಂಡರಿಗಳನ್ನು ಬಾರಿಸಿದ್ದರು.

ಭುವನೇಶ್ವರ್ ಅವರ ಡೆತ್ ಓವರ್ ಬೌಲಿಂಗ್ ವೈಫಲ್ಯ ಮತ್ತೊಬ್ಬ ಮಧ್ಯಮ ವೇಗಿ ಹರ್ಷಲ್ ಪಟೇಲ್ ಅವರ ಬೌಲಿಂಗ್ ಮೇಲೂ ನಕಾರಾತ್ಮಕ ಪರಿಣಾಮ ಬೀರಿತ್ತು. 16ನೇ ಓವರ್’ನಲ್ಲಿ ಕೇವಲ 6 ರನ್ ನೀಡಿದ್ದ ಹರ್ಷಲ್ 18ನೇ ಓವರ್’ನಲ್ಲಿ 22 ರನ್ ಚಚ್ಚಸಿಕೊಂಡಿದ್ದರು. ಹರ್ಷಲ್ ಪಟೇಲ್ 16ನೇ ಓವರ್’ನಲ್ಲಿ ಬಿಗು ಬೌಲಿಂಗ್ ಪ್ರದರ್ಶಿಸಿದ ನಂತರ ಮುಂದಿನ ಓವರ್’ನಲ್ಲಿ ಭುವನೇಶ್ವರ್ ಕುಮಾರ್ ಕರಾರುವಾಕ್ ದಾಳಿ ನಡೆಸಿದ್ದಿದ್ದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು. ಆಸೀಸ್ ವಿರುದ್ಧ ಭುವನೇಶ್ವರ್ 4 ಓವರ್’ಗಳಲ್ಲಿ 52 ರನ್ ಬಿಟ್ಟುಕೊಟ್ಟಿದ್ದರು. 209 ರನ್’ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ಇನ್ನೂ 4 ಎಸೆತಗಳು ಬಾಕಿ ಇರುತ್ತಲೇ 6 ವಿಕೆಟ್ ಕಳೆದುಕೊಂಡು ಭರ್ಜರಿ ಗೆಲುವು ದಾಖಲಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಡೆತ್ ಓವರ್’ಗಳಲ್ಲಿ ಭುವನೇಶ್ವರ್ ಕುಮಾರ್ ದುಬಾರಿಯಾಗಿ ಭಾರತದ ಸೋಲಿಗೆ ಕಾರಣರಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಏಷ್ಯಾ ಕಪ್ ಟೂರ್ನಿಯ ಸೂಪರ್-4 ಹಂತದಲ್ಲೂ ಭುವನೇಶ್ವರ್ ಕುಮಾರ್ ಡೆತ್ ಓವರ್’ಗಳಲ್ಲಿ ಸಂಪೂರ್ಣ ವಿಫಲರಾಗಿದ್ದರು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ 19ನೇ ಓವರ್’ನಲ್ಲಿ 19 ರನ್ ನೀಡಿದ್ದ ಭುವನೇಶ್ವರ್, ಶ್ರೀಲಂಕಾ ವಿರುದ್ಧದ ಪಂದ್ಯದ 19ನೇ ಓವರ್’ನಲ್ಲಿ 14 ರನ್ ಬಿಟ್ಟುಕೊಟ್ಟಿದ್ದರು. ಭುವಿ ವೈಫಲ್ಯದಿಂದಾಗಿ ಭಾರತ ಆ ಎರಡೂ ಪಂದ್ಯಗಳಲ್ಲಿ ಸೋಲು ಫೈನಲ್ ತಲುಪುವಲ್ಲಿ ವಿಫಲವಾಗಿತ್ತು. ಪಾಕಿಸ್ತಾನ, ಶ್ರೀಲಂಕಾ ವಿರುದ್ಧ 19ನೇ ಓವರ್, ಆಸ್ಟ್ರೇಲಿಯಾ ವಿರುದ್ಧ 17 ಹಾಗೂ 19ನೇ ಓವರ್ ಸೇರಿ ಕಳೆದ ಮೂರು ಟಿ20 ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಡೆತ್ ಓವರ್’ಗಳಲ್ಲಿ ಒಟ್ಟು ನಾಲ್ಕು ಓವರ್ ಎಸೆದಿದ್ದು 63 ರನ್ ಬಿಟ್ಟುಕೊಟ್ಟಿದ್ದಾರೆ. ಈ ವೇಳೆ ಒಂದೇ ಒಂದು ವಿಕೆಟ್ ಪಡೆಯಲು ಭುವಿ ವಿಫಲರಾಗಿದ್ದಾರೆ.

ಡೆತ್ ಓವರ್ ಬೌಲಿಂಗ್: ಕೊನೆಯ 4 ಟಿ20 ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್
Vs ಪಾಕಿಸ್ತಾನ: 19ನೇ ಓವರ್’ನಲ್ಲಿ 19 ರನ್
Vs ಶ್ರೀಲಂಕಾ: 19ನೇ ಓವರ್’ನಲ್ಲಿ 14 ರನ್
Vs ಅಫ್ಘಾನಿಸ್ತಾನ: ಬೌಲಿಂಗ್ ಮಾಡಿಲ್ಲ
Vs ಆಸ್ಟ್ರೇಲಿಯಾ: 17ನೇ ಓವರ್’ನಲ್ಲಿ 15 ರನ್, 19ನೇ ಓವರ್’ನಲ್ಲಿ 16 ರನ್

ಆಸ್ಟ್ರೇಲಿಯಾದ ವಿರುದ್ಧದ ಮುಂದಿನ ಪಂದ್ಯದಲ್ಲಿ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದ್ದು, ಭಾರತದ ಡೆತ್ ಓವರ್ ಬೌಲಿಂಗ್ ವೈಫಲ್ಯಕ್ಕೆ ಬುಮ್ರಾ ಉತ್ತರವಾಗಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ. ಆಸೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಶುಕ್ರವಾರ (ಸೆಪ್ಟೆಂಬರ್ 23) ನಾಗ್ಪುರದಲ್ಲಿ ನಡೆಯಲಿದೆ.

ಇದನ್ನೂ ಓದಿ : Rohit Sharma Dinesh Karthik : ಭಾರತ Vs ಆಸ್ಟ್ರೇಲಿಯಾ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕುತ್ತಿಗೆ ಹಿಚುಕಿದ ರೋಹಿತ್ ಶರ್ಮಾ

ಇದನ್ನೂ ಓದಿ : Virat Kohli : ಕ್ರಿಕೆಟ್ ದೇವರ 100 ಶತಕಗಳ ವಿಶ್ವದಾಖಲೆಯನ್ನು ಮುರಿಯಲಿದ್ದಾರೆ ವಿರಾಟ್ “ಕಿಂಗ್” ಕೊಹ್ಲಿ

India vs as Australia t20 Death Over Problem for Team India ICC T20 World Cup

Comments are closed.