india vs newzealand Test : ಮಯಂಕ್ ಅಗರ್ವಾಲ್ ಭರ್ಜರಿ ಶತಕ; ಮೊದಲ ದಿನ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 221 ರನ್

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ತಡವಾಗಿ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ (india vs newzealand) ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ಮಯಂಕ್ ಅಗರ್ವಾಲ್ (Mayank Agarwal) ಆಕರ್ಷಕ ಶತಕದ (120*) ನೆರವಿನಿಂದ ಟೀಂ ಇಂಡಿಯಾವು ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ.

ರಾತ್ರಿಯಿಡೀ ಮಳೆಯಾಗಿದ್ದರಿಂದ ಪಂದ್ಯ ತಡವಾಗಿ ಆರಂಭವಾಗಿತ್ತು. ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಆರಂಭಿಕರಾದ ಮಯಂಕ್ ಅಗರ್ವಾಲ್ ಹಾಗೂ ಶುಭಮನ್ ಗಿಲ್ 80 ರನ್‌ಗಳ ಉತ್ತಮ ಜತೆಯಾಟ ನೀಡಿದರು. ಶುಭಮನ್ ಗಿಲ್ 44 ರನ್ ಗಳಿಸಿ ಅರ್ಧಶತಕ ವಂಚಿತರಾದರು.

ಆದರೆ ಭಾರತದ ಭದ್ರ ಅಡಿಪಾಯವನ್ನು ನ್ಯೂಜಿಲೆಂಡ್ ಸ್ಪಿನ್ನರ್ ಎಜಾಜ್ ಪಟೇಲ್ ಕೆಲವೇ ಕ್ಷಣಗಳಲ್ಲಿ ಬುಡಮೇಲು ಮಾಡಿದರು. ಅವರ ಸ್ಪಿನ್ ದಾಳಿಗೆ ಸಿಲುಕಿದ ಟೀಂ ಇಂಡಿಯಾ 80 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆದರು.

ಅಬ್ಬರಿಸಿದ ಅಗರ್ವಾಲ್: ಒಂದೆಡೆ ವಿಕೆಟ್‌ ಉದುರುತ್ತಿದ್ದರೂ ಆಕರ್ಷಕ ಇನ್ನಿಂಗ್ಸ್ ಆಡಿದ ಅಗರ್ವಾಲ್ ಶತಕ ಗಳಿಸಿ (120*) ಆಡುತ್ತಿದ್ದಾರೆ. ಇದರಲ್ಲಿ 14 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸೇರಿವೆ. ಕಳೆದ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದ ಶ್ರೇಯಸ್ ಅಯ್ಯರ್ 18 ರನ್ ಗಳಿಸಿ ಔಟಾದರು.

ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಹಾ 25 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ಅಗರ್ವಾಲ್‌ಗೆ ಸಾಥ್ ನೀಡುತ್ತಿದ್ದಾರೆ. ನ್ಯೂಜಿಲೆಂಡ್ ಪರ ಎಜಾಜ್ ಪಟೇಲ್ 73 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ: RCB New Captain : ಕೆ.ಎಲ್.ರಾಹುಲ್‌, ಪಡಿಕ್ಕಲ್‌ ಅಲ್ಲ : ಆರ್‌ಸಿಬಿ ನಾಯಕನಾಗ್ತಾನೆ ಈ ಕನ್ನಡಿಗ

(India vs New Zealand test match Mayank Agarwal scoring century In the first day Team India were 221 for 4)

Comments are closed.