KL Rahul : ಲಂಡನ್‌ನಲ್ಲಿ ಸರ್ಜರಿ ಮುಗಿಸಿ ಮನೆಗೆ ಮರಳಿದ ಕನ್ನಡಿಗ ಕೆ.ಎಲ್ ರಾಹುಲ್

ಬೆಂಗಳೂರು : ಸ್ನಾಯು ಸೆಳೆತ ಸಮಸ್ಯೆಗೆ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ (KL Rahul) ಸರ್ಜರಿ ನಂತರ ತವರಿಗೆ ಮರಳಿದ್ದಾರೆ. ಬುಧವಾರ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಹುಲ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy – NCA) ಪುನಶ್ಚೇತನ ಶಿಬಿರ ಆರಂಭಿಸಿದ್ದಾರೆ. ಎನ್‌ಸಿಎನಲ್ಲಿ ಕೆಲ ಫೋಟೋಗಳನ್ನು ಕ್ಲಿಕ್ಕಿಸಿರುವ ರಾಹುಲ್ ಮನೆ ಎಂಬ ಕ್ಯಾಪ್ಷನ್‌ನೊಂದಿಗೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಲಕ್ನೋದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುವ ವೇಳೆ ಕೆ.ಎಲ್ ರಾಹುಲ್ ಬಲ ತೊಡೆಯ ಸ್ನಾಯು ಸೆಳೆತಕ್ಕೊಳಗಾಗಿದ್ದರು. ನಂತರ ಐಪಿಎಲ್ ಟೂರ್ನಿಗೆ ಅಲಭ್ಯರಾಗಿದ್ದ ರಾಹುಲ್, ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಶಸ್ತ್ರಚಿಕಿತ್ಸೆಗೊಳಗಾದ ನಂತರ 10 ದಿನಗಳ ಕಾಲ ಲಂಡನ್‌ನಲ್ಲೇ ಉಳಿದುಕೊಂಡಿದ್ದ ರಾಹುಲ್, ಮೇ ತಿಂಗಳ ಅಂತ್ಯದಲ್ಲಿ ಮುಂಬೈಗೆ ವಾಪಸ್ಸಾಗಿದ್ದರು. ಕಳೆದ 15 ದಿನಗಳಿಂದ ಮುಂಬೈನಲ್ಲೇ ಇದ್ದ ರಾಹುಲ್, ಇದೀಗ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಶಸ್ತ್ರಚಿಕಿತ್ಸೆಯ ಕಾರಣದಿಂದ 31 ವರ್ಷದ ರಾಹುಲ್ ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ICC World test championship final 2023 – WTC final 2023) ಪಂದ್ಯಕ್ಕೆ ಅಲಭ್ಯರಾಗಿದ್ದರು. WTC ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 209 ರನ್‌ಗಳ ಹೀನಾಯ ಸೋಲು ಕಂಡಿತ್ತು.

ಇದನ್ನೂ ಓದಿ : India tour of West Indies 2023 : ಟೀಮ್ ಇಂಡಿಯಾದ ವೆಸ್ಟ್ ಪ್ರವಾಸದ ವೇಳಾಪಟ್ಟಿ ಬಿಡುಗಡೆ, ಕೆರಿಬಿಯನ್ ನಾಡಿನಲ್ಲಿ 2 ಟೆಸ್ಟ್, 3 ಏಕದಿನ, 5 ಟಿ20 ಪಂದ್ಯ

ರಾಹುಲ್ ಅವರ ಚೇತರಿಕೆಗೆ ಕನಿಷ್ಠ 2 ತಿಂಗಳು ಹಿಡಿಯಲಿರುವ ಕಾರಣ ಜುಲೈನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಲಭ್ಯರಾಗಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಹುಲ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಸಾಧ್ಯತೆಗಳಿದ್ದು, ಸೆಪ್ಟೆಂಬರ್ 2ರಿಂದ 17ರವರೆಗೆ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದ್ದಾರೆ. ಭಾರತ ಪರ ಟೆಸ್ಟ್ ಕ್ರಿಕೆಟ್’ನಲ್ಲಿ ಇನ್ನಿಂಗ್ಸ್ ಆರಂಭಿಸುವ ಕೆ.ಎಲ್ ರಾಹುಲ್, ಏಕದಿನ ಕ್ರಿಕೆಟ್’ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆ.

Kannadigas KL Rahul returned home after surgery in London

Comments are closed.