KSCA Maharaja Trophy : ಮಯಾಂಕ್ ತಂಡವನ್ನು ಸೋಲಿಸಿ ಮನೀಶ್ ಟೀಮ್ ಚಾಂಪಿಯನ್

ಬೆಂಗಳೂರು: (KSCA Maharaja Trophy) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದ KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮನೀಶ್ ಪಾಂಡೆ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್, ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 11 ರನ್’ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ತಂಡ ನಿಗದಿತ 20 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 220 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ಯುವ ಎಡಗೈ ಓಪನರ್ ರೋಹನ್ ಪಾಟೀಲ್ 21 ಎಸೆತಗಳಲ್ಲಿ 38 ರನ್ (6 ಬೌಂಡರಿ, 1 ಸಿಕ್ಸರ್), ಜೆಸ್ವಂತ್ ಆಚಾರ್ಯ 17 ಎಸೆತಗಳಲ್ಲಿ 39 ರನ್ (3 ಬೌಂಡರಿ, 3 ಸಿಕ್ಸರ್), ದೇವದತ್ ಪಡಿಕ್ಕಲ್ 42 ಎಸೆತಗಳಲ್ಲಿ ಅಜೇಯ 56 ರನ್ (5 ಬೌಂಡರಿ, 1 ಸಿಕ್ಸರ್) ಮತ್ತು ನಾಯಕ ಮನೀಶ್ ಪಾಂಡೆ 17 ಎಸೆತಗಳಲ್ಲಿ ಅಜೇಯ 42 ರನ್ (2 ಬೌಂಡರಿ, 4 ಸಿಕ್ಸರ್) ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಫೈನಲ್ ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ 63 ರನ್ ಗಳಿಸುವಷ್ಟರಲ್ಲಿ ನಾಯಕ ಮಯಾಂಗ್ ಅಗರ್ವಾಲ್ (16), ಅನಿರುದ್ಧ ಜೋಶಿ (7) ಹಾಗೂ ಜೆ.ಸುಚಿತ್ (5) ಸಹಿತ ಐದು ವಿಕೆಟ್’ಗಳನ್ನು ಕಳೆದುಕೊಂಡಿತು. ಆದರೆ 6ನೇ ವಿಕೆಟ್’ಗೆ ಜೊತೆಗೂಡಿದ ಆರಂಭಕಾರ ಎಲ್.ಆರ್ ಚೇತನ್ ಹಾಗೂ ಕ್ರಾಂತಿ ಕುಮಾರ್ 98 ರನ್’ಗಳ ಜೊತೆಯಾಟವಾಡಿ ತಂಡವನ್ನ ಮತ್ತೆ ಹಳಿಗೆ ತಂದು ನಿಲ್ಲಿಸಿದರು. ಆದರೆ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್’ಗಳ ನೆರವಿನಿಂದ 91 ರನ್ ಗಳಿಸಿ ಆಡುತ್ತಿದ್ದ ಚೇತನ್, 15ನೇ ಓವರ್’ನ ಕೊನೆಯ ಎಸೆತದಲ್ಲಿ ಔಟಾಗುತ್ತಿದ್ದಂತೆ ಬ್ಲಾಸ್ಟರ್ಸ್ ಮತ್ತೆ ಆಘಾತ ಎದುರಿಸಿತು. 17ನೇ ಓವರ್’ನ ಮೊದಲ ಎಸೆತದಲ್ಲಿ ಕ್ರಾಂತಿ ಕುಮಾರ್ (21 ಎಸೆತಗಳಲ್ಲಿ 47 ರನ್; 3 ಬೌಂಡರಿ, 3 ಸಿಕ್ಸರ್) ಕೂಡ ಔಟಾಗುತ್ತಿದ್ದಂತೆ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಸೋಲು ಖಚಿತವಾಯಿತು. ಅಂತಿಮವಾಗಿ ಬ್ಲಾಸ್ಟರ್ಸ್ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಲಷ್ಟೇ ಶಕ್ತವಾಗಿ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಸ್ಫೋಟಕ 41 ರನ್ ಸಿಡಿಸಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ನಾಯಕ ಮನೀಶ್ ಪಾಂಡೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿ ಒಟ್ಟು 397 ರನ್ ಕಲೆ ಹಾಕಿದ ರೋಹನ್ ಪಾಟೀಲ್ ಸರಣಿಶ್ರೇಷ್ಠರಾಗಿ ಮೂಡಿ ಬಂದರು.

ಇದನ್ನೂ ಓದಿ : Asia Cup 2022 start from today: ಇಂದಿನಿಂದ ಏಷ್ಯಾ ಕಪ್ 2022 ಆರಂಭ, IND vs PAK Playing 11

ಇದನ್ನೂ ಓದಿ : Virat Kohli : 3-2-1 ಕತಾರ್ ಒಲಿಂಪಿಕ್ ಮ್ಯೂಸಿಯಂಗೆ ಭೇಟಿ ಕೊಟ್ಟ ಕೊಹ್ಲಿಗೆ ಜೆರ್ಸಿ ಉಡುಗೊರೆ

KSCA Maharaja Trophy Manish Pandey team is the champion after defeating Mayank Agarwal team

Comments are closed.