Tamil Thalaivas : ಪಾಟ್ನಾ ವಿರುದ್ಧ ರೋಚಕವಾಗಿ ಗೆದ್ದ ತಮಿಳ್ ತಲೈವಾಸ್, ದಬಾಂಗ್ ಡೆಲ್ಲಿಗೆ ಸತತ 5ನೇ ಜಯ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 9ನೇ (Pro Kabaddi 2022) ಆವೃತ್ತಿಯಲ್ಲಿ ಸತತ 3 ಸೋಲುಗಳಿಂದ ಕಂಗೆಟ್ಟಿದ್ದ ತಮಿಳ್ ತಲೈವಾಸ್ (Tamil Thalaivas) ತಂಡ ಮೊದಲ ಗೆಲುವು ದಾಖಲಿಸಿದೆ. ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ, ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ (Patna Pirates) ತಂಡವನ್ನು 33-32ರ ಅಂತರದಲ್ಲಿ ರೋಚಕವಾಗಿ ಮಣಿಸಿತು. ಪಂದ್ಯ ಮುಕ್ತಾಯಕ್ಕೆ ಕೇವಲ 5 ನಿಮಿಷಗಳಿರುವಾಗ 22-27ರಲ್ಲಿ ಹಿನ್ನಡೆಯಲ್ಲಿದ್ದ ತಮಿಳ್ ತಲೈವಾಸ್ ತಂಡ ಕೊನೇ ಕ್ಷಣದಲ್ಲಿ ಅಮೋಘ ಆಟ ಪ್ರದರ್ಶಿಸಿ ಲೀಗ್’ನಲ್ಲಿ ಮೊದಲ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು. ನಾಯಕ ಪವನ್ ಸೆಹ್ರಾವತ್ ಮೊದಲ ಪಂದ್ಯದಲ್ಲೇ ಪಾದದ ಗಾಯಕ್ಕೊಳಗಾಗಿ ಬಹುತೇಕ ಪಂದ್ಯಗಳಿಗೆ ಅಲಭ್ಯರಾಗಿರುವ ಕಾರಣ, ತಲೈವಾಸ್ ಪಡೆ ಸ್ಟಾರ್ ಆಟಗಾರನ ಅನುಪಸ್ಥಿತಿಯಲ್ಲಿ ಆಡುತ್ತಿದೆ.

ಮತ್ತೊಂದೆಡೆ ಲೀಗ್’ನಲ್ಲಿ 4ನೇ ಸೋಲು ಕಂಡ ಪಾಟ್ನಾ ಪೈರೇಟ್ಸ್ ತಂಡ ಗೆಲುವಿನ ಖಾತೆ ತೆರೆಯಲು ಮತ್ತೆ ವಿಫಲವಾಯಿತು. ಆಡಿರುವ 5 ಪಂದ್ಯಗಳಲ್ಲಿ 4 ಸೋಲು ಕಂಡಿರುವ ಪಾಟ್ನಾ ಬಳಗ, ಒಂದು ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ ಹರ್ಯಾಣ ಸ್ಟೀಲರ್ಸ್ ವಿರುದ್ಧ 38-36ರ ಅಂತರದಲ್ಲಿ ರೋಚಕ ಗೆಲುವು ಸಾಧಿಸಿ ಸತತ 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ದಬಾಂಗ್ ಡಲ್ಲಿ ತಂಡದ ಸ್ಟಾರ್ ರೇಡರ್ ನವೀನ್ ಕುಮಾರ್ 15 ಅಂಕಗಳನ್ನು ಗಳಿಸಿ ಮತ್ತೊಮ್ಮೆ ತಂಡದ ಗೆಲುವಿಗೆ ಕಾರಣರಾದರು.

ಪ್ರೊ ಕಬಡ್ಡಿ ಲೀಗ್’ನಲ್ಲಿ ಮಂಗಳವಾರ ಎರಡು ಪಂದ್ಯಗಳು ನಡೆಯಲಿದ್ದು, ದಿನದ ಮೊದಲ ಪಂದ್ಯದಲ್ಲಿ ಮೊದಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ 7ನೇ ಆವೃತ್ತಿಯ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು ಮುಖಾಮುಖಿಯಾಗಲಿವೆ.

ಪ್ರೊ ಕಬಡ್ಡಿ ಲೀಗ್-9: ಮಂಗಳವಾರದ ಪಂದ್ಯಗಳು (ಅಕ್ಟೋಬರ್ 18)

  1. ಬೆಂಗಾಲ್ ವಾರಿಯರ್ಸ್ Vs ಜೈಪುರ ಪಿಂಕ್ ಪ್ಯಾಂಥರ್ಸ್
  2. ತೆಲುಗು ಟೈಟನ್ಸ್ Vs ಪುಣೇರಿ ಪಲ್ಟನ್

ಇದನ್ನೂ ಓದಿ : Pro Kabaddi League: ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್’ಗೆ ಸತತ 2ನೇ ಸೋಲು, ಯೋಧಾ ವಿರುದ್ಧ ಸೋತ ಗೂಳಿಗಳು

ಇದನ್ನೂ ಓದಿ : Australia announced new captain : ಟಿ20 ವಿಶ್ವಕಪ್ ಮಧ್ಯೆಯೇ ಹೊಸ ನಾಯಕನನ್ನು ಘೋಷಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

Tamil Thalaivas win 33-32 vs Patna Pirates Pro Kabaddi 2022

Comments are closed.