ಶಾಲಾ ವಿದ್ಯಾರ್ಥಿಗಳಿಗೆ 10 ದಿನಗಳ ಕ್ರಿಸ್ಮಸ್ ರಜೆ ವಿಚಾರ : ಧರ್ಮಸಂಘರ್ಷಕ್ಕೆ ಇಳಿದ ಶ್ರೀರಾಮಸೇನೆ
ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹಿಂದೂ ಮಾಲೀಕತ್ವದ ಖಾಸಗಿ ಶಾಲೆಗಳಲ್ಲಿ ಎಲ್ಲಾ ಶಾಲೆಗಳಂತೆಯೇ ದಸರಾ ಹಬ್ಬದ ಸಂದರ್ಭದಲ್ಲಿ 10 ದಿನಗಳ ರಜೆ ನೀಡಿದರೆ ಕ್ರಿಶ್ಚಿಯನ್ ಸಂಸ್ಥೆಯ ಶಾಲೆಗಳಲ್ಲಿ ಈ ರಜೆಯನ್ನು ಕ್ರಿಸ್ಮಸ್ ಹಬ್ಬದಂದು ನೀಡುವ ಪರಿಪಾಠ ರಾಜ್ಯದಲ್ಲಿದೆ. ಇದರ ವಿರುದ್ಧ ಸಮರ ಸಾರಿರುವ ಶ್ರೀರಾಮಸೇನೆಯು ಕ್ರಿಶ್ಚಿಯನ್ ಶಾಲೆಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ 10 ದಿನಗಳ ರಜೆ ನೀಡುವ ಕ್ರಮದ ವಿರುದ್ಧ ಧರ್ಮ ಸಂಘರ್ಷಕ್ಕೆ ಮುಂದಾಗಿದೆ.
ರಾಜ್ಯ ಸರ್ಕಾರದ ಪ್ರಕಾರ ಕ್ರಿಸ್ಮಸ್ ಹಬ್ಬಕ್ಕೆ ಕೇವಲ 1 ದಿನದ ರಜೆ ಮಾತ್ರ ನೀಡಬೇಕು. ಆದರೆ ರಾಜ್ಯದಲ್ಲಿರುವ ಕ್ರಿಶ್ಚಿಯನ್ ಶಾಲೆಗಳಲ್ಲಿ ದಸರಾ ಹಬ್ಬದ ರಜೆಯನ್ನು ಕಡಿತಗೊಳಿಸಿ ಈ ರಜೆಯನ್ನು ಕ್ರಿಸ್ಮಸ್ ಹಬ್ಬಕ್ಕೆ ನೀಡಲಾಗುತ್ತಿದೆ. ಕ್ರಿಶ್ಚಿಯನ್ ಶಾಲೆಗಳಾಗಿದ್ದರೂ ಸಹ ಇಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹೆಚ್ಚಾಗಿ ಹಿಂದೂಗಳೇ ಇರುತ್ತಾರೆ. ಹೀಗಿರುವಾಗ ಹಿಂದೂ ಧರ್ಮದ ಹಬ್ಬಕ್ಕೆ ರಜೆ ಕಡಿತಗೊಳಿಸಿ ಕ್ರಿಶ್ಚಿಯನ್ ಧರ್ಮದ ಹಬ್ಬಕ್ಕೆ ರಜೆ ನೀಡುವ ಶಾಲೆಗಳ ವಿರುದ್ಧ ಕ್ರಮಕ್ಕೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರು ಹಾಗೂ ಬೆಂಗಳೂರು ಭಾಗಗಳಲ್ಲಿ ಈ ವಿಚಾರವಾಗಿ ಸೋಮವಾರದಿಂದ ಪ್ರತಿಭಟನೆಗೆ ಶ್ರೀರಾಮಸೇನೆ ನಿರ್ಧರಿಸಿದೆ. ಈಗಾಗಲೇ ಬೆಂಗಳೂರಿನ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿರುವ ಶ್ರೀರಾಮಸೇನೆ ಕ್ರಿಸ್ಮಸ್ ಹಬ್ಬಕ್ಕೆ 1 ದಿನಕ್ಕಿಂತ ಜಾಸ್ತಿ ರಜೆ ನೀಡುವ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವಿಮಾನಯಾನಕ್ಕೆ ₹47 ಕೋಟಿಗೂ ಅಧಿಕ ಖರ್ಚು ಮಾಡಿದ ಸ’ಮಜಾ’ವಾದಿ ಸಿಎಂ ಸಿದ್ದರಾಮಯ್ಯ..!
ಹಿಂದೂಗಳ ಹಬ್ಬದಂದು ಇರುವ ರಜೆಯನ್ನು ಕಡಿತಗೊಳಿಸಿ ಕ್ರಿಶ್ಚಿಯನ್ ಹಬ್ಬಕ್ಕೆ ರಜೆ ನೀಡಲಾಗುತ್ತಿದೆ. ಈ ರೀತಿ ಮಾಡುವಂತೆ ಸರ್ಕಾರದಿಂದ ಯಾವುದೇ ಕ್ರಮ ಇಲ್ಲವಾದರೂ ಸಹ ಸ್ವಯಂ ಪ್ರೇರಿತರಾಗಿ ಖಾಸಗಿ ಶಾಲೆಗಳಲ್ಲಿ ಕ್ರಿಸ್ಮಸ್ ರಜೆಯ ಪರಿಪಾಠವಿದೆ. ಇದನ್ನು ಬಂದ್ ಮಾಡಿಸಿದೇ ಸಿದ್ಧ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಸವಾಲ್ ಹಾಕಿದ್ದಾರೆ.



