700 ಜನರಿಗೆ ನಿತ್ಯ ಅನ್ನದಾನ ಮಾಡ್ತಿದ್ದ ಜ್ಯೋತಿಷಿ ಕಮಲಾಕರ್! ರೀಲ್ಸ್ ರಾಣಿ ಜೊತೆ ಅಕ್ರಮ ಸಂಬಂಧ-ಕೊಲೆ ಆರೋಪಿ!
Astrologer Kamalakar Bhat Suchitra Naik case update: ಸಿದ್ದಾಪುರ: ಸಮಾಜದಲ್ಲಿ ‘ಗುರೂಜಿ’ ಎಂದೇ ಗುರುತಿಸಿಕೊಂಡು, ದಿನವೂ ನೂರಾರು ಹಸಿದ ಹೊಟ್ಟೆಗಳಿಗೆ ಅನ್ನ ನೀಡುತ್ತಿದ್ದ ವ್ಯಕ್ತಿಯೊಬ್ಬ ಇಂದು ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಪಾಲಾಗಿದ್ದಾನೆ. ಸಿದ್ದಾಪುರದ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅವರ ಜೀವನದಲ್ಲಿ ನಡೆದ ಈ ದಿಢೀರ್ ತಿರುವು ಇಡೀ ಉತ್ತರ ಕನ್ನಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.
ಬಡತನದಲ್ಲಿ ಬೆಳೆದು ಕೇರಳದಲ್ಲಿ ವೇದ-ಜ್ಯೋತಿಷ್ಯ ಕಲಿತಿದ್ದ ಕಮಲಾಕರ್ ಭಟ್, ಸಮಾಜ ಸೇವೆಯ ಮೂಲಕ ದೊಡ್ಡ ಹೆಸರನ್ನು ಗಳಿಸಿದ್ದರು. ಸ್ಲಂ ಮತ್ತು ಅನಾಥಾಶ್ರಮಗಳಿಗೆ ಓಮ್ನಿ ವ್ಯಾನ್‌ಗಳ ಮೂಲಕ ದಿನವೂ ಸುಮಾರು 700 ಜನರಿಗೆ ಉಚಿತ ಊಟ ತಲುಪಿಸುವ “ನಿತ್ಯಪೂಜೆ ಭಿಕ್ಷಾ ಪಾತ್ರೆ” ಎಂಬ ಅಭಿಯಾನ ನಡೆಸುತ್ತಿದ್ದರು. ಕ್ಯಾನ್ಸರ್ ರೋಗಿಗಳಿಗೆ ನೆರವು, ಪರಿಸರ ರಕ್ಷಣೆ ಮುಂತಾದ ಕಾರ್ಯಗಳಿಂದಾಗಿ ಇವರು ಜನರ ಪಾಲಿಗೆ ಸಂತರಂತೆ ಕಂಡಿದ್ದರು.
ಆದರೆ ಈ ಸೇವೆಯ ಮುಖವಾಡದ ಹಿಂದೆ ಅಕ್ರಮ ಸಂಬಂಧದ ಕರಾಳ ಹಾದಿಯಿತ್ತು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ನಾಯ್ಕ್ ಎಂಬುವವರ ಪತ್ನಿ ಸುಚಿತ್ರಾರನ್ನು ಜ್ಯೋತಿಷ್ಯದ ಹೆಸರಲ್ಲಿ ತನ್ನ ಮರುಳಾಗಿಸಿಕೊಂಡ ಭಟ್, ಆಕೆಯ ಸುಂದರ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಗುರೂಜಿಯ ವ್ಯಾಮೋಹಕ್ಕೆ ಬಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಸಿದ್ದಾಪುರದಿಂದ ಶಿವಮೊಗ್ಗದಲ್ಲಿದ್ದ ಭಟ್ ಮನೆಯಲ್ಲಿ ಆಶ್ರಯ ಪಡೆದಿದ್ದರು.
ತಾಯಿ ಮತ್ತು ಜ್ಯೋತಿಷಿ ಜೊತೆಗಿದ್ದರೆ, ಅತ್ತ ಮಕ್ಕಳು ಅನಾಥರಾಗಿದ್ದರು. ತಾಯಿಯ ವರ್ತನೆಯಿಂದ ಬೆದರಿದ್ದ ಮಗಳು ಸುಮಶ್ರೀ ತನ್ನ ತಂದೆಗೆ “ಅಪ್ಪಾ ಸೇವ್ ಮೀ” ಎಂದು ರಹಸ್ಯ ಸಂದೇಶ ಕಳುಹಿಸಿದ್ದು ಈ ಪ್ರಕರಣಕ್ಕೆ ದೊಡ್ಡ ತಿರುವು ನೀಡಿತು. ತಂದೆ ಮಹೇಶ್ ತನ್ನ ಮಕ್ಕಳನ್ನು ರಕ್ಷಿಸಿ ಅಣ್ಣ ವಸಂತ್ ನಾಯ್ಕ್ ಮನೆಯಲ್ಲಿ ಇರಿಸಿದ್ದರು.
ಜ್ಯೋತಿಷಿ ಕಮಲಾಕರ್ ಅಕ್ರಮ ಸಂಬಂಧ ಪ್ರಕರಣ: ಶಾಸಕ ಸುರೇಶ್ ಕುಮಾರ್- ಬಿಕೆ ಹರಿಪ್ರಸಾದ್ ನಡುವೆ ತೀವ್ರ ಜಟಾಪಟಿ
ಮಕ್ಕಳನ್ನು ವಾಪಸ್ ಪಡೆಯಲು ಸುಚಿತ್ರಾ ಮತ್ತು ಕಮಲಾಕರ್ ಭಟ್ ಗೂಂಡಾಗಳ ಪಡೆಯೊಂದಿಗೆ ವಸಂತ್ ನಾಯ್ಕ್ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪ್ರತಿನಿತ್ಯ ಅನ್ನದಾನ ಮಾಡುತ್ತಿದ್ದ ಅದೇ ಕೈಗಳು ಅಂದು ರಕ್ತ ಹರಿಸಿದ್ದವು. ಈ ಭೀಕರ ದಾಳಿಯಲ್ಲಿ ವಸಂತ್ ನಾಯ್ಕ್ ಮೃತಪಟ್ಟರೆ, ಮಹೇಶ್ ನಾಯ್ಕ್ ಮತ್ತು ನೆರೆಯ ಯುವಕ ಸಾವು-ಬದುಕಿನ ನಡುವೆ ಹೋರಾಡುವಂತಾಯಿತು.
ಸದ್ಯ ‘ಗುರೂಜಿ’ ಎಂಬ ಗೌರವದ ಸ್ಥಾನದಲ್ಲಿದ್ದ ಕಮಲಾಕರ್ ಭಟ್, ಪ್ರಿಯತಮೆ ಸುಚಿತ್ರಾ ಮತ್ತು ಆಕೆಯ ತಂದೆ ಲೋಕನಾಥ್ ಸೇರಿದಂತೆ ಏಳು ಮಂದಿ ಪೊಲೀಸರ ಅತಿಥಿಯಾಗಿದ್ದಾರೆ. ಒಂದು ಕಾಲದಲ್ಲಿ ನೂರಾರು ಜನರಿಗೆ ಊಟ ಬಡಿಸುತ್ತಿದ್ದ ಜ್ಯೋತಿಷಿ, ಈಗ ಕೃತ್ಯದ ಫಲವಾಗಿ ಜೈಲಿನಲ್ಲಿ ತಟ್ಟೆ ಹಿಡಿಯುವಂತಾಗಿದೆ. ಅಕ್ರಮ ಸಂಬಂಧ ಮತ್ತು ಹಠಮಾರಿ ವರ್ತನೆ ಒಂದು ಹಸನಾದ ಕುಟುಂಬವನ್ನು ಸ್ಮಶಾನವಾಗಿಸಿದೆ.



