ಹಿಂದುಳಿದ ವರ್ಗಗಳ ಬಗ್ಗೆ ರಾಜ್ಯ ಸರಕಾರದ ನಿರ್ಲಕ್ಷ್ಯ : ನೆನಗುದಿಗೆ ಬಿದ್ದಿದೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

0

ಬೆಂಗಳೂರು : ದೇಶದ ಎಷ್ಟೇ ಮುಂದುವರಿದರೂ ಕೂಡ ಹಿಂದುಳಿದ ವರ್ಗಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿ ಇಂದಿಗೂ ಮುಂದುವರಿದಿಲ್ಲ. ಹಿಂದುಳಿದ ವರ್ಗಗಳ ಬಗ್ಗೆ ರಾಜ್ಯದ ಬಿಜೆಪಿ ಸರಕಾರ ನಿರ್ಲಕ್ಷ್ಯವಹಿಸಿದೆಯೆಂಬ ಆರೋಪ ಕೇಳಿಬಂದಿದೆ. ಯಾಕೆಂದ್ರೆ ಕಳೆದ ಮೂರು ವರ್ಷಗಳಿಂದಲೂ ಹಿಂದುಳಿದ ವರ್ಗಗಳ ಆಯೋಗವನ್ನ ರಾಜ್ಯ ಸರಕಾರ ರಚಿಸಿಲ್ಲ. ಮಾತ್ರವಲ್ಲ ಇದೀಗ ರಾಜ್ಯ ಸರಕಾರವೇ ಆಯೋಗ ನೆನಗುದಿಗೆ ಬಿದ್ದಿರುವುದನ್ನು ಒಪ್ಪಿಕೊಂಡಿದೆ.

ಲೆಸ್ಲಿ ಮಿಲ್ಲರ್, ಹಾವನೂರು, ಜಸ್ಟೀಸ್ ಚಿನ್ನಪ್ಪರೆಡ್ಡಿ ಆಯೋಗಗಳಿಂದ ಹಿಡಿದು ವೆಂಕಟಸ್ವಾಮಿ, ದ್ವಾರಕಾನಾಥ್ ಆಯೋಗಗಳವರೆಗೆ ಸತತವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಉನ್ನತಿಗೆ ನೀಡಿದಂತಹ ಅತ್ಯಂತ ವೈಜ್ಞಾನಿಕ ವಿಶ್ಲೇಷಣಾತ್ಮಕ ವರದಿಗಳು ಇಡೀ ದೇಶಕ್ಕೇ ಮಾದರಿಯಾಗಿದೆ, ಇನ್ನು ಮಂಡಲ್ ವರದಿಗೂ ಪೂರಕವಾಗಿ ಹಾಗೂ ಆಧಾರವಾಗಿಯೇ ಇಂದಿಗೂ ಉಳಿದುಕೊಂಡಿದೆ. ಆದರೆ ಕಳೆದ ಮೂರು ವರ್ಷಗಳಿಂದಲೂ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಿಲ್ಲ ಎಂಬುವುದು ಹಿಂದುಳಿದ ವರ್ಗಗಳ ಮುಖಂಡರ ಆರೋಪ.

ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚನೆ ಮಾಡಲಾಗಿತ್ತು. ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದು, ತದನಂತರದಲ್ಲಿ ಆಯೋಗದ ಅವಧಿ ಮುಗಿದರೂ ಕೂಡ ಮತ್ತೆ ಎರಡು ವರ್ಷಗಳ ಕಾಲ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದಲೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚನೆ ಮಾಡಿಲ್ಲ.

ಅದ್ರಲ್ಲೂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರದಲ್ಲಿ ನಿಗಮ ಮಂಡಳಿಗಳಿಗೆ, ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಕಾಪು ಶಾಸಕ ಲಾಲಾಜಿ ಮೆಂಡನ್ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರೂ ಕೂಡ, ತಾಂತ್ರಿಕ ಕಾರಣಗಳಿಂದಾಗಿ ಆದೇಶವನ್ನು ರಾಜ್ಯ ಸರಕಾರ ಹಿಂಪಡೆದಿತ್ತು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗುವವರು ಹೈಕೋರ್ಟ್ ನ್ಯಾಯಾಧೀಶರಾಗುವ ಅರ್ಹತೆ ಅಥವಾ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರಾಗಿರಬೇಕು. ಆದರೆ ಅದೇ ಕಾರಣದಿಂದಾಗಿ ಶಾಸಕ ಲಾಲಾಜಿ ಮೆಂಡನ್ ಅವರ ನೇಮಕಾತಿ ಸಾಧ್ಯವಾಗಿಲ್ಲ. ತದನಂತರದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚನೆ ಮಾಡುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿಲ್ಲ.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಅಧಿಕಾರವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಸುವರ್ಣಯುಗವನ್ನು ಕಂಡಿತ್ತು. ಆದರೆ ತದನಂತರದಲ್ಲಿ ಹಿಂದುಳಿದ ವರ್ಗಕ್ಕೆ ಹೇಳಿಕೊಳ್ಳುವಂತಹ ಮಹತ್ವ ಕೊಟ್ಟಿರಲಿಲ್ಲ. ಅದ್ರಲ್ಲೂ ಕಳೆದ ಮೂರು ವರ್ಷಗಳಲ್ಲಿ ಆಯೋಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಆಯೋಗಕ್ಕೆ ನೀಡಿದ 200 ಕೋಟಿ ಅನುದಾನದಲ್ಲಿ ಜಾತೀವಾರು ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯ ವರದಿ ಇಂದಿಗೂ ಅನುಷ್ಟಾನಗೊಂಡಿಲ್ಲ.

ಈ ನಡುವಲ್ಲೇ ಕೇಂದ್ರ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರಾಗಿರುವ ಜಸ್ಟೀಸ್ ಜಿ. ರೋಹಿಣಿ ಅವರು ರಾಜ್ಯ ಸರಕಾರಕ್ಕೆ ಪತ್ರವನ್ನು ಬರೆದಿದ್ದು, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕ್ಷೇಮಾಭಿವೃದ್ದಿಗಾಗಿ ಹಿಂದುಳಿದ ವರ್ಗಗಳ ಆಯೋಗ ಯಾವೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂಬ ವರದಿಯನ್ನು ಕೇಳಿದ್ದಾರೆ.

ಆದರೆ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆರೋಗ ಕಾರ್ಯನಿರ್ವಹಿಸುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಮತ್ತೆ ಪತ್ರ ಬರೆದಿರುವ ಜಸ್ಟೀಸ್ ಜಿ. ರೋಹಿಣಿ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರೂಪಿಸಿರುವ ಕಾರ್ಯಕ್ರಮಗಳ ವರದಿಯನ್ನು ಕೇಳಿದ್ದಾರೆ.

ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಜಾರಿಗೆ ತಂದಿರುವ ಆಯೋಗವನ್ನು ರಚನೆ ಮಾಡದಿರುವ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನಾದ್ರೂ ರಾಜ್ಯ ಸರಕಾರ ಹಿಂದುಳಿದ ವರ್ಗಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಯೋಗವನ್ನು ರಚನೆ ಮಾಡಬೇಕೆಂಬ ಕೂಗು ಕೇಳಿಬಂದಿದೆ.

Leave A Reply

Your email address will not be published.