Hijab Case : ನಾಳೆ ಹಿಜಾಬ್ ಪ್ರಕರಣದ ಹೈಕೋರ್ಟ್ ತೀರ್ಪು: ಬೆಂಗಳೂರು ಸೇರಿ ರಾಜ್ಯದಾದ್ಯಂತ ಹೈ ಅಲರ್ಟ್

ಬೆಂಗಳೂರು : ಕಳೆದ ಎರಡು‌ ಮೂರು ತಿಂಗಳಿನಿಂದ ರಾಜ್ಯದಾದ್ಯಂತ ಸಂಚಲನ ಮೂಡಿಸಿ, ಕೋಮುಸಾಮರಸ್ಯ ಕದಡಿದ್ದ ಹಿಜಾಬ್ ಪ್ರಕರಣಕ್ಕೆ (Hijab Case ) ತಾರ್ಕಿಕ ಅಂತ್ಯ ಸಿಗುವ ಕಾಲ ಸನ್ನಿಹಿತವಾಗಿದ್ದು, ಸುದೀರ್ಘ ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್ ಮಂಗಳವಾರ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ. ಹಿಜಾಬ್ ವಿವಾದ ಕುರಿತಂತೆ ಒಟ್ಟು 11 ದಿನಗಳ ಕಾಲ ಹೈಕೋರ್ಟ್ ವಿಸ್ತೃತ ಪೀಠದಲ್ಲಿ ನಡೆದ ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಲಾಗಿತ್ತು. ಹಿಜಾಬ್‌ಗೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣಪೀಠ ಸುದೀರ್ಘ ವಿಚಾರಣೆ ನಡೆಸಿತ್ತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ದೇವದತ್ ಕಾಮತ್, ರವಿವರ್ಮ ಕುಮಾರ್, ಸುಭಾಷ್ ಝಾ, ಮಹಮ್ಮದ್ ತಾಹೀರ್ ವಾದ ಮಂಡನೆ ಮಾಡಿದರು. ಅಲ್ಲದೇ ಕಾಲೇಜು ಪರ ವಕೀಲರು ಹಾಗೂ ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ಪ್ರತಿವಾದ ಮಂಡಿಸಿ ಸರ್ಕಾರದ ನಿರ್ಧಾರವನ್ನ ಸ್ಪಷ್ಟಪಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ತ್ರಿ ಸದಸ್ಯ ಪೀಠ ತೀರ್ಪು ಕಾಯ್ದಿರಿಸಿದ್ದು, ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ. ಇದೀಗ ಸರ್ಕಾರ, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಚಿತ್ತ ಹೈಕೋರ್ಟ್ ನತ್ತ ನೆಟ್ಟಿದೆ.

ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿ ಕಾಲೇಜಿಗೆ ದಾಖಲಾದ ದಿನದಿಂದಲೂ ಹಿಜಾಬ್ ಧರಿಸುತ್ತಿದ್ದರು. ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸುತ್ತಿದ್ದರು. ವಿದ್ಯಾರ್ಥಿನಿಯರು ಈ ಆಚರಣೆಯನ್ನು ತಪ್ಪದೇ ಪಾಲಿಸುತ್ತಿದ್ದಾರೆ. ಹಿಜಾಬ್ ಧರಿಸಬೇಕು, ಉದ್ದದ ನಿಲುವಂಗಿ ಧರಿಸಬೇಕೆಂದು ಧರ್ಮಗ್ರಂಥದಲ್ಲಿದೆ ಎಂದು ದೇವದತ್ ಕಾಮತ್ ವಾದ ಮಂಡಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮಕುಮಾರ್ ವಾದ ಮಂಡಿಸಿ, ಕಾಲೇಜು ಅಭಿವೃದ್ದಿಗೆ ಶಾಸನಬದ್ಧ ಅಧಿಕಾರವಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ಸಿಡಿಸಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಶಾಸಕರ ನೇತೃತ್ವದ ಅಭಿವೃದ್ಧಿ ಸಮಿತಿ ಸಮರ್ಥಿಸಿಕೊಂಡಿದ್ದಾರೆ. ಸಿಡಿಸಿಯ ಇತರೆ ಸದಸ್ಯರನ್ನು ಶಾಸಕರೇ ಆಯ್ಕೆ ಮಾಡುತ್ತಾರೆ. ಶಾಸಕರಿಗೆ ಕಾಲೇಜಿನ ಆಡಳಿತ ನೀಡುವುದೇ ಕಾನೂನುಬಾಹಿರ ಎಂದು ವಾದ ಮಂಡನೆ ಮಾಡಿದ್ದರು.

ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ತಮ್ಮ ವಾದ ಮಂಡಿಸಿದ್ದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರು, ಹಿಜಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂಬುದನ್ನು ಸಾಬೀತುಪಡಿಸಿಲ್ಲ. ಹೀಗಾಗಿ ಸಮವಸ್ತ್ರ ಸಂಹಿತೆಯ ರಾಜ್ಯ ಸರ್ಕಾರದ ವಾದಕ್ಕೆ ಹೆಚ್ಚಿನ ತೂಕವಿದೆ ಎಂದು ವಾದಿಸಿದರು. ಅಲ್ಲದೆ ವಿಷಯವು ಧರ್ಮದ ಮೂಲ ಅಂಶದ ಭಾಗವಾಗಿದ್ದರೆ ಮಾತ್ರ ಆಚರಣೆಯು ಕಡ್ಡಾಯವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿಯೂ ವಾದ ಮಂಡಿಸಲಾಗುತ್ತಿದೆ ಎಂದು ಎಜಿ ಪ್ರಭುಲಿಂಗ ನಾವದಗಿ ವಾದ ಮಂಡನೆ ಮಾಡಿದ್ದರು.

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಮಾರ್ಚ್‌ನಲ್ಲೇ 7 ದಿನ ಬ್ಯಾಂಕ್‌ ರಜೆ

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಶಿಕ್ಷಣ ಸಚಿವ ಬಿ ಸಿ ನಾಗೇಶ್

( High Court verdict on Hijab case tomorrow, High Alert in Karnataka )

Comments are closed.