Jagdish Shettar join Congress : ಕಾಂಗ್ರೆಸ್ ಗೆ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಬೆಂಗಳೂರು : (Jagdish Shettar join Congress) ಬಿಜೆಪಿ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್‌ ಸೇರ್ಪಡೆಗೊಂಡ ನಂತರದಲ್ಲಿ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಶೆಟ್ಟರ್‌ ಅವರು ಕಾಂಗ್ರೆಸ್ ಟಿಕೆಟ್‌ನೊಂದಿಗೆ ತಮ್ಮ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಗುಜರಾತ್‌ ಮಾದರಿಯಲ್ಲಿಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದ ಬಿಜೆಪಿಗೆ ಬಂಡಾಯದ ಬಿಸಿ ಏರಿದೆ. ಟಿಕೆಟ್‌ ಕೈ ತಪ್ಪಿದ ಕಾರಣ ಹಾಲಿ ಶಾಸಕರು ಪಕ್ಷ ತೊರೆಯುತ್ತಿದ್ದಾರೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಕೂಡ ಟಿಕೆಟ್‌ ಕೈ ತಪ್ಪಿದ ಹಿನ್ನಲೆಯಲ್ಲಿ ಬಿಜೆಪಿ ತೊರೆದು ಇದೀಗ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಹಿರಿಯ ಲಿಂಗಾಯತ ನಾಯಕರನ್ನು ಸಮಾಧಾನಪಡಿಸುವ ಪ್ರಯತ್ನಗಳು ಫಲಕಾರಿಯಾಗದ ಕಾರಣ ಬಿಜೆಪಿಯ ವರಿಷ್ಠರೊಂದಿಗಿನ ಸರಣಿ ಸಭೆಗಳು ವಿಫಲವಾಗಿದ್ದು, ಬಳಿಕ ಶೆಟ್ಟರ್ ಅವರು ಬಿಜೆಪಿ ನಾಯಕರಿಂದ ಅವಮಾನಕ್ಕೊಳಗಾಗಿದ್ದೇನೆ. ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಮತ್ತು ಪಕ್ಷವನ್ನು ತೊರೆಯುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಕರ್ನಾಟಕದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಶಾಸಕ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಜಗದೀಶ್ ಶೆಟ್ಟರ್ ಅಧಿಕೃತವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಭಾನುವಾರ ತಮ್ಮ ನಿವಾಸ ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.

ಇದನ್ನೂ ಓದಿ : Karnataka Ranaranga : ವರುಣಾದಲ್ಲಿ ಸಿದ್ದರಾಮಯ್ಯನನ್ನ ಸೋಲಿಸಿದರೆ 50 ಲಕ್ಷ ಹಣ ನೀಡುತ್ತೇನೆ : ರೈತನೋರ್ವನಿಂದ ಬಹಿರಂಗ ಸವಾಲು

ಏತನ್ಮಧ್ಯೆ, ನಾಮಪತ್ರ ಸಲ್ಲಿಕೆಗೆ ಮೂರು ದಿನಗಳು ಮಾತ್ರ ಬಾಕಿಯಿರುವ ಕಾರಣ, ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಬಲ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಇಂದು ಹೆಚ್ಚಿನ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. ವಿಧಾನಸಭಾ ಚುನಾವಣೆಗೆ ಇನ್ನೂ ಕೂಡ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಯಾಗಿಲ್ಲ. ನಾಮಪತ್ರ ಸಲ್ಲಿಕೆಗೆ ದಿನಗಳು ಕಡಿಮೆ ಇರುವ ಕಾರಣ ಪಕ್ಷಗಳು ಉಳಿದ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

Jagdish Shettar join Congress: Former CM Jagdish Shettar joined Congress

Comments are closed.