Kannada Rajyotsava 2022: ಚೆಲುವ ಕನ್ನಡ ನಾಡನ್ನು ಬಣ್ಣಸಿದ್ದ ಹುಯಿಲಗೋಳ ನಾರಾಯಣರಾವ್ ಅವರ ಬದುಕೇ ಒಂದು ರೋಚಕ..!

Kannada Rajyotsava 2022: ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’.. ಈ ಗೀತೆಯನ್ನು ಬಹುಶಃ ಕೇಳದವರೇ ಇಲ್ಲ.. ಕನ್ನಡ ನಾಡಿನ ಮೂಲೆಮೂಲೆಗಳಲ್ಲೂ ಕನ್ನಡದ ಕಂಪನ್ನು ಬೀರಿರುವ ಈ ಹಾಡನ್ನು ಕೇಳಲಿಲ್ಲವೆಂದರೇ ನ್ಯಾಯವೇ.? ಈ ಗೀತೆಯ ರಚನಕಾರರು ಹುಯಿಲಗೋಳ ನಾರಾಯಣರಾವ್ ಅವರು. ಅಂದಿನ ಕಾಲಘಟ್ಟದಲ್ಲಿ ಈ ಗೀತೆ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿಏಕತೆಯ ಮಂತ್ರ ಪಠಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇಂದಿಗೂ ಈ ಹಾಡು ಅಷ್ಟೆ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ನಾರಾಯಣರಾವ್ ಅವರ ಕವಿತ್ವಕ್ಕೆ ಹಿಡಿದ ಕೈಗನ್ನಡಿ. ಬಹುಮುಖ ಪ್ರತಿಭೆ.. ಹೋರಾಟಗಾರ.. ಛಲವಾದಿ.. ಇವರ ಬದುಕೇ ಒಂದು ರೋಚಕ..

1884ರ ಅಕ್ಟೋಬರ್ 4ರಂದು ಗದಗದಲ್ಲಿ ಕೃಷ್ಣರಾಯರು ಮತ್ತು ರಾಧಾಬಾಯಿ ದಂಪತಿಗೆ ಮಗನಾಗಿ ಜನಿಸಿದರು. ಬಾಲ್ಯದ ಶಿಕ್ಷಣವನ್ನು ಧಾರವಾಡ, ಗದಗ, ಗೋಕಾಕ್ ನಲ್ಲಿ ಪಡೆದ ಇವರು 1902ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆ ಮುಗಿಸಿ ಪುಣೆಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಾರೆ. 1907ರಲ್ಲಿ ಪದವಿ ಮುಗಿಸಿ ಧಾರವಾಡದ ವಿಕ್ಟೋರಿಯಾ ಶಾಲೆಯಲ್ಲಿ ಶಿಕ್ಷಕರಾಗಿ ಸೇರುತ್ತಾರೆ. ಕೆಲವೇ ದಿನಗಳಲ್ಲಿ ಆ ವೃತ್ತಿಯನ್ನು ತ್ಯಜಿಸಿ ಮುಂಬೈನಲ್ಲಿ ಕಾನೂನು ಪದವಿ ಪಡೆದು 1911ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸುತ್ತಾರೆ.

ಮೊದಲು ಶಿಕ್ಷಕನಾಗಿ ಬಳಿಕ ವಕೀಲನಾಗಿ ಸೇವೆ ಸಲ್ಲಿಸಿದ ಇವರು ನಾಟಕಕಾರರಾಗಿಯೂ ಮಿಂಚುತ್ತಾರೆ. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಸಾಮಾಜಿಕ, ಪೌರಾಣಿಕ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶನ ಮಾಡುತ್ತಾರೆ. ಕನಕ ವಿಲಾಸ, ಪ್ರೇಮಾರ್ಜುನ, ಮೋಹಹರಿ, ಅಜಾತವಾಸ, ಪ್ರೇಮ ವಿಜಯ, ಸಂಗೀತ, ಕುಮಾರರಾಮ ಚರಿತ, ವಿದ್ಯಾರಣ್ಯ, ಭಾರತ ಸಂಧಾನ, ಉತ್ತರ ಗೋಗ್ರಹಣ, ಸ್ರೀಧರ್ಮ ರಹಸ್ಯ, ಶಿಕ್ಷಣ ಸಂಭ್ರಮ, ಪತಿತೋದ್ಧಾರ ಇವರ ಪ್ರಮುಖ ನಾಟಕಗಳು.. ಇಷ್ಟೆ ಅಲ್ಲದೇ ನಾಟಕಗಳ ಸನ್ನಿವೇಶಗಳಿಗೆ ಅನುಗುಣವಾಗಿ ಗೀತೆಗಳನ್ನೂ ರಚಿಸಿ ಸೈ ಎನಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Kannada Rajyotsava 2022: ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಬಗ್ಗೆ ನಿಮಗೆಷ್ಟು ಗೊತ್ತು

ಹುಯಿಲಗೋಳ ನಾರಾಯಣರಾವ್ ಅವರು ಸಕಲಕಲಾವಲ್ಲಭರು. ಆಡುಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಇವರು ಕೈಹಾಕದ ಕ್ಷೇತ್ರಗಳೇ ಇಲ್ಲವೇನೋ.. ಕೆಲ ಕವನಗಳನ್ನೂ ಬರೆದಿದ್ದ ಇವರು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ, ಪ್ರಭಾತ, ಧನಂಜಯ ಎಂಬ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಕವನವಷ್ಟೇ ಯಾಕೆ..? ಮೂಡಲ ಹರಿಯಿತು ಎಂಬ ಕಾದಂಬರಿಯನ್ನು ಕೂಡಾ ಇವರು ಬರೆದಿದ್ದರು. ನಾರಾಯಣರಾವ್ ಅವರು ರಚಿಸಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ’ ಅಂದು ಕರ್ನಾಟಕದ ಏಕೀಕರಣಕ್ಕೆ ಭದ್ರ ಬುನಾದಿ ಹಾಕಿತ್ತು. ಈ ಗೀತೆ ಅಂದು ಕರ್ನಾಟಕದ ನಾಡಗೀತೆಯೆಂದೇ ಖ್ಯಾತಿ ಪಡೆದಿತ್ತು. 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ಹಾಡು ಪ್ರತಿಧ್ವನಿಸಿತ್ತು. ಆಗಿನ್ನೂ ಬಾಲಕಿಯಾಗಿದ್ದ ದಿವಂಗತ ಗಂಗೂಬಾಯಿ ಹಾನಗಲ್ ಅವರ ಅದ್ಭುತ ಕಂಠದಲ್ಲಿ ಈ ಕನ್ನಡದ ಗೀತೆ ಮೊಳಗಿತ್ತು. ಇಂದಿಗೂ ಈ ಗೀತೆಯನ್ನು ಕೇಳಿದಾಗೆಲ್ಲಾ ಪ್ರತಿಯೊಬ್ಬ ಕನ್ನಡಿಗನೂ ರೋಮಾಂಚನಗೊಳ್ಳುವನು. ಈ ಹಾಡಿನ ಶಕ್ತಿಯೇ ಅಂಥದ್ದು.

ಏರಿಸಿರಿ ಹಾರಿಸಿರಿ ಭಾರತದ ನಾಡಗುಡಿ, ಮೂರು ಬಣ್ಣದ ಧ್ವಜಕೆ ಜಯವೆಂದು ಭೇರಿ ಹೊಡಿ.. ಈ ದೇಶಭಕ್ತಿಗೀತೆಯ ಮೂಲಕ ಕನ್ನಡಿಗರ ನರನಾಡಿಗಳಲ್ಲಿ ನಾಡಿನ ಬಗ್ಗೆ ಪ್ರೇಮಬೀಜ ಬಿತ್ತಿದವರೇ ನಾರಾಯಣರಾವ್ ಅವರು. ಕೆಲ ಭಕ್ತಿಗೀತೆಗಳನ್ನೂ ಬರೆದಿದ್ದ ಇವರು ಅವುಗಳಿಗೆ ಸ್ವತಃ ರಾಗ ಸಂಯೋಜನೆಯನ್ನೂ ಮಾಡಿದ್ದರು. ನಾಟಕ ಪ್ರದರ್ಶನದಿಂದ ಬಂದ ಹಣದಿಂದ ಇಂದಿನ ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದರು. ವಿವಿಧ ಕ್ಷೇತ್ರಗಳಲ್ಲಿನ ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳೂ ಸಂದಿವೆ. ಹೀಗೆ ಕನ್ನಡ ನಾಡಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದ ಇವರು 1971ರ ಜುಲೈ 4ರಂದು ಹುಬ್ಬಳ್ಳಿಯಲ್ಲಿ ನಿಧನ ಹೊಂದಿದ ಇವರು ಎಂದಿಗೂ ಮರೆತೂ ಮರೆಯಬಾರದ ಬಹುಮುಖ ಪ್ರತಿಭೆ..

Kannada Rajyotsava 2022: The life of Huilagola Narayana Rao, who painted the beautiful Kannada country, is an exciting one

Comments are closed.