ಕರ್ನಾಟಕ ಬಿಜೆಪಿಯಲ್ಲಿ ಭರ್ಜರಿ ಸರ್ಜರಿ : ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್, ಹಾಲಿ ಶಾಸಕರಿಗೆ ಟೆನ್ಶನ್

ಬೆಂಗಳೂರು : (Karnataka MLA Election 2023) ಇನ್ನು ಕೇವಲ ಆರು ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಬರಲಿದ್ದು ಎಲ್ಲಾ ಪಕ್ಷಗಳೂ ತಮ್ಮ ಗೆಲುವಿಗಾಗಿ ಕಸರತ್ತು ಪ್ರಾರಂಭಿಸಿವೆ. ಒಂದೆಡೆ ಕಾಂಗ್ರೆಸ್ ರಾಹುಲ್ ಗಾಂಧಿ ಜೊತೆಗೂಡಿ ಭಾರತ್ ಜೋಡೋ ಯಾತ್ರೆ ಮಾಡಿದರೆ ಇನ್ನೊಂದೆಡೆ ಜೆಡಿಎಸ್ ಸಮಾವೇಶಗಳ ಬೆನ್ನು ಹತ್ತಿದೆ. ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರೇ ಆಯ್ಕೆಯಾಗಿರುವುದರಿಂದ ರಾಜ್ಯ ರಾಜಕಾರಣದಲ್ಲಿ ಇದು ಹೊಸ ಚರ್ಚೆಗೆ ಮುನ್ನುಡಿಯಾಗಿದೆ.

ಕರ್ನಾಟಕದ ದಲಿತ ನಾಯಕರನ್ನು ಕಾಂಗ್ರೆಸ್ ತನ್ನ ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದರಿಂದ ಬಿಜೆಪಿಯ ಲೆಕ್ಕಾಚಾರಗಳು ತಲೆಕೆಳಗಾಗಿದ್ದು ಈ ನಡೆ ಬಿಜೆಪಿಗೆ ಬಹುದೊಡ್ಡ ಸವಾಲಾಗಿರುವುದಂತೂ ಸತ್ಯ. ಈ ಹೊಡೆತದಿಂದ ತಪ್ಪಿಸಿಕೊಳ್ಳಲು ಕೇಂದ್ರದ ಬಿಜೆಪಿ ನಾಯಕರು ಚುನಾವಣೆಗೆ ಆರು ತಿಂಗಳ ಮೊದಲೇ ಗುಟ್ಟಾಗಿ ಟಿಕೆಟ್ ಫೈನಲ್ ಮಾಡುವ ಪ್ರಕ್ರೀಯೆಯನ್ನು ಪ್ರಾರಂಭಿಸಿದೆ ಎನ್ನುವುದು ಈಗ ಜಗನ್ನಾಥ ಭವನದಲ್ಲಿ ಕೇಳಿ ಬರುತ್ತಿರುವ ಬಿಸಿ ಬಿಸಿ ಸುದ್ದಿ.

ಬಿಜೆಪಿ ಹೈಕಮಾಂಡ್ ಎಂದರೆ ಹಾಗೆ ಯಾರಿಗೂ ಸುಳಿವು ನೀಡದೆ ದಿಢೀರ್ ಎಂದು ರಾಜ್ಯ ನಾಯಕರಿಗೆ ಶಾಕ್ ಕೊಡುವಂತಹ ನಿರ್ಧಾರ ತೆಗೆದುಕೊಂಡು ಸಂಪೂರ್ಣ ಚುನಾವಣೆ ಯನ್ನು ತಮ್ಮ ಇಚ್ಛೆಯಂತೆ ಮುನ್ನಡೆಸುತ್ತಾರೆ. ಕೇಂದ್ರದಲ್ಲಿ ಮೋದಿ – ಅಮಿತ್ ಷಾ ಜೋಡಿ ಬಂದ ಮೇಲೆ ಬಹುತೇಕ ಬಣ ರಾಜಕೀಯಗಳಿಗೆ ಬ್ರೇಕ್ ಹಾಕಿ ಆನೆ ನಡೆದದ್ದೇ ದಾರಿ ಎಂಬಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿಯೇ ಕರ್ನಾಟಕದಲ್ಲಿ ಜನ ಕೂಡ ರಾಜ್ಯ ಬಿಜೆಪಿ ನಾಯಕರ ಮೇಲೆ ಎಷ್ಟೇ ಅಸಮಾಧಾನ ಇದ್ದರೂ ಕೇಂದ್ರ ನಾಯಕರ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸುತ್ತಿರುವುದು.

ಇದೀಗ ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ರಣತಂತ್ರ ತಯಾರು ಮಾಡುತ್ತಿದ್ದು ಉತ್ತರ ಪ್ರದೇಶ ಮಾದರಿಯಂತೆ 80 ರಿಂದ 100 ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳನ್ನು ಘೋಷಿಸಲು ಬಹುತೇಕ ತಯಾರಿ ಮಾಡಿಕೊಂಡಿದೆ. ಇತ್ತೀಚಿಗಷ್ಟೆ ಕೇಂದ್ರದಿಂದ ಬೆಂಗಳೂರಿಗೆ ರಹಸ್ಯ ತಂಡವೊಂದು ಆಗಮಿಸಿ ಹೊಸ ಅಭ್ಯರ್ಥಿಗಳ ಶೋಧ ಕಾರ್ಯ ನಡೆಸಿದ್ದು ಬಹುತೇಕರಿಗೆ ಟಿಕೆಟ್ ಅಂತಿಮಗೊಳಿಸುವ ಕುರಿತು ವರದಿ ನೀಡಿದೆಯಂತೆ.

ಹಾಲಿ ಶಾಸಕರುಗಳಿಗೆ ಢವ ಢವ :
ಈಗಾಗಲೇ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡದ, ಕಾರ್ಯಕರ್ತರ ವಿರೋಧ ಎದುರಿಸುತ್ತಿರುವ ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡದಂತೆ ಕೇಂದ್ರದ ತಂಡ ವರದಿ ನೀಡಿದೆಯಂತೆ. ಈಗಾಗಲೇ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಿಂದ ಪಕ್ಷಕ್ಕೆ ಆಗಿರುವ ಡ್ಯಾಮೇಜ್ ಸರಿಪಡಿಸಿಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿ ಈ ಚುನಾವಣೆಯಲ್ಲಿ 150 ಸೀಟು ಗೆಲ್ಲುವುದಕ್ಕಾಗಿ ಹಾಲಿ ಗೆದ್ದಿರುವ ನಿಷ್ಕ್ರೀಯ ಶಾಸಕರ ತಲೆ ದಂಡ ಮಾಡಲು ಮುಂದಾಗಿದೆ. ಕಳೆದ ವಾರ ಕರ್ನಾಟಕಕ್ಕೆ ಭೇಟಿ ನೀಡಿರುವ ಕೇಂದ್ರದ ತಂಡ ಹಲವಾರು ಹೊಸ ಅಭ್ಯರ್ಥಿಗಳ ಕುರಿತು ಮಾಹಿತಿ ಕಲೆ ಹಾಕಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ವರದಿ ತಯಾರು ಮಾಡಿದೆಯಂತೆ. ಈಗಾಗಲೇ 100 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ತಯಾರಾಗಿದ್ದು ಅದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುವುದೊಂದೇ ಬಾಕಿ ಎನ್ನಲಾಗುತ್ತಿದೆ.

ನವೆಂಬರ್ ಮೊದಲ ವಾರದಲ್ಲೇ ಮೊದಲ ಪಟ್ಟಿ :
ಚುನಾವಣೆಗೆ ಆರು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ತಯಾರು ಮಾಡುವ ಯೋಚನೆಯಲ್ಲಿರುವ ಹೈಕಮಾಂಡ್ ನವೆಂಬರ್ ಮೊದಲ ವಾರದಲ್ಲೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ಆಂತರಿಕ ಮಟ್ಟದಲ್ಲಿ ಫೈನಲ್ ಮಾಡುವ ಸಾಧ್ಯತೆ ಇದೆ. ಬಿಜೆಪಿ ಪ್ರತಿ ಚುನಾವಣೆಯ ಸಂದರ್ಭದಲ್ಲೂ ಆರ್ ಎಸ್ ಎಸ್, ಸಂಘಪರಿವಾರ, ಬಿಜೆಪಿ ನಾಯಕರು ಮತ್ತು ರಹಸ್ಯ ಸಮೀಕ್ಷೆ ಹೀಗೆ ನಾಲ್ಕು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚೆಗೆ ತಂದು ಕನಿಷ್ಠ ಮೂರು ಪಟ್ಟಿಗಳಲ್ಲಿ ಯಾರ ಹೆಸರು ಅಂತಿಮವಾಗುತ್ತದೋ ಅವರಿಗೆ ಟಿಕೆಟ್ ಅಂತಿಮಗೊಳಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದೆ. ಅದರಂತೆ ನವೆಂಬರ್ ಮೊದಲ ವಾರ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದ್ದು ಆ ಬಳಿಕ ರಾಜ್ಯದಲ್ಲಿ ಟಿಕೆಟ್ ಗುದ್ದಾಟ ಕಾವು ಪಡೆದುಕೊಳ್ಳಲಿದೆ. ಏನೇ ಆದರೂ ಈ ಬಾರಿ ಬಿಜೆಪಿ ರಾಜ್ಯದಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಂತೂ ಪಕ್ಕಾ ಎನ್ನುವ ಚರ್ಚೆ ಈಗ ಪಕ್ಷದ ಒಳಗೆ ಜೋರಾಗಿ ಕೇಳಿಬರುತ್ತಿದೆ.

ಇದನ್ನೂ ಓದಿ : ದ.ಕ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಹೊಸ ಮುಖ : ಪುತ್ತೂರು, ಬಂಟ್ವಾಳ ಸೇರಿ ಕಾಂಗ್ರೆಸ್ ನಲ್ಲಿ ಹಳಬರಿಗಿಲ್ಲ ಟಿಕೇಟ್ !

ಇದನ್ನೂ ಓದಿ : Congress Twitter war: ಕೇಂದ್ರದ ಆರ್ಥಿಕತೆಯಿಂದ ರಾಜ್ಯ ಕಂದಾಯ ಸಚಿವರಿಗೆ ಪಕೋಡಾ ಮಾರುವ ಸ್ಥಿತಿ ಬಂದಿದೆ; ಕಾಂಗ್ರೆಸ್ ಲೇವಡಿ

Karnataka MLA Election 2023 BJP Ticket Final For New Candidates Trouble Sitting MLA’s

Comments are closed.