ರಾಜಭವನಕ್ಕೆ ಲೋಕಭವನವೆಂದು ಮರುನಾಮಕರಣ : ಕೇಂದ್ರದ ನಡೆಗೆ ರಾಜ್ಯ ಸರ್ಕಾರದಿಂದ ಆಕ್ಷೇಪ
ದೇಶಾದ್ಯಂತ ಇರುವ ಎಲ್ಲಾ ರಾಜಭವನಗಳನ್ನು ಇನ್ಮುಂದೆ ಲೋಕಭವನ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಅಸಮಾಧಾನ ಹೊರ ಹಾಕಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಸಚಿವ ಎಚ್.ಕೆ ಪಾಟೀಲ್ ಅವರ ನೇತೃತ್ವದಲ್ಲಿ ಸಚಿವರು ಸಭೆ ನಡೆಸಿದ್ದು ಕೇಂದ್ರದ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆಯಲು ನಿರ್ಧರಿಸಿದ್ದಾರೆ.
ರಾಜಭವನ ಎನ್ನುವುದು ಕೇವಲ ರಾಜ್ಯಪಾಲರ ವಾಸಸ್ಥಳವಲ್ಲ. ಸಂವಿಧಾನದಲ್ಲಿ ಇದಕ್ಕೆ ಬಹಳ ಮಹತ್ವವವಿದೆ. ಹೀಗಿರುವಾಗ ರಾಜಭವನದ ಹೆಸರು ಬದಲಾವಣೆ ಮಾಡುವ ಮುನ್ನ ಎಲ್ಲಾ ರಾಜ್ಯಗಳ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಕೇಳಬೇಕಿತ್ತು. ಏಕಾಏಕಿ ರಾಜಭವನಕ್ಕೆ ಲೋಕಭವನ ಎಂದು ಮರುನಾಮಕರಣ ಮಾಡುತ್ತಿರುವ ಉದ್ದೇಶವಾದರೂ ಏನು ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಂದ್ರದ ಮುಂದಿಡಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ.
ಇದನ್ನೂ ಓದಿ: ನಿಷೇಧಿತ ಪಿಎಫ್ಐ – ಎಸ್ಡಿಪಿಐ ಸಂಘಟನೆ ನಡುವೆ ನಂಟಿದೆ ಎಂದ ಕ್ಯಾ. ಬ್ರಿಜೇಶ್ ಚೌಟ ವಿರುದ್ಧ ಗುಡುಗಿದ ಎಸ್ಡಿಪಿಐ
ಇನ್ನು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ರಾಜಭವನದ ಬೋರ್ಡ್ ಬದಲಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಥಾವರ್ಚಂದ್ ಗೆಹ್ಲೋಟ್ ಅವರು ಇರುವ ರಾಜಭವನದ ಫಲಕ ಕೂಡ ಲೋಕಭವನ ಎಂದು ಬದಲಾಗಲಿದೆ.



